ರಾಜ್ಯಾದ್ಯಂತ ಪಾದಯಾತ್ರೆ (Padayatra) ನಡೆಸಲು ಅನುಮತಿ ನಿರಾಕರಿಸಿದನ್ನು ವಿರೋಧಿಸಿ ವೈಎಸ್ಆರ್ ತೆಲಂಗಾಣ ಪಕ್ಷದ (ವೈಎಸ್ಆರ್ಟಿಪಿ) (YSR Telangana Party) (YSRTP) ಅಧ್ಯಕ್ಷೆ ವೈ ಎಸ್ ಶರ್ಮಿಳಾ (Y S Sharmila) ಅವರು ಉಪವಾಸ ಸತ್ಯಾಗ್ರಹ (Hunger Strike) ನಡೆಸುತ್ತಿದ್ದರು. ಈ ನಡುವೆ ವೈ ಎಸ್ ಶರ್ಮಿಳಾ ಅವರ ಉಪವಾಸ ಸತ್ಯಾಗ್ರಹವನ್ನು ಪೊಲೀಸರು ತಡೆದು, ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ ಇಂದು ಮುಂಜಾನೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶರ್ಮಿಳಾ ಆಸ್ಪತ್ರೆಗೆ ದಾಖಲು
ತೆಲಂಗಾಣದಲ್ಲಿರುವ ವೈಎಸ್ಆರ್ ತೆಲಂಗಾಣ ಪಕ್ಷದ ಕಚೇರಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಶರ್ಮಿಳಾ ಅವರು ಆರಂಭಿಸಿದ್ದರು. ಆದರೆ ಮಾಧ್ಯಮ ಸಿಬ್ಬಂದಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಲವಂತದಿಂದ ಕಳುಹಿಸಿ, ಶರ್ಮಿಳಾ ಅವರ ಉಪವಾಸ ಸತ್ಯಾಗ್ರಹವನ್ನು ವಿಫಲಗೊಳಿಸಿ ಇಂದು ಬೆಳಗಿನ ಜಾವ 1.00 ಗಂಟೆ ಸುಮಾರಿಗೆ ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪಕ್ಷ ತಿಳಿಸಿದೆ.
ಶರ್ಮಿಳಾ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ
ಶರ್ಮಿಳಾ ಅವರು ಒಂದು ಹನಿ ನೀರನ್ನು ಸಹ ಸೇವಿಸದ ಕಾರಣ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ ಎಂದು ಪಕ್ಷ ಹೇಳಿದೆ.
ಉಪವಾಸದಿಂದ ಶರ್ಮಿಳಾರವರ ಮೂತ್ರಪಿಂಡಗಳಿಗೆ ಅಪಾಯ
ಶರ್ಮಿಳಾ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಿರುವ ವೈದ್ಯರು, ಶರ್ಮಿಳಾ ಅವರ ರಕ್ತದೊತ್ತಡ ಮತ್ತು ಗ್ಲೂಕೋಸ್ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ ಎಂದು ಹೇಳಿದ್ದಾರೆ.
ಅಲ್ಲದೇ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗುವ ನಿರ್ಜಲೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಇದು ಶರ್ಮಿಳಾ ಅವರ ಮೂತ್ರಪಿಂಡಗಳಿಗೆ ಅಪಾಯವನ್ನುಂಟುಮಾಡುವಷ್ಟು ಪ್ರಬಲವಾಗಿದೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಪುತ್ರಿ ಶರ್ಮಿಳಾ
ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ಶರ್ಮಿಳಾ ಅವರು, ಪಾದಯಾತ್ರೆ ನಡೆಸಲು ಅನುಮತಿ ನಿರಾಕರಿಸಿದ್ದರಿಂದ ಶುಕ್ರವಾರ ಹುಸೇನ್ಸಾಗರ ಕೆರೆ ಬಳಿ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಪ್ರತಿಭಟನೆ ನಡೆಸಲು ಆರಂಭಿಸಿದ್ದರು.
ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆಗೆ ಅವಕಾಶ ನಿರಾಕರಣೆ
ಹುಸೇನ್ಸಾಗರ ಕೆರೆ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಂತಹ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ ಶರ್ಮಿಳಾ ಅವರನ್ನು ಲೋಟಸ್ ಪಾಂಡ್ ಪ್ರದೇಶದಲ್ಲಿರುವ ಪಕ್ಷದ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Telangana: ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ ಅರೆಸ್ಟ್!
ಸದ್ಯ ಶರ್ಮಿಳಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನವೆಂಬರ್ 29ರಂದು ಶರ್ಮಿಳಾ ಬಂಧಿಸಿದ್ದ ಪೊಲೀಸ್ರು
ಪಾದಯಾತ್ರೆಗೆ ಅನುಮತಿ ನೀಡುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸ-ಕ್ಯಾಂಪ್ ಕಚೇರಿ ಪ್ರಗತಿ ಭವನದ ಬಳಿ ಅವರು ಪ್ರತಿಭಟನೆ ನಡೆಸುತ್ತಿದ್ದರು.
ನವೆಂಬರ್ 29ರ ಈ ಪ್ರತಿಭಟನೆ ವೇಳೆ ತಮ್ಮ ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ನಡೆದ ದಾಳಿಯನ್ನು ವಿರೋಧಿಸಿದ ಶರ್ಮಿಳಾ ಅವರನ್ನು ಪೊಲೀಸರು ಬಂಧಿಸಿದ್ದರು.
ಹೊರಗೆ ಬರಲು ಶರ್ಮಿಳಾ ಅವರು ನಿರಾಕರಿಸಿದಾಗ, ಪೊಲೀಸರು ಕ್ರೇನ್ ತಂದು ವಾಹನವನ್ನು ಎಳೆದುಕೊಂಡು ಹೋಗಿದ್ದನ್ನು ಕೆಲವು ಬಿಜೆಪಿ ನಾಯಕರು ಮತ್ತು ಇತರರು ಟೀಕಿಸಿದ್ದರು.
ಶರ್ಮಿಳಾಗೆ ಪ್ರಧಾನಿ ಮೋದಿ ಕರೆ
ಶರ್ಮಿಳಾ ಅವರ ಕಾರನ್ನು ಪೊಲೀಸರು ಟೊಯಿಂಗ್ ಮೂಲಕ ಕರೆದುಕೊಂಡು ಹೋಗಿ ಬಂಧಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಅವರು ವಿಷಾದ ವ್ಯಕ್ತಪಡಿಸಿದ್ದರು.
ಜೊತೆಗೆ ಶರ್ಮಿಳಾ ಅವರಿಗೆ ಕರೆ ಮಾಡಿ 2 ನಿಮಿಷಗಳ ಕಾಲ ಬಂಧಿಸಿದ್ದರ ಬಗ್ಗೆ ವಿಚಾರಿಸಿದ್ದರು. ಇನ್ನೂ ತಮ್ಮ ಬಂಧನದ ಬಗ್ಗೆ ಸಹಾನೂಭೂತಿ ತೋರಿದ್ದಕ್ಕಾಗಿ ಮೋದಿ ಅವರಿಗೆ ಶರ್ಮಿಳಾ ಅವರು ಧನ್ಯವಾದ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ