ಎಷ್ಟೋ ಸಲ ದೊಡ್ಡ ದೊಡ್ಡ ಮಹಾನಗರಗಳಲ್ಲಿರುವ ಅನೇಕ ಅಂತಸ್ತುಗಳ ಕಟ್ಟಡಗಳು ಶಿಥಿಲಗೊಂಡು ಅಥವಾ ಭಾರಿ ತೀವ್ರತೆಯ ಭೂಕಂಪದಿಂದಾಗಿ ಕ್ಷಣಮಾತ್ರದಲ್ಲಿಯೇ ನೆಲಕ್ಕುರುಳಿರುವುದನ್ನು ನಾವೆಲ್ಲಾ ವೀಡಿಯೋಗಳಲ್ಲಿ ನೋಡಿರುತ್ತೇವೆ ಮತ್ತು ಕೆಲವೊಮ್ಮೆ ನಮ್ಮ ಕಣ್ಣೆದುರೆ ಭಾರಿ ದುರಂತ ನಡೆದಿರುತ್ತದೆ. ಇದರಲ್ಲಿ ಆಶ್ಚರ್ಯಕರ ಎಂಬಂತೆ ಕೆಲವರು ಹಾಗೆ ಕಟ್ಟಡಗಳ (Building) ಅವಶೇಷಗಳಡಿಯಲ್ಲಿ ಸಿಲುಕಿ ಅದೃಷ್ಟವಶಾತ್ ಆಗಿ ಬದುಕುಳಿದಿರುತ್ತಾರೆ. ಹೌದು, ಅಂತಹ ದುರ್ಘಟನೆಗಳಲ್ಲಿ ಬದುಕುಳಿದಿರುವುದು ನಿಜಕ್ಕೂ ಅವರ ಅದೃಷ್ಟ (Lucky) ಅಂತಾನೆ ಹೇಳಬಹುದು. ಅಂತಹದೇ ಒಂದು ಅದೃಷ್ಟ ಈಗ ಟರ್ಕಿ-ಸಿರಿಯಾ ಭೂಕಂಪದಿಂದ ನೆಲಕ್ಕಚ್ಚಿದ ಕಟ್ಟಡಗಳ ಅವಶೇಷಗಳಡಿಯಲ್ಲಿ ಜನಿಸಿದ ಹಸುಗೂಸಿನದ್ದಾಗಿದೆ ನೋಡಿ. ಆದರೆ ದುರದೃಷ್ಟಕರವಾದ ವಿಚಾರ ಎಂದರೆ ಈ ಭೂಕಂಪದ ಧಾರುಣ ಘಟನೆಯಲ್ಲಿ ಶಿಶುವಿನ ಪೋಷಕರು (Parents) ಸಾವನ್ನಪ್ಪಿದ್ದಾರಂತೆ.
ಈ ಭೂಕಂಪದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರಂತೆ..
ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಒಂದರ ನಂತರ ಒಂದರಂತೆ ಮೂರು ಭೂಕಂಪಗಳು ಸಂಭವಿಸಿದ್ದು, ಸಾವಿರಾರು ಕಟ್ಟಡಗಳು ಹಾನಿಗೊಳಗಾಗಿವೆ. ಬೆಳಗ್ಗೆ ಸಂಭವಿಸಿದ ಭೂಕಂಪದಲ್ಲಿ ಉಭಯ ದೇಶಗಳಲ್ಲಿ ಕನಿಷ್ಠ 4,365 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಮ ಮತ್ತು ಮಳೆಯಿಂದ ಉಲ್ಬಣಗೊಂಡ ಹೆಪ್ಪುಗಟ್ಟುವ ತಾಪಮಾನದ ನಡುವೆ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದ್ದರೂ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.
ಕುಸಿದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜನಿಸಿದ ನವಜಾತ ಶಿಶು
ಸಿರಿಯಾದಲ್ಲಿ ಭಾರಿ ಭೂಕಂಪದ ನಂತರ ಕುಸಿದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಒಂದು ನವಜಾತ ಶಿಶುವೊಂದು ಪವಾಡ ಎಂಬಂತೆ ಜನಿಸಿದೆ ನೋಡಿ.
ಮಗುವಿನ ಪೋಷಕರಿಗೆ ಆ ಕಟ್ಟಡದ ಅವಶೇಷಗಳಡಿಯಿಂದ ಜೀವಂತವಾಗಿ ಹೊರಬರಲು ಸಾಧ್ಯವಾಗದ ಕಾರಣ ಕಂದಮ್ಮ ಅನಾಥವಾಗಿದೆ. ಈ ನವಜಾತ ಶಿಶು ಮತ್ತು ಅದರ ಕುಟುಂಬದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಇದನ್ನೂ ಓದಿ: ಪ್ರತಿದಿನ ಯೋಗ ಮಾಡುವುದು ಕಷ್ಟನಾ? ಹೀಗೊಮ್ಮೆ ಟ್ರೈ ಮಾಡಿ
ಭೂಕಂಪದ ಸಮಯದಲ್ಲಿ ಮಗುವಿನ ತಾಯಿಗೆ ಹೆರಿಗೆ ಆಗಿದ್ದು, ಆದರೆ ಭೂಕಂಪನದ ವಿಪತ್ತಿನಿಂದ ತಾಯಿಗೆ ಬದುಕುಳಿಯಲು ಸಾಧ್ಯವಾಗಲಿಲ್ಲ. ಈಶಾನ್ಯ ಸಿರಿಯಾದಲ್ಲಿ ಹಾನಿಗೊಳಗಾದ ಕಟ್ಟಡಗಳ ಅವಶೇಷಗಳಡಿಯಲ್ಲಿ ಹೆಣ್ಣು ಮಗುವೊಂದು ಬದುಕುಳಿದಿರುವುದು ನಿಜಕ್ಕೂ ಒಂದು ರೀತಿಯ ಪವಾಡ ಅಂತಾನೆ ಹೇಳಬಹುದು.
ಈಶಾನ್ಯ ಸಿರಿಯಾದ ಅಫ್ರಿನ್ ನ ಗ್ರಾಮೀಣ ಪ್ರದೇಶದ ಜೆಂಡೆರೆಸ್ ನಲ್ಲಿ ಕತ್ತಲೆ, ಮಳೆ ಮತ್ತು ಚಳಿ ಆವರಿಸಿದ್ದರಿಂದ ನವಜಾತ ಶಿಶು ಮತ್ತು ಅವಳ ಕುಟುಂಬವನ್ನು ಉಳಿಸಲು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಆದರೆ ಸಿರಿಯಾದ ಕ್ರೂರ ದುರಂತದಿಂದ ಡೇರ್ ಎಜ್ಜೋರ್ ನಿಂದ ಅಫ್ರಿನ್ ಗೆ ಸ್ಥಳಾಂತರಗೊಂಡಿದ್ದರಿಂದ ಮಗುವಿನ ಪೋಷಕರು ಬದುಕುಳಿಯಲಿಲ್ಲ ಎಂದು ಹೇಳಲಾಗುತ್ತಿದೆ.
ಭೂಕಂಪದಲ್ಲಿ ನೂರಾರು ಕಟ್ಟಡಗಳು ನೆಲಸಮವಾಗಿವೆಯಂತೆ..
ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಶತಮಾನದ ಭೀಕರ ನೈಸರ್ಗಿಕ ವಿಪತ್ತುಗಳಲ್ಲಿ ಒಂದು ಎಂದು ಹೇಳಲಾಗುತ್ತಿದ್ದು, ನೂರಾರು ದೊಡ್ಡ ದೊಡ್ಡ ಕಟ್ಟಡಗಳು ನೆಲಸಮವಾಗಿವೆ.
ಆರಂಭಿಕ ಭೂಕಂಪದ ನಂತರ ಎರಡನೇ ಬಾರಿ ಸಂಭವಿಸಿದ ಭೂಕಂಪನದ ತೀವ್ರತೆಯು 7.7 ಆಗಿದ್ದು ಮತ್ತು ಮೂರನೆಯ ಬಾರಿಗೆ ಸಂಭವಿಸಿದ ಭೂಕಂಪನದ ತೀವ್ರತೆಯು 5.7 ಆಗಿದೆ ಎಂದು ತಿಳಿದು ಬಂದಿದೆ.
ಮೂರನೇ ಭೂಕಂಪವು ಪೂರ್ವ ಟರ್ಕಿಯಲ್ಲಿ ಸಂಭವಿಸಿದ್ದು, ರಕ್ಷಣಾ ಸಿಬ್ಬಂದಿ ಅವಶೇಷಗಳಡಿಯಲ್ಲಿ ಬದುಕುಳಿದವರನ್ನು ರಕ್ಷಿಸುವ ಕೆಲಸ ಮುಂದುವರೆಸಿದ್ದಾರೆ ಅಂತ ಹೇಳಲಾಗುತ್ತಿದೆ.
ಬದುಕುಳಿದವರನ್ನು ಹುಡುಕುವ ಕೆಲಸ ತುಂಬಾನೇ ಕಷ್ಟಕರವಾಗಿದ್ದರೂ ಸಹ ಬದುಕುಳಿದವರ ಶೋಧ ಕಾರ್ಯಕ್ಕೆ ಸಹಾಯ ಮಾಡಲು ಡಜನ್ ಗಟ್ಟಲೆ ದೇಶಗಳು ರಕ್ಷಣಾ ತಂಡಗಳನ್ನು ಕಳುಹಿಸಿವೆ.
ಅಷ್ಟೇ ಅಲ್ಲದೆ 7.8 ತೀವ್ರತೆಯ ಭೂಕಂಪನದ ನಂತರ, ಟರ್ಕಿ ವಿಮಾನ ನಿಲ್ದಾಣದ ರನ್ವೇ ಎರಡು ಭಾಗಗಳಾಗಿ ಒಡೆದಿರುವುದನ್ನು ತೋರಿಸುವ ವೀಡಿಯೋವೊಂದು ಆನ್ಲೈನ್ ನಲ್ಲಿ ಕಾಣಿಸಿಕೊಂಡಿದೆ. ವಿಮಾನ ನಿಲ್ದಾಣದ ಏಕೈಕ ರನ್ ವೇ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ