ಅವಿಶ್ವಾಸದಲ್ಲಿ ಕೊನೆಯಾಯ್ತು ಬಿಜೆಪಿ-ಶಿವಸೇನೆ ವಿಶ್ವಾಸ; ಮಹಾರಾಷ್ಟ್ರದಲ್ಲಿ ಶುರುವಾಯ್ತು ಅಮಿತ್ ಶಾ ಮಾಸ್ಟರ್ ಪ್ಲಾನ್


Updated:July 22, 2018, 8:29 PM IST
ಅವಿಶ್ವಾಸದಲ್ಲಿ ಕೊನೆಯಾಯ್ತು ಬಿಜೆಪಿ-ಶಿವಸೇನೆ ವಿಶ್ವಾಸ; ಮಹಾರಾಷ್ಟ್ರದಲ್ಲಿ ಶುರುವಾಯ್ತು ಅಮಿತ್ ಶಾ ಮಾಸ್ಟರ್ ಪ್ಲಾನ್
ಅಮಿತ್ ಶಾ

Updated: July 22, 2018, 8:29 PM IST
- ನ್ಯೂಸ್18 ಕನ್ನಡ

ನವದೆಹಲಿ(ಜು. 22): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಜೊತೆ ಮೈತ್ರಿ ನಡೆಯುವ ಎಲ್ಲಾ ಸಂಭವವೂ ಬಹುತೇಕ ನಶಿಸಿದೆ. ಟಿಡಿಪಿ ನೇತೃತ್ವದಲ್ಲಿ ನಡೆದ ಅವಿಶ್ವಾಸ ನಿರ್ಣಯದ ವೇಳೆ ಕೇಂದ್ರ ಸರಕಾರಕ್ಕೆ ಬೆಂಬಲ ಕೊಡದಿರಲು ಶಿವಸೇನೆ ನಿರ್ಧರಿಸಿದ ಕ್ಷಣವೇ ಬಿಜೆಪಿ-ಶಿವಸೇನೆ ಮೈತ್ರಿಗೆ ಕೊನೆಯ ಪೆಟ್ಟು ಬಿದ್ದಾಗಿತ್ತು. 2019ರ ಚುನಾವಣೆಗೆ ಏಕಾಂಗಿಯಾಗಿ ಬಿಜೆಪಿ ಸ್ಪರ್ಧಿಸಲಿದ್ದು, ತಾವೆಲ್ಲರೂ ಅಣಿಯಾಗಿರಿ ಎಂದು ಮಹಾರಾಷ್ಟ್ರದ ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ಈ ಮೂಲಕ ಶಿವಸೇನೆ ಜೊತೆ ಮೈತ್ರಿ ಇದೆಯೋ ಇಲ್ಲವೋ ಎಂಬ ಗೊಂದಲದಲ್ಲಿದ್ದ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಅಧ್ಯಕ್ಷರು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. 2019ರಲ್ಲಿ ಮಹಾರಾಷ್ಟ್ರದ ಎಲ್ಲಾ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುವುದು ಖಚಿತವಾಗಿದೆ. ಅದಕ್ಕಾಗಿ ಅಮಿತ್ ಶಾ ಅವರು ಮಹಾರಾಷ್ಟ್ರದ ಬಿಜೆಪಿಗೆ 23 ಅಂಶಗಳ ಕಾರ್ಯತಂತ್ರ ರೂಪಿಸಿ ಚುನಾವಣೆಗೆ ಅಣಿಗೊಳಿಸುತ್ತಿದ್ದಾರೆ.

ಮಹಾರಾಷ್ಟ್ರಕ್ಕೆ ಅಮಿತ್ ಶಾ ಅವರ ಕೆಲ ಕಾರ್ಯತಂತ್ರಗಳು:
* ಸೋಷಿಯಲ್ ಮೀಡಿಯಾವನ್ನು ಸಕ್ರಿಯವಾಗಿ ಬಳಸುವುದು;

* ಒಂದು ಬೂತ್ 25 ಯುವಕರು ಎಂಬ ಸೂತ್ರದಂತೆ ಕೆಲಸ ಮಾಡುವುದು;
* ಪ್ರತೀ ಬೂತ್​ನಲ್ಲೂ ಬೈಕ್ ಹೊಂದಿರುವ ಐವರು ಕಾರ್ಯಕರ್ತರನ್ನು ಅಣಿಗೊಳಿಸುವುದು
* ಪ್ರತೀ ಬೂತ್​ನಲ್ಲೂ ಇರುವ ದೇವಸ್ಥಾನಗಳು ಹಾಗೂ ಅರ್ಚಕರ ಪಟ್ಟಿ ಮಾಡುವುದು
Loading...

* ಪ್ರತೀ ಬೂತ್​ನಲ್ಲೂ ಇರುವ ಮಸೀದಿಗಳ ಪಟ್ಟಿ ಮಾಡುವುದು
* ಪ್ರತೀ ಕ್ಷೇತ್ರದ ಎದುರಾಳಿಗಳು ಮತ್ತವರ ಬಲಾಬಲ ತಿಳಿದುಕೊಳ್ಳುವುದು
* ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಪ್ರಚಾರ ಮಾಡುವುದು

ಅತ್ತ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯವರೆಗೂ ಬಿಜೆಪಿ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದ ಶಿವಸೇನೆ ಈಗ ಬಹಿರಂಗವಾಗಿಯೇ ಬುಸುಗುಟ್ಟುತ್ತಿದೆ. ಕೇಂದ್ರ ಸರಕಾರದ ಪ್ರತಿಯೊಂದು ನಡೆಯನ್ನೂ ಪ್ರಜ್ಞಾಪೂರ್ವಕವಾಗಿಯೇ ವಿರೋಧಿಸುತ್ತಾ ಬಂದಿದೆ. ಇನ್ನೂ ಕೂಡ ಎನ್​ಡಿಎ ಮೈತ್ರಿಕೂಟದಲ್ಲಿ ಶಿವಸೇನೆ ಇದೆಯಾದರೂ ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಸಂಪೂರ್ಣವಾಗಿ ಮೈತ್ರಿ ಕಡಿದುಕೊಂಡಾಗಿದೆ. ಅವಿಶ್ವಾಸ ನಿರ್ಣಯದಲ್ಲಿ ವಿಪಕ್ಷಗಳ ಜೊತೆಯೂ ಅದು ನಿಲ್ಲಲಿಲ್ಲವಾದರೂ ಕೇಂದ್ರಕ್ಕೂ ಅದು ಬೆಂಬಲ ಕೊಡಲಿಲ್ಲ. ಇದರ ಮೂಲಕ ಶಿವಸೇನೆ ಏಕಾಂಗಿಯಾಗಿ ಚುನಾವಣೆ ಎದುರಿಸುವ ಸೂಚನೆ ನೀಡಿದೆ. ಆದರೆ, ಅವಿಶ್ವಾಸ ನಿರ್ಣಯದ ದಿನದಂದು ಮೋದಿಯನ್ನು ಅಪ್ಪಿಕೊಂಡ ರಾಹುಲ್ ನಡೆಯನ್ನು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಶ್ಲಾಘಿಸಿರುವುದು ಗಮನಾರ್ಹ. ಮುಂದೆ ಚುನಾವಣೆಯಲ್ಲಿ ಎನ್​ಡಿಎಯೇತರ ಮೈತ್ರಿಕೂಟ ರಚನೆಯಾದರೆ ಶಿವಸೇನೆಯನ್ನು ಮರೆಯದಿರಲಿ ಎಂಬ ಅಪ್ಲಿಕೇಶನ್ ಅದಾಗಿರಬಹುದು.
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...