ಹೈದರಾಬಾದ್: ತೆಲಂಗಾಣದಲ್ಲಿ (Telangana) ಸಮಾಜ ತಲೆ ತಗ್ಗಿಸುವಂತಹ ಮತ್ತೊಂದು ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿಯನ್ (Minor Girl) ನ ಮದ್ಯದ ಅಮಲಿನಲ್ಲಿದ್ದ ನಾಲ್ವರು ಯುವಕರು ಅತ್ಯಾಚಾರವೆಸಗಿದ್ದಾರೆ. ಪೊಲೀಸರು (Police) ನಿರಂತರ ಗಸ್ತು ತಿರುಗುತ್ತಿದ್ದರೂ, ಹಲವು ಕಡೆ ಸಿಸಿ ಕ್ಯಾಮೆರಾ ಅಳವಡಿಸಿದರೂ ಕಾಮುಕರ ಕಣ್ಣು ಅಪರಿಚಿತ ಮಹಿಳೆಯರ ಮೇಲೆ ಬೀಳುತ್ತಲೇ ಇದೆ. ಇದೇ ತಿಂಗಳ 4ರಂದು ಚಂದ್ರಾಯನಗುಟ್ಟದ ಮೆಡಿಕಲ್ ಶಾಪ್‌ಗೆ ಔಷಧಿಗಾಗಿ ಹೋಗಿದ್ದ ಬಾಲಕಿಯನ್ನು ಮತ್ತೊಬ್ಬ ಮಹಿಳೆ ಮೂಲಕ ಬಲೆಗೆ ಕೆಡವಿ ನಾಲ್ವರು ಯುವಕರು ಕಿಡ್ನಾಪ್ (Kidnap) ಮಾಡಿದ್ದಾರೆ. ನಂತರ ಮದ್ಯ ಕುಡಿಸಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಅಮಾನುಷ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಛತ್ರಿನಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಚಂದ್ರಾಯಣಗುಟ್ಟದಲ್ಲಿ ಪೋಷಕರ ಜೊತೆ ವಾಸವಾಗಿದ್ದ ಬಾಲಕಿ ಫೆಬ್ರವರಿ 4 ರಂದು ಸಮೀಪದ ಮೆಡಿಕಲ್ ಶಾಪ್ನಲ್ಲಿ ಔಷಧ ತೆಗೆದುಕೊಳ್ಳಲು ತೆರಳಿದ್ದಾಳೆ. ಈ ವೇಳೆ ಅಪರಿಚಿತ ಮಹಿಳೆಯೊಬ್ಬರು ಅಲ್ಲಿಗೆ ಬಂದು, ಅದೇ ರೀತಿಯ ಔಷದವನ್ನು ರಿಯಾಯಿತಿ ದರದಲ್ಲಿ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆ ಆಕೆ ಬಾಲಕಿಯನ್ನು ನಾಲ್ವರು ಯುವಕರಿದ್ದ ಜಾಗದಲ್ಲಿ ಬಿಟ್ಟು ಪರಾರಿಯಾಗಿದ್ದ, ಆ ನಾಲ್ವರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಕಾಮಂದರಿಗೆ ಬಾಲಕಿ ಒಪ್ಪಿಸಿದ ಮಹಿಳೆ
ಮೂಲಗಳ ಪ್ರಕಾರ ಅಪರಿಚಿತ ಮಹಿಳೆ ಬಾಲಕಿಯನ್ನು ಕರೆದುಕೊಂಡು ಹೋಗಿ ಕಂಡಿಕಲ್ ಗೇಟ್ ಬಳಿ ಮದ್ಯ ಅಮಲಿನಲ್ಲಿದ್ದ ರಾಹುಲ್, ಪವನ್, ಚಂತಿ ಹಾಗೂ ಮತ್ತೊಬ್ಬ ಯುವಕನಿಗೆ ಒಪ್ಪಿಸಿದ್ದಾಳೆ. ಆ ಕಾಮುಕರು ಬಾಲಕಿಯನ್ನು ಕಂದಿಕಲ್ ಗೇಟ್ ಬಳಿಯ ಚಿನ್ನಾ ಎಂಬುವವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಯುವಕರ ವರ್ತನೆಯಿಂದ ಹೆದರಿದ ಬಾಲಕಿ ಅಳುವುದಕ್ಕೆ ಶುರು ಮಾಡಿದ್ದಾಳೆ. ಆಗ ಆ ಯುವಕರು ಬಾಲಕಿಯನ್ನು ಅಲ್ಲೇ ಇದ್ದ ರೂಮಿನೊಳಗೆ ಎಳೆದುಕೊಂಡು ಹೋಗಿದ್ದಾರೆ. ಹುಡುಗಿಯ ಕಿರುಚಾಟದ ಶಬ್ಧ ಹೊರ ಬರಬಾರದೆಂದು ಜೋರಾಗಿ ಮ್ಯೂಸಿಕ್ ಸಿಸ್ಟಮ್ ಹಾಕಿದ್ದಾರೆ.
ಮದ್ಯ ಕುಡಿಸಿ ಅತ್ಯಾಚಾರ
ರಾತ್ರಿ 9 ಗಂಟೆಗೆ ಕಾಮುಕರು ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಆಕೆ ಪ್ರಜ್ಞೆ ಕಳೆದುಕೊಂಡ ನಂತರ ನಾಲ್ವರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ನಂತರ ಆಕೆಯನ್ನು ಆ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಾರನೆ ದಿನ ಬಾಲಕಿಗೆ ಪ್ರಜ್ಞೆ ಬಂದ ನಂತರ ಮನೆಗೆ ಮರಳಿದ್ದಾಳೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಯುವಕರು ಗಾಂಜಾ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ.
ಪೋಷಕರಿಂದ ದೂರು, ವಿಶೇಷ ತಂಡ ರಚನೆ
ಫೆಬ್ರವರಿ 5 ರಂದು ಬೆಳಿಗ್ಗೆ ಎಚ್ಚರಗೊಂಡ ಬಾಲಕಿ ಮರುದಿನ ಮನೆಗೆ ಬಂದಿದ್ದು, ನಡೆದ ಎಲ್ಲಾ ವಿಷಯಗಳನ್ನು ಆಕೆಯ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಪೋಷಕರು ನೀಡಿದ ದೂರಿನ ಆಧಾರ ಮೇಲೆ ಚಂದ್ರಾಯಣಗುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಯುವಕರು ಗಾಂಜಾ ಸೇವನೆ ಮಾಡಿದ್ದರು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಲ್ವರು ಯುವಕರು ಹಾಗೂ ಆ ಅಪರಿಚಿತ ಮಹಿಳೆಯನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ.
ಎನ್ಕೌಂಟರ್ ಮಾಡಿ ಎಂದ ನಿರ್ದೇಶಕ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಆರು ಜನರೊಂದಿಗೆ ಇನ್ನೂ ಐವರು ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿಗಳ ಪೈಕಿ ವಾಲಿ ಎಂಬ ಮಹಿಳೆ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರಿಗೆ ಹುಡುಕಾಟ ನಡೆಯುತ್ತಿದೆ. ತಡವಾಗಿ ಬೆಳಕಿಗೆ ಬಂದ ಈ ಘಟನೆಯಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರನ್ನು ಬಿಡಬೇಡಿ ಎಂದು ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಚಲನಚಿತ್ರ ನಿರ್ದೇಶಕ ಹರೀಶ್ ಶಂಕರ್ ಸರ್ ನಮಗೆ ನಿಮ್ಮ ಅವಶ್ಯಕತೆ ತುಂಬಾ ಇದೆ, ಎಂದು ಮಾಜಿ ಸಿಪಿ, ಟಿಎಸ್ಆರ್ಟಿಸಿ ಎಂಡಿ ಸಜ್ಜನಾರ್ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ಅಪರಾಧಕ್ಕೆ ಕೊನೆ ಯಾವಾಗ?
ಮೆಟ್ರೋ ಸಿಟಿಯಿಂದ ಜಾಗತಿಕ ನಗರ ಎನಿಸಿಕೊಂಡರೂ ಹೈದರಾಬಾದ್ನಲ್ಲಿ ಇಂತಹ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಈ ಹಿಂದೆ, 6 ಡಿಸೆಂಬರ್ 2019 ರಂದು, ದಿಶಾ ಎಂಬ ಮಹಿಳೆಯನ್ನು ಇದೇ ರೀತಿಯಲ್ಲಿ ಅತ್ಯಾಚಾರ ಮಾಡಿ, ಸುಟ್ಟು ಕೊಲೆ ಮಾಡಲಾಗಿತ್ತು. ಆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿದರೂ ಸಮಾಜದಲ್ಲಿನ ಕಾಮುಕರ ಅಟ್ಟಹಾಸದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಅಲ್ಲಿನ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಪ್ರಕರಣದಲ್ಲಿ ಸ್ಥಳ ಮಹಜರಿಗಾಗಿ ಕರೆದುಕೊಂಡು ಹೋಗಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿದ್ದರಿಂದ ಎನ್ಕೌಂಟರ್ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ