Mehul Choksi | ಡೊಮಿನಿಕಾಗೆ ಅಕ್ರಮ ಪ್ರವೇಶ ಪ್ರಕರಣ; ಮೆಹುಲ್ ಚೋಕ್ಸಿ ಜಾಮೀನು ಅರ್ಜಿ ತಿರಸ್ಕೃತ

ಮೇಹುಲ್ ಚೋಕ್ಸಿ

ಮೇಹುಲ್ ಚೋಕ್ಸಿ

Mehul Choksi PNB Scam | ಅಕ್ರಮವಾಗಿ ಡೊಮಿನಿಕಾ ದೇಶವನ್ನು ಪ್ರವೇಶಿಸಿದ್ದಾರೆ ಎಂದು ಮೆಹುಲ್ ಚೋಕ್ಸಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆ ಕೇಸ್​ನಲ್ಲಿ ಜಾಮೀನು ಕೋರಿ ಚೋಕ್ಸಿ ಅರ್ಜಿ ಸಲ್ಲಿಸಿದ್ದರು.

  • Share this:

ನವದೆಹಲಿ (ಜೂನ್ 3): ಪಿಎನ್​ಬಿ ಹಗರಣದಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿ ಭಾರತದಿಂದ ತಲೆಮರೆಸಿಕೊಂಡಿದ್ದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಈಗಾಗಲೇ ಡೊಮಿನಿಕಾದ ಸೆರೆ ಸಿಕ್ಕಿದ್ದಾರೆ. ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ಮೆಹುಲ್ ಚೋಕ್ಸಿ ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಆ ಜಾಮೀನು ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ. ಅಕ್ರಮವಾಗಿ ಡೊಮಿನಿಕಾ ದೇಶವನ್ನು ಪ್ರವೇಶಿಸಿದ್ದಾರೆ ಎಂದು ಮೆಹುಲ್ ಚೋಕ್ಸಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆ ಕೇಸ್​ನಲ್ಲಿ ಜಾಮೀನು ಕೋರಿ ಚೋಕ್ಸಿ ಅರ್ಜಿ ಸಲ್ಲಿಸಿದ್ದರು.


ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಚೋಕ್ಸಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಚೋಕ್ಸಿ ಪರ ವಕೀಲ ವಿಜಯ್ ಅಗರ್​ವಾಲ್, ನಾವು ಉನ್ನತ ಮಟ್ಟದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದೇವೆ ಎಂದಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮೆಹುಲ್ ಚೋಕ್ಸಿ ಆಸ್ಪತ್ರೆಯಿಂದಲೇ ವರ್ಚುವಲ್ ವಿಚಾರಣೆಗೆ ಹಾಜರಾಗಿದ್ದಾರೆ. ಡೊಮಿನಿಕಾ ಹೈಕೋರ್ಟ್​ನಲ್ಲಿ ಮೆಹುಲ್ ಚೋಕ್ಸಿ ಗಡಿಪಾರು ಪ್ರಕರಣದ ವಿಚಾರಣೆಯೂ ಇಂದು ನಡೆಯಲಿದೆ.


ಮೆಹುಲ್ ಚೋಕ್ಸಿಯನ್ನು ಗಡಿಪಾರು ಮಾಡಿದ ಬಳಿಕ ಆತನನ್ನು ಭಾರತಕ್ಕೆ ಕರೆತರಲು ಈಗಾಗಲೇ ದೆಹಲಿಯಿಂದ ಪ್ರೈವೇಟ್ ಜೆಟ್ ಕಳುಹಿಸಲಾಗಿದ್ದು, ಸಿಬಿಐ ಡಿಐಜಿ ನೇತೃತ್ವದ ತಂಡ ಕೂಡ ಡೊಮಿನಿಕಾಗೆ ತೆರಳಿದೆ. ಡೊಮಿನಿಕಾ ದ್ವೀಪದಲ್ಲಿ ಚೋಕ್ಸಿಯನ್ನು ಸಿನಿಮೀಯವಾಗಿ ಬಂಧಿಸಲಾಗಿದ್ದು, ಆ್ಯಂಟಿಗುವಾ ಪ್ರಜೆಯಾಗಿರುವ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ದೆಹಲಿಯಿಂದ ಆ್ಯಂಟಿಗುವಾಕ್ಕೆ ವಿಶೇಷ ಜೆಟ್ ಕಳುಹಿಸಲಾಗಿದೆ. ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ದೆಹಲಿಯಿಂದ ಬೋಂಬರ್ಡಿಯರ್ ಗ್ಲೋಬಲ್ 5000 ಜೆಟ್ ಅನ್ನು ಕಳುಹಿಸಲಾಗಿದೆ. ಈ ಚಾರ್ಟರ್ ಜೆಟ್​ಗೆ 1 ಗಂಟೆಗೆ 8.46 ಲಕ್ಷ ರೂ. ನೀಡಬೇಕು. ಆ್ಯಂಟಿಗುವಾದಿಂದ ಭಾರತಕ್ಕೆ ಸುಮಾರು 16ರಿಂದ 17 ಗಂಟೆಗಳ ಕಾಲ ಪ್ರಯಾಣ ಮಾಡಬೇಕು. ಹೀಗಾಗಿ, ಈಗಾಗಲೇ ದೆಹಲಿಯಿಂದ ಆ್ಯಂಟಿಗುವಾಗೆ ತೆರಳುವುದಕ್ಕೆ ಈ ಜೆಟ್​ಗೆ 1.35 ಕೋಟಿಯಿಂದ 1.43 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ವಾಪಾಸ್ ಕರೆತರಲು 2.75ರಿಂದ 2.86 ಕೋಟಿ ರೂ. ಖರ್ಚಾಗಲಿದೆ. ಇದಲ್ಲದೆ, ಈ ಜೆಟ್​ಗೆ ಜಿಎಸ್​ಟಿ ಕೂಡ ಕಟ್ಟಬೇಕು.


ಇದಿಷ್ಟು ಮಾತ್ರವಲ್ಲದೆ, ಈ ಜೆಟ್​ ಅನ್ನು ಕಳುಹಿಸಿದ ಏಜೆನ್ಸಿಗೆ ಎರಡೂ ದೇಶಗಳೂ 5,11,000 ರೂ. ನೀಡಬೇಕು. ಇದಲ್ಲದೆ, ಇಂಧನದ ಖರ್ಚು ಅದೂ ಇದು ಎಂದು ಹಣ ಖರ್ಚಾಗುತ್ತದೆ. ಹಾಗೇ, ಈಗಾಗಲೇ ಆ್ಯಂಟಿಗುವಾಗೆ ತೆರಳಿರುವ ಜೆಟ್​ಗೆ ಸುಮಾರು 1 ಲಕ್ಷ ರೂ. ಹಾಲ್ಟಿಂಗ್ ಚಾರ್ಜಸ್ ಕೂಡ ನೀಡಬೇಕು.


ಇದನ್ನೂ ಓದಿ: Mehul Choksi | ಮೆಹುಲ್ ಚೋಕ್ಸಿ ಭಾರತಕ್ಕೆ ಗಡಿಪಾರು?; ಡೊಮಿನಿಕಾ ಹೈಕೋರ್ಟ್​ನಲ್ಲಿ ಇಂದು ವಿಚಾರಣೆ


ಆಂಟಿಗುವಾ ದ್ವೀಪದಿಂದ ನಾಪತ್ತೆಯಾಗಿದ್ದ ಭಾರತದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಕ್ಯೂಬಾಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿತ್ತು. ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಯನ್ನು ಬಂಧಿಸಿದ್ದರು. ಪಿಎನ್​ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್‌) ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿಗಳಲ್ಲಿ ಒಬ್ಬರಾಗಿರುವ ಮೆಹುಲ್ ಚೋಕ್ಸಿ ಈಗ ಡೊಮಿನಿಕಾದಲ್ಲಿ ಬಂಧನದಲ್ಲಿದ್ದಾರೆ.


62 ವರ್ಷದ ಚೋಕ್ಸಿ, ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬಡೋಸ್‌ನಲ್ಲಿ ನೆಲೆಸಿದ್ದರು. ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಯತ್ನ ನಡೆಸಿರುವ ಸಂದರ್ಭದಲ್ಲಿಯೇ ಅವರು ಆಂಟಿಗುವಾದಿಂದಲೂ ಪಲಾಯನ ಮಾಡಲು ಯೋಜನೆ ರೂಪಿಸಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗಾಗಿ ಹಲವು ವರ್ಷಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಡೊಮಿನಿಕಾ ಮತ್ತು ಆಂಟಿಗುವಾ ಸರ್ಕಾರವನ್ನು ಕೇಳಿತ್ತು.


ಭಾರತದಿಂದ ಯೆಲ್ಲೋ ಕಾರ್ನರ್​ ನೊಟೀಸ್​ ಜಾರಿಯಾದ ನಂತರ, ದೇಶಬಿಟ್ಟು ಪರಾರಿಯಾಗಲು ಚೋಕ್ಸಿ ಯತ್ನಿಸಿದರೆ ಪೌರತ್ವ ಹಿಂಪಡೆಯುವುದಾಗಿ ಆಂಟಿಗುವಾ ಹೇಳಿತ್ತು. ಮೇಹುಲ್​ ಚೋಕ್ಸಿ ಮತ್ತು ನೀರವ್​ ಮೋದಿ ಇಬ್ಬರೂ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಇಂದ ರೂ. 13,500 ಕೋಟಿ ಸಾಲ ಪಡೆದು ವಂಚಿಸಿದ್ದರು. ಜಾರಿ ನಿರ್ದೇಶನಾಲಯಕ್ಕೆ ವಂಚನೆಯ ವಾಸನೆ ಬಂದ ತಕ್ಷಣ ಇಬ್ಬರೂ ದೇಶ ಬಿಟ್ಟು ಕಾಲ್ಕಿತ್ತಿದ್ದರು. ಸದ್ಯ ನೀರವ್​​ ಮೋದಿ ಇಂಗ್ಲೆಂಡ್​ನ ಜೈಲಿನಲ್ಲಿದ್ದು, ಕೋರ್ಟ್​​ ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದೆ. ಆದರೆ ನೀರವ್​ ಕೋರ್ಟ್​ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿದ್ದಾರೆ.

Published by:Sushma Chakre
First published: