Mekedatu Project| ಮೇಕೆದಾಟು ವಿವಾದ; ಸರ್ವಪಕ್ಷ ಸಭೆಯಲ್ಲಿ ಕರ್ನಾಟಕದ ವಿರುದ್ಧ 3 ನಿರ್ಣಯಗಳನ್ನು ಕೈಗೊಂಡ ಸ್ಟಾಲಿನ್ ಸರ್ಕಾರ

ಸಿಎಂ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ನಡೆದ ಇಂದಿನ ತಮಿಳುನಾಡು ಸರ್ವಪಕ್ಷಗಳ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಡಿಎಂಕೆ, ಎಐಎಡಿಎಂಕೆ, ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿ ಒಟ್ಟು 13 ಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದು, ಕರ್ನಾಟಕದ ವಿರುದ್ಧ ಕಾನೂನು ಹೋರಾಟದ ಬಗ್ಗೆಯೂ ಸಮಾಲೋಚನೆ ನಡೆದಿದೆ.

ಎಂ.ಕೆ. ಸ್ಟಾಲಿನ್.

ಎಂ.ಕೆ. ಸ್ಟಾಲಿನ್.

  • Share this:
ಚೆನ್ನೈ (ಜುಲೈ 12); ಬೆಂಗಳೂರಿನ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಆರಂಭಿಸಿತ್ತು. ಆದರೆ, ಈ ಯೋಜನೆಯ ಮೂಲಕ ತಮಿಳುನಾಡಿನ ನೀರಿನ ಪಾಲಿಗೆ ಕುತ್ತಾಗಲಿದೆ. ಅಲ್ಲಿನ ರೈತರಿಗೆ ಅನ್ಯಾಯವಾಗಲಿದೆ ಎಂಬುದು ತಮಿಳುನಾಡಿನ ಆರೋಪ. ಇದೇ ಕಾರಣಕ್ಕೆ ತಮಿಳುನಾಡು ಸರ್ಕಾರ ಕಳೆದ ಒಂದು ದಶಕಗಳಿಂದ ಯೋಜನೆಯ ವಿರುದ್ಧ ದ್ವನಿ ಎತ್ತುತ್ತಿದೆ. ಈಗ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ಇಂದು ತಮಿಳುನಾಡು ಸರ್ಕಾರ ಅಲ್ಲಿನ ಸರ್ವ ಪಕ್ಷಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ 3 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಸಿಎಂ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ನಡೆದ ಇಂದಿನ ತಮಿಳುನಾಡು ಸರ್ವಪಕ್ಷಗಳ ಸಭೆಯಲ್ಲಿ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು.  ಡಿಎಂಕೆ, ಎಐಎಡಿಎಂಕೆ, ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿ ಒಟ್ಟು 13 ಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದು, ಕಾನೂನು ಹೋರಾಟದ ಬಗ್ಗೆಯೂ ಸಮಾಲೋಚನೆ ನಡೆದಿದೆ. ಅಲ್ಲದೆ, ಸುಪ್ರೀಂಕೋರ್ಟ್ ಮೆಟ್ಟಿಲೇರಲು ತ.ನಾಡು ಸರ್ಕಾರದ ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ತಮಿಳುನಾಡು ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಂಡ ಮೂರು ನಿರ್ಣಯಗಳು;

1 ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವುದು.

2 ಸರ್ವ ಪಕ್ಷ ಸದಸ್ಯರು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿಯಾಗಿ ಅವರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು.

3 ಇದೇ ಸಂಧರ್ಭದಲ್ಲಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವುದು.

ಇದೇ ಜುಲೈ 7ರಂದು ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು. ಭೇಟಿ ವೇಳೆ "ಯೋಜನೆ ಬಗೆಗಿನ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವರೆಗೆ ಯೋಜನೆಗೆ ಅನುಮತಿ ಕೊಡಬೇಡಿ. ಕರ್ನಾಟಕ ತರಾತುರಿಯಲ್ಲಿ ಯೋಜನೆ ಆರಂಭಿಸುತ್ತಿದೆ. ಈ ಯೋಜನೆ ಆರಂಭವಾದರೆ ಎರಡೂ ರಾಜ್ಯಗಳ ಗಡಿಯಲ್ಲಿ ಮತ್ತೆ ಸಮಸ್ಯೆ ಉಲ್ಬಣವಾಗುತ್ತದೆ. ತಮಿಳುನಾಡಿನ ರೈತರಿಗೆ ಅನ್ಯಾಯವಾಗಲಿದೆ" ಎಂದು ದೂರು ನೀಡಿದ್ದರು.

ಅಸಲಿಗೆ ಅಂತರ ರಾಜ್ಯ ಜಲ ವಿವಾದಗಳು ನ್ಯಾಯಾಲಯ ಮತ್ತು ನ್ಯಾಯಾಧೀಕರಣಗಳು ಹೇಳಿದಾಗಲೂ ಮಾತುಕತೆ ಮೂಲಕ ಬಗೆಹರಿದ ಉದಾಹರಣೆಗಳಿಲ್ಲ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಶತಕಗಳಿಂದಲೂ ನಡೆದುಕೊಂಡು ಬರುತ್ತಿರುವ ಕಾವೇರಿ ಜಲ ವಿವಾದ ಅತ್ಯಂತ ಸೂಕ್ಷ್ಮವಾದುದಾಗಿದೆ. ರಾಜಕೀಯ ಕಾರಣಗಳಿಗೆ ಮಾತ್ರವಲ್ಲದೆ ಜನ ಸಮಾನ್ಯರು ಕೂಡ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಸಂಗತಿಯಾಗಿದೆ.

ಇದನ್ನೂ ಓದಿ: Explained| ಬಗೆಹರಿಯದ ಕಾವೇರಿ ವಿವಾದ; ಇಲ್ಲಿದೆ ವಿವಿಧ ರಾಜ್ಯಗಳ ನಡುವೆ ತಲೆನೋವಾಗಿರುವ ನದಿ ಜಗಳದ ಪಟ್ಟಿ!

ಆದರೆ, ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸದೆ ಮುಖ್ಯಮಂತ್ರಿ ಯಡಿಯೂರಪ್ಪ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದು ಮೇಕೆದಾಟು ಯೋಜನೆಯನ್ನು ಉಲ್ಲೇಖಿಸಿ ಯಡವಟ್ಟು ಮಾಡಿಕೊಂಡಿದ್ದಾರೆ. ಪರಿಣಾಮ ಮೇಕೆದಾಟು ಯೋಜನೆಯನ್ನು ಶತಾಯಗತಾಯ ತಡೆಯಬೇಕೆಂದು ತಮಿಳುನಾಡು ಯತ್ನಿಸುತ್ತಿದೆ. ಯಡಿಯೂರಪ್ಪ ಬರೆದ ಪತ್ರದಿಂದ ಕರ್ನಾಟಕ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ.

ಇದನ್ನೂ ಓದಿ: RajiniKanth| ಮತ್ತೆ ರಾಜಕೀಯ ಪ್ರವೇಶ ಮಾಡ್ತಾರ ನಟ ರಜನೀಕಾಂತ್?; ಕುತೂಹಲ ಮೂಡಿಸಿದ ತಲೈವಾನ ಹೊಸ ಹೇಳಿಕೆ!

ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಯೋಜನೆಗಾಗಿ ರೂಪಿಸಿದ್ದ ಮೇಕೆದಾಟು ಅಣೆಕಟ್ಟು ಯೋಜನೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಮತ್ತು ಪರಿಸರ ಇಲಾಖೆಗೆ ಪತ್ರ ಬರೆದು ತಾತ್ವಿಕ ಒಪ್ಪಿಗೆ ಪಡೆದಿದೆ. ರಾಷ್ಟ್ರೀಯ ಜಲ‌ ನೀತಿಯಲ್ಲೂ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಲು ಕೆಲವು ರಿಯಾಯಿತಿಗಳಿವೆ. ಮೇಕೆದಾಟು ಅಣೆಕಟ್ಟು ಯೋಜನೆ ಮೂಲಕ ತಮಿಳುನಾಡಿಗೆ ಹೋಗುತ್ತಿದ್ದ ನೀರನ್ನು ಕರ್ನಾಟಕದಲ್ಲಿ ತಡೆಯುತ್ತಿರಲಿಲ್ಲ.

ತಮಿಳುನಾಡು ಪಾಲಿನ ನೀರನ್ನು ಕೊಡುವುದಾಗಿ ಕರ್ನಾಟಕ ಹೇಳುತ್ತಾ ಬಂದಿತ್ತು. ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳುವುದಾಗಿ ಹೇಳಿತ್ತು. ಈ ಎಲ್ಲಾ ಹಿನ್ನಲೆಯಲ್ಲೇ ಕರ್ನಾಟಕ ಯೋಜನೆಯ ಡಿಪಿಆರ್ ಅನ್ನು ರೂಪಿಸಿತ್ತು. ಮೊದಲಿನಿಂದಲೂ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡಿಗೆ ಯಡಿಯೂರಪ್ಪ ಪತ್ರ ಹೊಸ ಅಸ್ತ್ರ ಒದಗಿಸಿದೆ. ಇದೇ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಲಾಗುತ್ತಿದೆ.‌ ಸಭೆಯಲ್ಲಿ ಮೇಕೆದಾಟು ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರದ ಒತ್ತಡ ಹೇರುವ ಸಾಧ್ಯತೆ ಇದೆ.
Published by:MAshok Kumar
First published: