ಬಿಜೆಪಿ VS ವಿರೋಧ ಪಕ್ಷಗಳು: ಭಾರತ ಬಂದ್​ಗೆ ಮಿಶ್ರ ಪ್ರತಿಕ್ರಿಯೆ; ದೇಶಾದ್ಯಂತ ಹೇಗಿದೆ ಬಂದ್​ ಬಿಸಿ?

Sharath Sharma Kalagaru | news18
Updated:September 10, 2018, 9:54 AM IST
ಬಿಜೆಪಿ VS ವಿರೋಧ ಪಕ್ಷಗಳು: ಭಾರತ ಬಂದ್​ಗೆ ಮಿಶ್ರ ಪ್ರತಿಕ್ರಿಯೆ; ದೇಶಾದ್ಯಂತ ಹೇಗಿದೆ ಬಂದ್​ ಬಿಸಿ?
  • News18
  • Last Updated: September 10, 2018, 9:54 AM IST
  • Share this:
ನವದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ಸಾರ್ವಕಾಲಿಕ ದರ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್​ ಕರೆದಿರುವ ಭಾರತ್​ ಬಂದ್​ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೂಪಾಯಿ ಕುಸಿತ, ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಿಂದ ದೇಶಾದ್ಯಂತ ಪೆಟ್ರೋಲ್​ ಬೆಲೆ ರೂ. 83ರ ಗಡಿ ದಾಟಿದ್ದರೆ, ಡೀಸೆಲ್​ ರೂ 76ರ ಗಡಿ ದಾಟಿದೆ.

ರಾಜ್​ಘಾಟ್​ನಲ್ಲಿ ರಾಹುಲ್​ ಗಾಂಧಿ ಪ್ರತಿಭಟನೆ:

ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿ ಮಹಾತ್ಮಾ ಗಾಂಧಿಯವರ ಸಮಾಧಿಗೆ ನಮಿಸಿ ದೆಹಲಿಯ ರಾಜ್​ ಘಾಟ್​ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು ತಕ್ಷಣ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ. ಪೆಟ್ರೋಲ್​ ಹಾಗೂ ಡೀಸೆಲ್​ಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಒಳಗೆ ಸೇರಿಸುವಂತೆ ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿ ಹಲವು ಬಾರಿ ಆಗ್ರಹಿಸಿದ್ದರು. ಆದರೆ ಕೇಂದ್ರ ಈ ಮಾತಿಗೆ ಮನ್ನಣೆ ನೀಡಿರಲಿಲ್ಲ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ನೇತೃತ್ವದ ಜನ ಸೇನಾ ಪಕ್ಷ ಬಂದ್​ಗೆ ಬೆಂಬಲ ನೀಡಿದೆ. ಇಂಧನ ಬೆಲೆ ಏರಿಕೆಯಲ್ಲಿ ಕೇಂದ್ರದ ನಡೆಯನ್ನು ಖಂಡಿಸಿರುವ ಪವನ್​ ಕಲ್ಯಾಣ್​ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಎರಡೂ ರಾಜ್ಯಗಳಲ್ಲಿ ಬಂದ್​ಗೆ ಬೆಂಬಲ ನೀಡುವಂತೆ ಕೋರಿದ್ದಾರೆ. ಆದರೆ ಶಾಂತಿಯುತವಾಗಿ ಪ್ರತಿಭಟಿಸುವಂತೆ ಮನವಿ ಮಾಡಿದ್ದಾರೆ.

ತಮಿಳುನಾಡಿನ ವಿರೋಧ ಪಕ್ಷದ ನಾಯಕ ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಎಂ.ಕೆ. ಸ್ಟಾಲಿನ್​ ಕೂಡ ಬಂದ್​ಗೆ ಬೆಂಬಲ ನೀಡಿದ್ದಾರೆ. ತಮಿಳುನಾಡಿನಲ್ಲಿ ಬಂದ್​ ಯಶಸ್ವಿಯಾಗಲು ಡಿಎಂಕೆ ಸಕಲ ರೀತಿಯಲ್ಲೂ ಬೆಂಬಲ ನೀಡುವುದಾಗಿ ಸ್ಟಾಲಿನ್​ ತಿಳಿಸಿದ್ದಾರೆ.

ಬಿಹಾರದ ರಾಂಚಿಯ ಜಹನಾಬಾದ್​ನಲ್ಲಿ ರೈಲು ತಡೆದು ಆರ್​ಜೆಡಿ ಮತ್ತು ಸಿಪಿಐ ಮುಖಂಡರು ಪ್ರತಿಭಟನೆ ಮಾಡಿದ್ದಾರೆ. ಬಿಹಾರಾದ್ಯಂತ ಸಂಚಾರ ಸ್ಥಗಿತಗೊಳಿಸಲು ಆರ್​ಜೆಡಿ ಮತ್ತು ಸಿಪಿಐ ಹಲವೆಡೆ ಯತ್ನಿಸಿದೆ. ರೈಲು ತಡೆಯಲು ಮುಂದಾದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೈಸೂರು ರಸ್ತೆಯ ಸೆಟಲೈಟ್​ ಬಸ್​ ನಿಲ್ದಾಣದಿಂದ ಹೊರಡಬೇಕಿದ್ದ 98 ಬಸ್​ಗಳಲ್ಲಿ ಕೇವಲ ಒಂದು ಬಸ್​ ಮಾತ್ರ ನಿಲ್ದಾಣದಿಂದ ಹೊರಟಿದ್ದು, ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಬಹುತೇಕ ಸ್ತಬ್ಧವಾಗಿದೆ. ಆಡಳಿತಾರೂಢ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳು ಬಂದ್​ಗೆ ಬೆಂಬಲ ನೀಡಿರುವುದರಿಂದ ಕರ್ನಾಟಕದಲ್ಲಿ ಬಂದ್​ ಯಶಸ್ವಿಯಾಗುವ ಮುನ್ನೋಟ ಮುಂಚೆಯೇ ಸಿಕ್ಕಿತ್ತು. ಒಂದರ್ಥದಲ್ಲಿ ರಾಜ್ಯ ಸರ್ಕಾರ ಪ್ರಾಯೋಜಿತ ಬಂದ್​ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದರೆ ತಪ್ಪಾಗಲಾರದು.ರಾಜ್ಯದಲ್ಲಿ ಕಾಂಗ್ರೆಸ್​ - ಜೆಡಿಎಸ್​ ಬೆಂಬಲಿಸಿರುವ ಬಂದ್​ ಯಶಸ್ವಿಯಾಗದಂತೆ ಮಾಡಲು ಬಿಜೆಪಿ ಪ್ರಯತ್ನ ನಡೆಸಿದೆ. ತಮ್ಮ ಭದ್ರಕೋಟೆಗಳಾದ ಜಿಲ್ಲೆಗಳಲ್ಲಿ ಒಂದು ಗಂಟೆ ಹೆಚ್ಚು ಕೆಲಸ ಮಾಡುವಂತೆ ಬಿಜೆಪಿ ಕರೆ ಕೊಟ್ಟಿದೆ. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಬಂದ್​ ವಿರೋಧಿಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲೂ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದಾವಾದರೂ ಸಂಪೂರ್ಣ ಯಶಸ್ವಿಯಾಗಿಲ್ಲ.

ಬಂದ್​ಗಿಲ್ಲ ಬೆಂಬಲ:

ಕಾಂಗ್ರೆಸ್​ ಕರೆ ನೀಡಿದ ಭಾರತ್​ ಬಂದ್​ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷ ಬೆಂಬಲವನ್ನು ನೀಡಿಲ್ಲ. ಬಂದ್​ಗೆ ಕರೆ ನೀಡುವ ನೈತಿಕತೆ ಕಾಂಗ್ರೆಸ್​ ಪಕ್ಷಕ್ಕಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಂದ್​ಗೆ ಬೆಂಬಲ ನೀಡುವುದಿಲ್ಲ ಎಂದು ಆಮ್​ ಆದ್ಮಿ ಪಕ್ಷ ದೂರ ಉಳಿದಿದೆ.

ಇದನ್ನೂ ಓದಿ: ಬಂದ್​ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಬೀದಿಗಿಳಿಯದ ಬಸ್​ಗಳು, ಪ್ರಯಾಣಿಕರ ಪರದಾಟ; ಸುಲಿಗೆಗೆ ನಿಂತ ಆಟೋ ಚಾಲಕರು

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಕೂಡ ಬಂದ್​ಗೆ ಬೆಂಬಲ ನೀಡಿಲ್ಲ. ಎಲ್ಲಾ ಸರ್ಕಾರಿ ಅಧಿಕಾರಿಗಳೂ ಕೆಲಸಕ್ಕೆ ಹಾಜರಾಗುವಂತೆ ಮಮತಾ ಬ್ಯಾನರ್ಜಿ ಕಟ್ಟುನಿಟ್ಟಿದ ನಿರ್ದೇಶನ ನೀಡಿದ್ದಾರೆ. ರಾಜ್ಯಾದ್ಯಂತ 1,500 ಪೊಲೀಸರು ಮತ್ತು 500 ವಿಶೇಷ ಬಸ್​ಗಳು ಕಾರ್ಯನಿರ್ವಹಿಸುವಂತೆ ಬ್ಯಾನರ್ಜಿ ಆದೇಶಿಸಿದ್ದಾರೆ. ದಿನ ಬಳಕೆ ವಸ್ತುಗಳು ಮತ್ತು ಆಸ್ಪತ್ರೆ ಸೇವೆಗಳಿಗೆ ಯಾವುದೇ ಅಡೆತಡೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಆಯಾ ಇಲಾಖೆಗಳಿಗೆ ಆದೇಶಿಸಿದ್ದಾರೆ.

ಬೆರಳೆಣಿಕೆಯ ಕಡೆಗಷ್ಟೇ ಒತ್ತಾಯ ಪೂರ್ವಕವಾಗಿ ರೈಲು ತಡೆ, ಬಸ್​ ತಡೆಗಳನ್ನು ಹೊರತುಪಡಿಸಿ ಬಂದ್​ ಬಹುತೇಕ ಶಾಂತಿಯುತವಾಗಿ ಸಾಗಿದೆ.
First published: September 10, 2018, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading