ನವದೆಹಲಿ (ಸೆ. 29): ದೇಶದ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಗೆ ಸಹಾಯಕವಾಗುವಂತೆ ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಉಚಿತ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಜನಪ್ರಿಯ ಯೋಜನೆಗಳಲ್ಲಿ ಒಂದು. ಬಡ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು, ಮಕ್ಕಳನ್ನು ಶಾಲೆಗಳತ್ತ ಕರೆತರುವಲ್ಲಿ ಈ ಮಧ್ಯಾಹ್ನದ ಬಿಸಿಯೂಟ (Mid Day Meal) ಕಾರ್ಯಕ್ರಮ ಯಶಸ್ವಿಯಾಗಿದೆ. ರಾಷ್ಟ್ರದಾದ್ಯಂತ ಜನಪ್ರಿಯತೆ ಪಡೆದಿರುವ ಈ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಪುನರ್ ನಾಮಕರಣ ಮಾಡಲು ಮುಂದಾಗಿದೆ. ಎಲ್ಲೆಡೆ ಮಧ್ಯಾಹ್ನದ ಬಿಸಿಯೂಟ ಎಂದೇ ಪರಿಚಿತವಾಗಿರುವ ಈ ಯೋಜನೆಗೆ ಇನ್ಮುಂದೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆ (PM Poshan) ಎಂದು ಮರುನಾಮಕರಣ ಮಾಡಲಾಗಿದೆ.
ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಈ ಬಿಸಿಯೂಟ ಯೋಜನೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಿಂದ ದೇಶದ 11.20 ಲಕ್ಷ ಶಾಲೆಗಳಲ್ಲಿ 11. 80 ಕೋಟಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಲುಪುತ್ತಿದೆ.
ಯೋಜನೆಯಲ್ಲಿ ಅನೇಕ ಬದಲಾವಣೆ
ಇನ್ನು ಈ ಕಾರ್ಯಕ್ರಮದಲ್ಲಿ ಹಲವಾರು ಮಾರ್ಪಡುಗಳನ್ನು ಕೂಡ ಮಾಡಲಾಗಿದೆ. ಇದರಲ್ಲಿ ಸ್ಥಳೀಯ ಮಹಿಳೆಯರಿಗೆ ಉತ್ತೇಜನ, ತೋಟಗಾರಿಕೆಗೆ ಪ್ರೋತ್ಸಾಹ, ಅಡುಗೆ ಸ್ಪರ್ಧೆ, ರಕ್ತ ಹೀನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚಿನ ಪೋಷಕಾಂಶ ನೀಡುವುದು ಸೇರಿದಂತೆ ಹಲವು ಬದಲಾವಣೆಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ.
ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಿಗೆ ಪಿಎಂ ಪೋಷಣ್ ಯೋಜನೆ ಆಹಾರ ಧಾನ್ಯಗಳಿಗೆ 99,061,73 ಕೋಟಿ ರೂ ಭರಿಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದರು. ಈ ಯೋಜನೆ ಸಾಮಾಜಿಕ ಲೆಕ್ಕಪರಿಶೋಧನೆ, ಶಾಲಾ ಪೌಷ್ಠಿಕಾಂಶ ತೋಟಗಳು ಮತ್ತು ಇತರ ಹಲವು ಕ್ರಮಗಳು ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಾಯ ಮಾಡುತ್ತದೆ. ಕಲಿಕೆ ಮತ್ತು ಪೌಷ್ಟಿಕಾಂಶದ ಫಲಿತಾಂಶಗಳನ್ನು ಹೆಚ್ಚಿಸುತ್ತದೆ ಎಂದರು
ಪೌಷ್ಟಿಕಾಂಶಯುಕ್ತ ಆಹಾರಕ್ಕೆ ಒತ್ತು
ಆತ್ಮನಿರ್ಭರ ಭಾರತ್ ನ ಉದ್ದೇಶದಂತೆ ಸ್ಥಳೀಯರಿಗೆ ಧ್ವನಿ (Vocal4Local ) ಮೂಲಕ ಪಿಎಂ ಪೋಷಣ್ ಯೋಜನೆ ಅನುಷ್ಟಾನ ಮಾಡಲಾಗುವುದು. ಈ ಯೋಜನೆ ಅಡಿ ಈಗಾಗಲೇ ಶಾಲಾ ಆವರಣದಲ್ಲಿ ತೋಟಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ ತೋಟಗಳಿದ್ದು, ಅಲ್ಲಿಯೇ ತರಕಾರಿ ಬೆಳೆಯಲಾಗುತ್ತಿದೆ. ಇನ್ಮುಂದೆ ಹೆಚ್ಚು ಪೌಷ್ಠಿಂಕಾಶಯುಕ್ತ ತರಕಾರಿ ಬೆಳೆಯಲು ಉತ್ತೇಜಿಸಲಾಗುವುದು. ರಕ್ತ ಹೀನತೆ ಇರುವ ಶಾಲೆಗಳಲ್ಲಿ ಹೆಚ್ಚಿನ ಪೌಷ್ಠಿಕಾಂಶದ ವಸ್ತುಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು
ಇದನ್ನು ಓದಿ: ದಸರಾ ಬಳಿಕ 3ರಿಂದ5ನೇ ತರಗತಿ ಶಾಲೆ ಆರಂಭ; 6ರಿಂದ 12ನೇ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ
ಯೋಜನೆ ಅಡಿ ಅಡುಗೆ ಸ್ಪರ್ಧೆ
ಇನ್ನು ವಿಶೇಷ ಎಂದರೆ ಈ ಯೋಜನೆ ಅಡಿ ಅಡುಗೆ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗುವುದು. ಗ್ರಾಮದಿಂದ ರಾಷ್ಟ್ರಮಟ್ಟದವರೆಗೆ ಎಲ್ಲಾ ಹಂತಗಳಲ್ಲಿ ಸಂಪ್ರದಾಯಿಕ ಅಡುಗೆ ಸ್ಪರ್ಧೆ ಏರ್ಪಡಿಸಲಾಗುವುದು
ಇದನ್ನು ಓದಿ: ರಾಜ್ಯದ ನಾಲ್ಕು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ; ಸಚಿವ ಅಶ್ವತ್ಥ್ ನಾರಾಯಣ
ಮುಂದಿನ ಐದು ವರ್ಷಗಳ ಕಾಲೆ ಯೋಜನೆ ಮುಂದುವರಿಕೆ
ಮುಂದಿನ ಐದು ವರ್ಷಗಳ ಕಾಲ ಈ ರಾಷ್ಟ್ರೀಯ ಯೋಜನೆ ಮುಂದುವರೆಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದಿಂದ 54061.73 ಕೋಟಿ ರೂ ಮತ್ತು ರಾಜ್ಯ ಸರ್ಕಾರಗಳಿಂದ 31,733.17 ಕೋಟಿ ರೂ ವನ್ನು ಈ ಯೋಜನೆಗೆ ನೀಡಲಾಗುವುದು. ಆಹಾರ ಧಾನ್ಯಗಳ ಮೇಲೆ 45000 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಒಟ್ಟು ಯೋಜನೆಗೆ 1,30,794.90 ಕೋಟಿ ರೂ ಮೀಸಲಿಡಲಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ