Mekedatu Project: ಇಂದು ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ, ಈ ಬಾರಿಯಾದರೂ ಒಪ್ಪುತ್ತಾ ತಮಿಳುನಾಡು?

ಇಂದಿನ ಸಭೆಯ ಅಜೆಂಡಾದಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ (DPR) ಗೆ ಅನುಮತಿ ನೀಡುವ ವಿಷಯ ಸೇರಿಸಲಾಗಿದೆ. ಆದರೆ ಕೇರಳ ಮೃದು ಧೋರಣೆ ತಳೆದರೂ ಈಗಾಗಲೇ ಮೇಕೆದಾಟು ವಿಷಯದಲ್ಲಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲನ್ನೂ ಏರಿರುವ ತಮಿಳುನಾಡು ಇಂದಿನ ಸಭೆಯಲ್ಲೂ ವಿರೋಧ ಮಾಡುವ ಸಾಧ್ಯತೆ ಇದೆ.

ಎಂ.ಕೆ. ಸ್ಟಾಲಿನ್.

ಎಂ.ಕೆ. ಸ್ಟಾಲಿನ್.

  • Share this:
ನವದೆಹಲಿ(ಸೆ. 27): ಬೆಂಗಳೂರು (Bangalore) ಮಹಾನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಮೇಕೆದಾಟು (Mekedatu) ಬಳಿ‌ ಅಣೆಕಟ್ಟು ನಿರ್ಮಿಸುವ ಯೋಜನೆಯ ವಿಸ್ತ್ರತ ಯೋಜನಾ ವರದಿ (Detail Project Report)ಗೆ ಅನುಮತಿ ನೀಡುವ ಬಗ್ಗೆ ಇಂದು ನಡೆಯುವ ಮಹತ್ವದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Committee) ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಇದೇ ವೇಳೆ ಮೇಕೆದಾಟು ಯೋಜನೆಗೆ ಮೊದಲಿನಿಂದಲೂ ತೀವ್ರವಾಗಿ ವಿರೋಧ ಮಾಡುತ್ತಿರುವ ತಮಿಳುನಾಡು (Tamil Nadu) ಇಂದಿನ ಸಭೆಯಲ್ಲಿ ಒಪ್ಪಿಗೆ ನೀಡುತ್ತಾ ಎಂಬುದು ಅನುಮಾನಸ್ಪದವಾಗಿದೆ.

ಕಳೆದ ಬಾರಿಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೇ ಮೇಕೆದಾಟು ಯೋಜನೆಯ ಡಿಪಿಆರ್ (DPR) ಗೆ ಅನುಮತಿ ನೀಡುವ ವಿಷಯ ಚರ್ಚೆಗೆ ಬಂದಿತ್ತು.‌ ಆದರೆ ತಮಿಳುನಾಡು ಮಾತ್ರವಲ್ಲದೆ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವ  ಕೇರಳ (Kerala) ಮತ್ತು ಪುದುಚೇರಿ (Puducherry) ರಾಜ್ಯಗಳು ಕೂಡ‌ ವಿರೋಧ ವ್ಯಕ್ತಪಡಿಸಿದ್ದರಿಂದ 'ಮುಂದಿನ (ಇಂದಿನ) ಸಭೆಯಲ್ಲಿ ಚರ್ಚೆ ಮಾಡಲು' ನಿರ್ಧರಿಸಲಾಗಿತ್ತು. ಆ ಪ್ರಕಾರ ಇಂದಿನ ಸಭೆಯ ಅಜೆಂಡಾದಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ (DPR) ಗೆ ಅನುಮತಿ ನೀಡುವ ವಿಷಯ ಸೇರಿಸಲಾಗಿದೆ. ಆದರೆ ಕೇರಳ ಮೃದು ಧೋರಣೆ ತಳೆದರೂ ಈಗಾಗಲೇ ಮೇಕೆದಾಟು ವಿಷಯದಲ್ಲಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲನ್ನೂ ಏರಿರುವ ತಮಿಳುನಾಡು ಇಂದಿನ ಸಭೆಯಲ್ಲೂ ವಿರೋಧ ಮಾಡುವ ಸಾಧ್ಯತೆ ಇದೆ. ತಮಿಳುನಾಡು ವಾದಕ್ಕೆ ಪುದುಚೇರಿ ದನಿಗೂಡಿಸುವ ಸಾಧ್ಯತೆ ಇದೆ.

ಆಗಸ್ಟ್ 25ರಂದು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Sing Shekawath) ಅವರನ್ನು ಭೇಟಿ ಮಾಡಿ ರಾಜ್ಯದ ಜಲ ವಿವಾದಗಳ ಬಗ್ಗೆ ಚರ್ಚೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಮೇಕೆದಾಟು ಯೋಜನೆ ಬಗ್ಗೆ ಒತ್ತು ನೀಡಿದ್ದರು. ಕೇಂದ್ರ ಸಚಿವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, 'ಮೇಕೆದಾಟು ಡಿಪಿಆರ್ ವಿಷಯವೇ ಮುಂದಿನ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ಅಜೆಂಡಾ ಆಗಿರಲಿದೆ' ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಕಳೆದ ಬಾರಿಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಕರ್ನಾಟಕದ ಪಾಲಿಗೆ ಅಪಾರವಾದ ನಿರೀಕ್ಷೆಯನ್ನು‌ ಹುಟ್ಟುಹಾಕಿತ್ತು. ಆದರೆ ಚರ್ಚೆಯಾಗದೆ ಮತ್ತು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವ ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಹಿನ್ನಡೆ ಉಂಟಾಗಿದೆ. ಈ ಬಾರಿಯ ಸಭೆಯಲ್ಲಾದರೂ‌ ವಿಷಯ ಚರ್ಚೆ ಆಗುತ್ತಾ, ಉಳಿದ ರಾಜ್ಯಗಳು ಒಪ್ಪಿಗೆ ನೀಡುತ್ತವಾ ಎಂದು ಎದಿರುನೋಡುವಂತಾಗಿದೆ.

ಇದನ್ನೂ ಓದಿ:Suresh Angadi: ಬೆಳಗಾವಿ-ಬೆಂಗಳೂರು ರೈಲಿಗೆ ದಿವಂಗತ ಸುರೇಶ್ ಅಂಗಡಿ ಹೆಸರು; ಕೇಂದ್ರಕ್ಕೆ ಪ್ರಸ್ತಾವನೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದರ್ ಅಧ್ಯಕ್ಷತೆಯಲ್ಲಿ ಇಂದು ಪ್ರಾಧಿಕಾರದ 14ನೇ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಗೆ ತಮಿಳುನಾಡಿನ ಅಥವಾ ಉಳಿದ ಎಲ್ಲಾ ರಾಜ್ಯಗಳ ವಿರೋಧದ ನಡುವೆ ಅನುಮತಿ ನೀಡಿದರೆ ‌ಬಳಿಕ ನಿಯಮಾನುಸಾರ ಕೇಂದ್ರ ಜಲ ಆಯೋಗದ (Central Water Commission) ಅನುಮೋದನೆಗೆ ಶಿಫಾರಸು ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕರ್ನಾಟಕ ಇದೆ. ಆದರೆ ಇದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ.

ಇದಲ್ಲದೆ ಸೆಪ್ಟೆಂಬರ್ (September) ತಿಂಗಳಲ್ಲಿ ಕಾವೇರಿ ಜಲನಯನ ಪ್ರದೇಶದಲ್ಲಿ ಆಗಲಿರುವ ಮಳೆಯ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಆಗಲಿದೆ. ನೀರಿನ ಒಳ ಮತ್ತು ಹೊರ ಹರಿವಿನ ಮಾಹಿತಿ ಸಂಗ್ರಹಿಸಲಾಗುತ್ತದೆ.‌‌ ಕಳೆದ ಬಾರಿ ‌ತಮಿಳುನಾಡಿಗೆ ಸೆಪ್ಟೆಂಬರ್ ಲ್ಲಿ 6ರಿಂದ 7 ಟಿಎಂಸಿ (TMC) ನೀರು ಹರಿಸಲು ಕರ್ನಾಟಕಕ್ಕೆ (Karnataka) ಸೂಚಿಸಲಾಗಿತ್ತು. ಈ ಸೂಚನೆ ಅನುಸಾರ ಕರ್ನಾಟಕ ಸೆಪ್ಟೆಂಬರ್ ತಿಂಗಳಲ್ಲಿ ತಮಿಳುನಾಡಿಗೆ ಬಿಟ್ಟಿರುವ ನೀರಿನ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ನಂತರ ಅಕ್ಟೋಬರ್ (October) ತಿಂಗಳಲ್ಲಿ ಕರ್ನಾಟಕ ತಮಿಳುನಾಡಿಗೆ ನೀಡಬೇಕಾದ ನೀರಿನ ಬಗ್ಗೆ ಚರ್ಚೆ ಆಗಲಿದೆ.

ಕಳೆದ ಬಾರಿ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದರ್, ಸಭೆ ಸೌಹಾರ್ದಯುತವಾಗಿ ನಡೆದಿದೆ. ನೀರು ಹಂಚಿಕೆ ಬಗ್ಗೆ ಮಾತ್ರ ಚರ್ಚೆ ಮಾಡಲಾಗಿದೆ.‌ ಸುಪ್ರೀಂ ಕೋರ್ಟ್ ತೀರ್ಪಿನ‌ ಪ್ರಕಾರ ಕರ್ನಾಟಕವು‌ ಆಗಸ್ಟ್ ಅಂತ್ಯದವರೆಗೆ ತಮಿಳುನಾಡಿಗೆ 86 ಟಿಎಂಸಿ ನೀರು ಹರಿಸಬೇಕು. ಆದರೆ ಈವರೆಗೆ 56ರಿಂದ 57 ಟಿಎಂಸಿ ನೀರನ್ನು ಮಾತ್ರ ಹರಿಸಿದೆ. ಆದುದರಿಂದ ಬಾಕಿ ಉಳಿಸಿಕೊಂಡಿರುವ ನೀರನ್ನು ಬಿಡುಗಡೆಗೆ ಮಾಡುವಂತೆ ತಮಿಳುನಾಡು ಕೇಳಿದೆ. ಸೆಪ್ಟೆಂಬರ್ ತಿಂಗಳಲ್ಲಿ ನೀರು ಬಿಡಲು ಕರ್ನಾಟಕ ಒಪ್ಪಿಕೊಂಡಿದೆ ಎಂದು ವಿವರಿಸಿದ್ದರು.

ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೇಕೆದಾಟು ಚರ್ಚೆಯನ್ನು ಮುಂದೂಡಲಾಗಿದೆ. ಮೇಕೆದಾಟು ಯೋಜನೆಗೆ ಉಳಿದ ರಾಜ್ಯಗಳ ಅನುಮತಿ ಬೇಕು. ಕಾವೇರಿ ಜಲಾನಯನ ಪ್ರದೇಶದ ರಾಜ್ಯಗಳ ಒಪ್ಪಿಗೆ ಪಡೆದು ಆಣೆಕಟ್ಟು ನಿರ್ಮಿಸಬೇಕು ಎಂದು ಹೇಳಿದರಲ್ಲದೆ ತಮಿಳುನಾಡು ಸರ್ಕಾರ ರೂಪಿಸಿರುವ ವೆಲ್ಲಾರು - ಗುಂಡಾರು ಯೋಜನೆಗೆ ಸಭೆಯಲ್ಲಿ ಕರ್ನಾಟಕ ವಿರೋಧ ಮಾಡಿದೆ ಎಂದು ತಿಳಿಸಿದ್ದರು.

ಸುಪ್ರೀಂನಲ್ಲೂ ತಮಿಳುನಾಡು ವಿರೋಧ

ಮೇಕೆದಾಟು ಯೋಜನೆಗೆ ಅಂತಿಮ‌ ಅನುಮೋದನೆ ನೀಡಬೇಕಿರುವುದು ಕೇಂದ್ರ ಜಲ ಆಯೋಗ. ಈ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮತ್ತೊಂದು ದೂರು ಸಲ್ಲಿಸಿದೆ. '2019ರಂದು ಮೇಕೆದಾಟು ಅಣೆಕಟ್ಟು ಯೋಜನೆ ಬಗ್ಗೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿ ಅನ್ನು ವಜಾಗೊಳಿಸಲು ಕೇಂದ್ರ ಜಲ ಆಯೋಗಕ್ಕೆ ಸೂಚನೆ ನೀಡುವಂತೆ' ಮನವಿ ಮಾಡಿಕೊಂಡಿದೆ.

ಬಾಕಿ  ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸಿಎಂ

ಸರ್ವೋಚ್ಛ ನ್ಯಾಯಾಲಯದಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಜಲ ವಿವಾದಗಳಿಗೆ ಸಂಬಂಧಿಸಿದ  ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ  ಸುದೀರ್ಘ ಚರ್ಚೆ ನಡೆದಿದ್ದು,  ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದಿದ್ದರು.

ವಿಶೇಷ ರಜೆ ಅರ್ಜಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥ ಮಾಡಲು ತೀರ್ಮಾನಿಸಲಾಗಿದೆ ಎಂದ ಅವರು ತಮಿಳುನಾಡು ನದಿ ಜೋಡಣೆ ಯೋಜನೆಗಳು ಕಾನೂನು ಬಾಹಿರವಾಗಿದ್ದು, ಆ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಬಗ್ಗೆ  ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ನಮ್ಮ ನಿಲುವನ್ನು ಸ್ಪಷ್ಟಪಡಿಸುವ ಕುರಿತು ಹಾಗೂ ತಮಿಳುನಾಡು ಮಧುರೈ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿದೆ. ಪ್ರಕರಣ ಮಧುರೈ ವ್ಯಾಪ್ತಿಗೆ ಒಳಪಡದಿರುವುದರಿಂದ ಪ್ರಕರಣವನ್ನು ಕೈಬಿಡಲು  ಕ್ರಮ ವಹಿಸಲಾಗುವುದು ಎಂದು ಹೇಳಿದ್ದರು.
Published by:Latha CG
First published: