#MeToo: ನನ್ನ ಮೇಲಿನ ಆರೋಪ ಸುಳ್ಳು; ರಾಜೀನಾಮೆ ಕೊಡುವುದಿಲ್ಲ: ಎಂ.ಜೆ. ಅಕ್ಬರ್ ಸ್ಪಷ್ಟನೆ

Vijayasarthy SN
Updated:October 14, 2018, 5:34 PM IST
#MeToo: ನನ್ನ ಮೇಲಿನ ಆರೋಪ ಸುಳ್ಳು; ರಾಜೀನಾಮೆ ಕೊಡುವುದಿಲ್ಲ: ಎಂ.ಜೆ. ಅಕ್ಬರ್ ಸ್ಪಷ್ಟನೆ
ಎಂ.ಜೆ. ಅಕ್ಬರ್
  • Share this:
- ನ್ಯೂಸ್18 ಕನ್ನಡ

ನವದೆಹಲಿ(ಅ. 14): ಮಹಿಳಾ ಪತ್ರಕರ್ತೆಯರು ತನ್ನ ಮೇಲೆ ಮಾಡಿರುವ ಲೈಂಗಿಕ ಕಿರುಕುಳದ ಆರೋಪವನ್ನು ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಆರೋಪಗಳೆಲ್ಲವೂ ನಿರಾಧಾರವಾಗಿದ್ದು, ತನ್ನ ತೇಜೋವಧೆಗೆ ನಡೆದಿರುವ ಪ್ರಯತ್ನ ಎಂದು ಬಣ್ಣಿಸಿರುವ ಅವರು ತಾನು ರಾಜೀನಾಮೆ ಕೊಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ತನ್ನ ಮೇಲೆ ಆರೋಪ ಮಾಡಿರುವ ಪತ್ರಕರ್ತೆಯರ ವಿರುದ್ಧ ಕಾನೂನಿನ ಹೋರಾಟ ನಡೆಸುವುದಾಗಿ ರಾಜ್ಯಸಭಾ ಸದಸ್ಯರೂ ಆಗಿರುವ ಅವರು ಹೇಳಿದ್ದಾರೆ.

ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವವರಲ್ಲಿ ಘಜಾಲ ವಹಾಬ್ ಹಾಗೂ ಪ್ರಿಯಾ ರಮಣಿ ಅವರಿದ್ಧಾರೆ. ಹಲವು ಸಂದರ್ಭದಲ್ಲಿ ತಮ್ಮೊಂದಿಗೆ ಇವರು ಅಸಭ್ಯವಾಗಿ ವರ್ತಿಸಿದರೆಂದು ಇವರಿಬ್ಬರು ಆರೋಪಿಸಿದ್ದಾರೆ. ಘಟನೆ ನಡೆದು ತುಂಬಾ ವರ್ಷವಾದರೂ ಈಗ ಸೋಷಿಯಲ್ ಮೀಡಿಯಾದಲ್ಲಿ ವಿಶ್ವಾದ್ಯಂತ #MeToo ಅಭಿಯಾನ ಚಾಲನೆಯಲ್ಲಿರುವ ಹಿನ್ನೆಲೆಯಲ್ಲಿ ವಹಾಬ್ ಮತ್ತು ಪ್ರಿಯಾ ರಮಣಿ ಅವರು ಈಗ ತಮಗಾಗಿದ್ದ ನೋವನ್ನು ಹೊರಹಾಕಿದ್ದಾರೆನ್ನಲಾಗಿದೆ.

ಇವರಿಬ್ಬರು ಆರೋಪ ಮಾಡಿದಾಗ ಎಂ.ಜೆ. ಅಕ್ಬರ್ ಅವರು ಅಧಿಕೃತ ವಿದೇಶ ಪ್ರವಾಸದಲ್ಲಿದ್ದರು. ಇವತ್ತಷ್ಟೇ ಅವರು ಭಾರತಕ್ಕೆ ಹಿಂದಿರುಗಿದ್ದಾರೆ. ಇವರು ವಾಪಸ್ಸಾಗುತ್ತಲೇ ಇವರಿಂದ ರಾಜೀನಾಮೆ ಪಡೆಯಲಾಗುತ್ತದೆ ಎಂಬ ಸುದ್ದಿಯೂ ಇತ್ತು. ಈಗ ಅಕ್ಬರ್ ಅವರು ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ಧಾರೆ. ತಾನ್ಯಾವ ತಪ್ಪೂ ಮಾಡಿಲ್ಲ. ತಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ಧಾರೆ.

ಎಂ.ಜೆ. ಅಕ್ಬರ್ ಅವರು ರಾಜಕಾರಣಕ್ಕೆ ಬರುವ ಮುನ್ನ ಸುದೀರ್ಘ ಕಾಲ ಪತ್ರಕರ್ತರಾಗಿದ್ದರು. ದಿ ಟೆಲಿಗ್ರಾಫ್, ಏಷ್ಯನ್ ಏಜ್, ದಿ ಸಂಡೇ ಗಾರ್ಡಿಯನ್ ಮೊದಲಾದ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಅಕ್ಬರ್ ವಿರುದ್ಧ ಆರೊಪ ಮಾಡಿರುವ ವಹಾಬ್ ಮತ್ತು ಪ್ರಿಯಾ ಇಬ್ಬರೂ ಏಷ್ಯನ್ ಏಜ್ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. “ಪತ್ರಿಕೆಯ ಸಂಪಾದಕೀಯದ ಒಂದು ಭಾಗವು ಚಿಕ್ಕ ಹಾಲ್​ನಲ್ಲಿ ಕೆಲಸ ಮಾಡಬೇಕಿತ್ತು. ಆ ಸಂದರ್ಭದಲ್ಲಿ ನನಗೆ ಒಂದು ಪುಟಾಣೆ ಕೊಠಡಿ ನೀಡಲಾಗಿತ್ತು. ಎರಡು ಅಡಿ ದೂರದಲ್ಲೇ ಬೇರೆಯವರ ಟೇಬಲ್ ಮತ್ತು ಚೇರ್​ಗಳಿರುತ್ತಿದ್ದವು…. ಅಂಥ ಸಣ್ಣ ಜಾಗದಲ್ಲಿ ಯಾರ ಕಣ್ಣಿಗೂ ಬೀಳದೆ ಇಂಥ ಘಟನೆಗಳು ಜರುಗುತ್ತವೆ ಎಂಬುದನ್ನು ಯಾರಾದರೂ ನಂಬಲು ಸಾಧ್ಯವೇ? ಈ ಆರೋಪಗಳು ತಪ್ಪು, ನಿರಾಧಾರ ಮತ್ತು ಕುಪ್ರೇರಿತವಾಗಿವೆ,” ಎಂದು ಎಂ.ಜೆ. ಅಕ್ಬರ್ ಹೇಳಿದ್ದಾರೆ.

ತಾನು ಲೈಂಗಿಕ ಕಿರುಕುಳ ಕೊಟ್ಟಿದ್ದೇ ಆಗಿದ್ದರೆ ಅವರಿಬ್ಬರು ಇನ್ನೂ ಸಾಕಷ್ಟು ಕಾಲ ಹೇಗೆ ಅದೇ ಕಚೇರಿಯಲ್ಲಿ ತನ್ನೊಂದಿಗೆ ಕೆಲಸ ಮುಂದುವರಿಸಿಕೊಂಡು ಹೋದರು? ಹಾಗೆಯೇ, ಇಷ್ಟು ದಿನ ಸುಮ್ಮನಿದ್ದು ಈಗ ಚುನಾವಣೆ ಸಮಯದಲ್ಲಿ ಯಾಕೆ ಇಂಥ ಆರೋಪ ಮಾಡುತ್ತಿದ್ದಾರೆ ಎಂದು ಅಕ್ಬರ್ ಪ್ರಶ್ನಿಸಿದ್ದಾರೆ.

ಆದರೆ, ಸಂದರ್ಶನಕ್ಕಾಗಿ ಹೋಟೆಲ್ ರೂಮಿಗೆ ಕರೆಸಿ ಅಸಭ್ಯವಾಗಿ ವರ್ತಿಸಿದರೆಂದು ಪ್ರಿಯಾ ರಮಣಿ ಮಾಡಿರುವ ಆರೋಪಕ್ಕೆ ಎಂ.ಜೆ. ಅಕ್ಬರ್ ಪ್ರತಿಕ್ರಿಯೆ ಕೊಟ್ಟಿಲ್ಲ.ಮುಂಬೈನ ಲಕ್ಸುರಿ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸಂದರ್ಶನ ಫಿಕ್ಸ್ ಮಾಡಲಾಗಿತ್ತು. ಹೋಟೆಲ್ ಲಾಬಿಯಲ್ಲಿ ಸಂದರ್ಶನ ಮಾಡುವ ಬದಲು ಅಕ್ಬರ್ ಅವರು ತಮ್ಮ ರೂಮಿಗೆ ಕರೆಸಿಕೊಂಡರು. ತಾನು ಅಲ್ಲಿಗೆ ಹೋದಾಗ ಡ್ರಿಂಕ್ಸ್ ಕೊಡಲು ಬಂದರು. ತಾನು ನಿರಾಕರಿಸಿದೆ. ಅವರು ವೊಡ್ಕಾ ಕುಡಿಯುತ್ತಾ ತನಗಾಗಿ ಹಳೆಯ ಹಾಡುಗಳನ್ನ ಹಾಡುತ್ತಿದ್ದರು. ನಂತರ, ತಮ್ಮ ಸಮೀಪ ಕುಳಿತುಕೊಳ್ಳುವಂತೆ ಒತ್ತಾಯಿಸಿದರು ಎಂದು ಪ್ರಿಯಾ ರಮಣಿ ಟ್ವೀಟ್ ಮಾಡಿದ್ದರು.
First published:October 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading