ಲೈಂಗಿಕ ದೌರ್ಜನ್ಯ (Molestation) ವಿರೋಧಿಸಿದ 8ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಆರೋಪಿ 13 ಸೆಕೆಂಡ್ನಲ್ಲಿ 8 ಬಾರಿ ಇರಿದಿರುವ (Stab) ಆಘಾತಕಾರಿ ಘಟನೆ ಬಿಹಾರದ ಗೋಪಾಲ್ಗಂಜ್ನಲ್ಲಿ ನಡೆದಿದೆ. ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಇಬ್ಬರು ಆಕೆಗೆ ಕಿರುಕುಳ ನೀಡಲು ಮುಂದಾಗಿದ್ದರು. ಈ ವೇಳೆ ಬಾಲಕಿ ವಿರೋಧಿಸಿದ್ದಾಳೆ. ಇದರಿಂದ ಕುಪಿತಗೊಂಡ ವ್ಯಕ್ತಿ ಆಕೆಯನ್ನು ನೆಲದ ಮೇಲೆ ತಳ್ಳಿ ಚಾಕುವಿನಿಂದ ಚುಚ್ಚು ಚುಚ್ಚಿ ಇರಿದು ಕೊಂದಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ಅಂದರೆ ಡಿಸೆಂಬರ್ 19ರಂದು ಈ ಘಟನೆ ನಡೆದಿರುವುದಾಗಿ ದೈನಿಕ್ ಬಾಸ್ಕರ್ ವರದಿ ಮಾಡಿದೆ. ಬಾಲಕಿ ತನ್ನ ಇಬ್ಬರು ಗೆಳತಿಯರೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಳು. ಈ ವೇಳೆ ಮಾರ್ಗ ಮಧ್ಯೆ ಅವಿತು ಕುಳಿತುಕೊಂಡಿದ್ದ ಆರೋಪಿ ಮತ್ತು ಆತನ ಸ್ನೇಹಿತ ಈ ಕೃತ್ಯ ಎಸಗಿದ್ದಾನೆ.
ಸಿಸಿಟಿವಿ ದೃಶ್ಯ ವೈರಲ್
ಈ ಘಟನೆ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ಯುವಕ ಆತನ ಗೆಳೆಯನನನ್ನು ಎಷ್ಟೇ ಬಿಗಿ ಹಿಡಿದು ಎಳೆದರೂ ಆರೋಪಿ ಪದೇ ಪದೇ ಬಾಲಕಿಗೆ ಚಾಕುವಿನಿಂದ ಚುಚ್ಚಿರುವುದು ಕಂಡು ಬಂದಿದೆ. ತಕ್ಷಣಕ್ಕೆ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಹೆಚ್ಚಿನ ಚಿಕಿತ್ಸೆಗೆ ಪಾಟ್ನಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿ ಇದಕ್ಕೂ ಮುನ್ನ ಆಕೆಗೆ ಅನೇಕ ಬಾರಿ ಕಿರುಕುಳ ನೀಡಿದ್ದ, ಶಾಲೆಗೆ ಹೋಗುವಾಗ ಬರುವಾಗ ಆಕೆಗೆ ಹಿಂಸೆ ನೀಡುತ್ತಿದ್ದ ಎಂದು ಸಂತ್ರಸ್ತೆ ಕುಟುಂಬ ತಿಳಿಸಿದೆ.
ಗೆಳೆಯನನ್ನು ಹತ್ಯೆ ಮಾಡಿದ ಸ್ನೇಹಿತ
ಇನ್ನು ಜಾರ್ಖಂಡ್ನಲ್ಲಿ 14 ವರ್ಷದ ಗೆಳೆಯನನ್ನೇ ಸ್ನೇಹಿತರು ಹತ್ಯೆ ಮಾಡಿ, ಆತನ ಕೈ ಕಾಲುಗಳನ್ನು ಪೀಸ್ ಪೀಸ್ ಮಾಡಿ ಕಾಡಿನಲ್ಲಿ ಎಸೆದಿರುವ ಘಟನೆ ವರದಿಯಾಗಿದೆ. ಜಾರ್ಖಂಡ್ನ ದಿಯೋಘರ್ನಲ್ಲಿ ಗುರುವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಬುಧವಾರದಿಂದ ಬಾಲಕ ಕಾಣೆಯಾಗಿರುವ ಸಂಬಂಧ ಆತನ ಮನೆಯವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಇದನ್ನು ಓದಿ: ಪಂಜಾಬ್ನ ಲುಧಿಯಾನಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಸ್ಪೋಟ; ಇಬ್ಬರು ಸಾವು
ಮನೆಯಿಂದ ಹೊರ ಹೋದ ಬಾಲಕ ಮನೆಗೆ ಬಾರದ ಕುರಿತು ಆತಂಕ ವ್ಯಕ್ತಪಡಿಸಿದ ಪೋಷಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಬೆನ್ನಟ್ಟಿದ ಪೊಲೀಸರು ಆತನ ಸ್ನೇಹಿತನನ್ನು ವಶಕ್ಕೆ ಪಡೆದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.
ಸಾವನ್ನಪ್ಪಿದ ಬಾಲಕ ಬುಧವಾರ ಸುಮಾರು 8. 30ರ ಸುಮಾರಿಗೆ ಮನೆಯಿಂದ ಹೊರ ಹೋಗಿದದಾನೆ ಈ ವೇಳೆ ಆತನ ಮತ್ತೊಬ್ಬ 14 ವರ್ಷದ ಸ್ನೇಹಿತ ಕೂಡ ಜೊತೆಗಿದದ. ಇದೇ ಸಮಯದಲ್ಲಿ ಅವರ 19 ವರ್ಷದ ಮತ್ತೊಬ್ಬ ಗೆಳೆಯ ಅವಿನಾಶ್ ಜೊತೆಯಾಗಿದ್ದಾರೆ.
ಇದನ್ನು ಓದಿ: ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ: 5,500 ಕೋಟಿ ರೂ ಜೀವನಾಂಶ ನೀಡಿದ ದುಬೈ ಶೇಖ್!
ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಆರೋಪಿ
ಈ ಮೂವರು ರಾತ್ರಿ ಪಲಂಗ ಪಹದ್ ಅರಣ್ಯದಲ್ಲಿ ಹೋಗುತ್ತಿದ್ದರು. ಈ ವೇಳೆ ಸಾವನ್ನಪ್ಪಿದ ಬಾಲಕ ಮತ್ತು 19 ವರ್ಷದ ಬಾಲಕನ ನಡುವೆ ಜಗಳ ಏರ್ಪಿಟ್ಟಿದ್ದು, ಈ ವೇಳೆ ಆತ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ.
ಕೊಂದ ಬಳಿಕ ಆತನ ಕಾಲು ಕೈ ಕತ್ತರಿಸಿ ನಂತರ ದೇಹದ ಭಾಗವನ್ನು ಮೂರು ಗೋಣಿ ಚೀಲದಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಅವಿನಾಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಂದ ರಕ್ತಸಿಕ್ತ ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 302ರ ಪ್ರಕಾರ ಕೊಲೆ, 201ರ ಪ್ರಕಾರ ಕೊಲೆ ಸಾಕ್ಷ್ಯ ನಾಶ ಪಡಿಸಿದ ಆರೋಪ ಸೇರಿದಂತೆ ಅನೇಕ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ