news18-kannada Updated:January 15, 2021, 5:40 PM IST
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ನವ ದೆಹಲಿ (ಜನವರಿ 15); ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2021-22 ಅನ್ನು ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನವು ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಮತ್ತು ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಎರಡು ಭಾಗಗಳಲ್ಲಿ ನಡೆಯಲಿದೆ. ಈ ವೇಳೆ ದೇಶದ ಮಹತ್ವದ ಕೇಂದ್ರ ಬಜೆಟ್ ಸಹ ಮಂಡನೆಯಾಗುತ್ತಿರುವುದು ವಿಶೇಷ. ಈ ವರ್ಷ ಭಾರತ ಆರ್ಥಿಕತೆ ಕೊರೋನಾ ಸಾಂಕ್ರಾಮಿಕ ವೈರಸ್ಗೆ ಸಿಲುಕಿ ಸಾಕಷ್ಟು ನಷ್ಟ ಅನುಭವಿಸಿದೆ. ದೇಶದ ಆರ್ಥಿಕತೆ ಐತಿಹಾಸಿಕ ದಾಖಲೆಯ ಮಟ್ಟಕ್ಕೆ ಕುಸಿತ ಕಂಡಿದೆ. ಇಂತಹ ಸಮಯದಲ್ಲಿ ಈ ವರ್ಷ ಬಜೆಟ್ ಮಂಡನೆಯಾಗುತ್ತಿರುವುದು ಆರ್ಥಿಕತೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಲ್ಲದೆ, ಈ ವರ್ಷದ ಬಜೆಟ್ ಸಚಿವೆ ನಿರ್ಮಾಲಾ ಸೀತಾರಾಮನ್ ಮಂಡಿಸುತ್ತಿರುವ ಮೂರನೇ ಪೂರ್ಣಾವಧಿ ಬಜೆಟ್ ಆಗಿರುವ ಕಾರಣ ಸಾಕಷ್ಟು ನಿರೀಕ್ಷೆಗಳೂ ಗರಿಗೆದರಿವೆ.
ಜನವರಿ 29 ರಂದು ಬೆಳಿಗ್ಗೆ 11 ಗಂಟೆಗೆ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಭಾಷಣದೊಂದಿಗೆ ಬಜೆಟ್ ಪ್ರಸ್ತುತಿಯನ್ನು ಪ್ರಾರಂಭಿಸಲಿದ್ದಾರೆ.
ಈ ವರ್ಷ ಹಲ್ವಾ ಸಮಾರಂಭಕ್ಕೆ ಬ್ರೇಕ್:
ಕೇಂದ್ರ ಬಜೆಟ್ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆ ಆರಂಭವಾಗುವ ಮುನ್ನ ಪ್ರತಿವರ್ಷ ಹಣಕಾಸು ಸಚಿವಾಲಯವು 'ಹಲ್ವಾ ಸಮಾರಂಭ'ವನ್ನು ಆಯೋಜಿಸುತ್ತದೆ. ಸಂಸತ್ತಿನಲ್ಲಿ ಬಜೆಟ್ ಪ್ರಸ್ತುತಿಗೆ 10 ದಿನಗಳ ಮೊದಲು ಸಮಾರಂಭವನ್ನು ಆಯೋಜಿಸುವುದು ಸಂಪ್ರದಾಯ. ಕಳೆದ ಹಲವು ದಶಕಗಳಿಂದ ಈ ಸಂಪ್ರದಾಯವನ್ನು ಆಯಾ ಕಾಲದ ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದ ನಾಯಕರು ಪಾಲಿಸುತ್ತಲೇ ಬಂದಿದ್ದಾರೆ.
ಸಾಮಾನ್ಯವಾಗಿ ಬಜೆಟ್ ಮಂಡಿಸುವ 10 ದಿನಗಳ ಮುಂಚೆಯೇ ಹಲ್ವಾ ಸಮಾರಂಭ ಮಾಡಲಾಗುತ್ತೆ. ಪ್ರತಿಯೊಂದು ಶುಭಕಾರ್ಯ ಶುರು ಮಾಡೋಕು ಮುನ್ನ ಸಿಹಿ ಹಂಚುತ್ತಾರೆ. ಹೀಗಾಗಿ, ಬಜೆಟ್ ಪ್ರತಿಗಳ ಮುದ್ರಣಕ್ಕೂ ಮುನ್ನವೇ ಹಲ್ವಾ ತಯಾರಿಸಿ ಅದನ್ನ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸ್ವತಃ ಹಣಕಾಸು ಸಚಿವರೇ ತಿನ್ನಿಸಿ ಬಜೆಟ್ ಕೆಲಸವನ್ನು ಶುರು ಮಾಡಲಾಗುತ್ತೆ.
ಹಲ್ವಾ ಕಾರ್ಯಕ್ರಮದ ನಂತರ ಒಮ್ಮೆ ಬಜೆಟ್ ಮುದ್ರಣ ಆರಂಭಗೊಂಡರೆ ಆ ಕಾರ್ಯದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಿಂದ ಹೊರಹೋಗುವಂತಿಲ್ಲ. ಅಲ್ಲದೆ, ತಮ್ಮ ಕುಟುಂಬದವರು, ಸ್ನೇಹಿತರು ಸೇರಿ ಯಾರೊಂದಿಗೂ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ಹೀಗಾಗಿ 'ಹಲ್ವಾ ಸಮಾರಂಭ' ಮಾಡಲಾಗುತ್ತದೆ. ದೊಡ್ಡ ಕಡಾಯಿಯಲ್ಲಿ ಹಲ್ವಾ ತಯಾರಿಸಿ ಅಧಿಕಾರಿಗಳು, ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವರೂ ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ.
ಆದರೆ, ಕೊರೋನಾ ಸಾಂಕ್ರಾಮಿಕ ವೈರಸ್ ಕಾರಣದಿಂದಾಗಿ ಈ ವರ್ಷ ಹಣಕಾಸು ಸಚಿವಾಲಯ ಹಳೆಯ-ಹಳೆಯ ಸಂಪ್ರದಾಯವನ್ನು ಮುರಿದು ಕಾಗದರಹಿತವಾಗಿ ಬಜೆಟ್ ಮಂಡಿಸಲು ನಿರ್ಧರಿಸಿದೆ. ಹೀಗಾಗಿ ಈ ವರ್ಷ ಮುದ್ರಣ ಮತ್ತು ಹಲ್ವಾ ಸಮಾರಂಭ ಸಂಪ್ರದಾಯಕ್ಕೆ ಕೇಂದ್ರ ಸರ್ಕಾರ ಇತಿಶ್ರೀ ಹಾಡಿದೆ.
2021 ಕೇಂದ್ರ ಬಜೆಟ್ ನಿರೀಕ್ಷೆಗಳು:
COVID-19 ಸಾಂಕ್ರಾಮಿಕದ ಮಧ್ಯೆ ಆರ್ಥಿಕ ಚೇತರಿಕೆಗೆ ವಿಶ್ವಾಸಾರ್ಹ ಮಾರ್ಗಸೂಚಿಯನ್ನು ಒದಗಿಸುವುದು ಬಜೆಟ್ 2021 ರ ಮೇಲಿನ ಪ್ರಮುಖ ನಿರೀಕ್ಷೆಯಾಗಿದೆ. ಕೇಂದ್ರೀಯ ಬಜೆಟ್ 2021 ಹಣಕಾಸಿನ ಉತ್ತೇಜನವನ್ನು ನೀಡಲು ಗಮನಹರಿಸಬೇಕು ಮತ್ತು ಆ ಸಮಯದಲ್ಲಿ ಸರ್ಕಾರವು ಬಿಗಿಯಾದ ಹಣಕಾಸಿನ ಕೊರತೆಯ ಗುರಿಯನ್ನು ಪೂರೈಸುವತ್ತ ಗಮನಹರಿಸಬಾರದು ಎಂದು ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ; ಭದ್ರಾವತಿ, ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿ
ಆತ್ಮನಿರ್ಭಾರ ಭಾರತ್ ಮತ್ತು ಸ್ವಾವಲಂಬಿ ಆರ್ಥಿಕತೆಯ ಅಗತ್ಯತೆಯ ಮೇಲೆ ಕೇಂದ್ರೀಕರಿಸಿದ ಬಜೆಟ್ ದೇಶೀಯ ಉತ್ಪಾದನೆ, ಕೃಷಿ ಕ್ಷೇತ್ರವನ್ನು ಬೆಂಬಲಿಸುವ ಪ್ರಕಟಣೆಗಳನ್ನು ನೀಡುವ ನಿರೀಕ್ಷೆ ಇದೆ. ಇದಲ್ಲದೆ, ಆರೋಗ್ಯ ವೆಚ್ಚಗಳಿಗೆ ಉತ್ತೇಜನ ನೀಡಲಿದೆ ಎನ್ನಲಾಗುತ್ತಿದೆ.
ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಈ ಹಿಂದೆ ಭಾರತದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಪ್ರಸ್ತುತ ಅವರು ಮಂಡಿಸಲಿರುವ ಬಜೆಟ್ ಅವರ ಮೂರನೇ ಪೂರ್ಣ ಅವಧಿ ಬಜೆಟ್ ಪ್ರಸ್ತುತಿಯಾಗಿದೆ ಎಂಬುದು ಉಲ್ಲೇಖಾರ್ಹ.
Published by:
MAshok Kumar
First published:
January 15, 2021, 4:31 PM IST