Mehul Choksi | ಗರ್ಲ್​ಫ್ರೆಂಡ್ ಜೊತೆ ರೊಮ್ಯಾಂಟಿಕ್ ಟ್ರಿಪ್​ಗೆ ಹೋಗಿದ್ದ ಮೆಹುಲ್ ಚೋಕ್ಸಿಗೆ ಕಾದಿತ್ತು ಶಾಕ್!

Mehul Choksi Arrest: ಮೆಹುಲ್ ಚೋಕ್ಸಿ ತಮ್ಮ ಗರ್ಲ್​ಫ್ರೆಂಡ್ ಜೊತೆಗೆ ಡೊಮಿನಿಕಾಗೆ ಪ್ರಯಾಣ ಮಾಡಿದ್ದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಅಲ್ಲಿಯೇ ಅವರನ್ನು ಅರೆಸ್ಟ್ ಮಾಡಲಾಯಿತು ಎಂದು ಆ್ಯಂಟಿಗುವಾ ಪ್ರಧಾನಿ ಹೇಳಿದ್ದಾರೆ.

ಮೆಹುಲ್ ಚೋಕ್ಸಿ

ಮೆಹುಲ್ ಚೋಕ್ಸಿ

  • Share this:
ನವದೆಹಲಿ (ಮೇ 31): ಭಾರತದಿಂದ ತಲೆಮರೆಸಿಕೊಂಡಿದ್ದ ಪಿಎನ್​ಬಿ ಹಗರಣದ ಆರೋಪಿ, ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಕಳೆದ ಸೋಮವಾರ ರಾತ್ರಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿತ್ತು. ಹಾಗಾದರೆ, ಮೆಹುಲ್ ಚೋಕ್ಸಿ ಡೊಮಿನಿಕಾಗೆ ಹೋಗಿದ್ದಾದರೂ ಏಕೆ? ಎಂಬ ಪ್ರಶ್ನೆ ಎದುರಾಗಿತ್ತು. ಮೆಹುಲ್ ಚೋಕ್ಸಿ ತಮ್ಮ ಪ್ರೇಯಸಿಯೊಂದಿಗೆ ಡೊಮಿನಿಕಾ ದ್ವೀಪಕ್ಕೆ ರೊಮ್ಯಾಂಟಿಕ್ ಟ್ರಿಪ್ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಮೆಹುಲ್ ಚೋಕ್ಸಿ ತಮ್ಮ ಗರ್ಲ್​ಫ್ರೆಂಡ್ ಜೊತೆಗೆ ಡೊಮಿನಿಕಾಗೆ ಪ್ರಯಾಣ ಮಾಡಿದ್ದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಅಲ್ಲಿಯೇ ಆತನನ್ನು ಅರೆಸ್ಟ್ ಮಾಡಲಾಯಿತು. ಅವರನ್ನು ಭಾರತಕ್ಕೆ ವಾಪಾಸ್ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆ್ಯಂಟಿಗುವಾ ಪ್ರಧಾನಿ ಹೇಳಿದ್ದಾರೆ. ಆದರೆ, ಮೆಹುಲ್ ಚೋಕ್ಸಿ ಈಗ ಭಾರತದ ಪ್ರಜೆಯಲ್ಲ, ಹೀಗಾಗಿ, ಅವರನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಚೋಕ್ಸಿ ಪರ ವಕೀಲ ಹೇಳಿದ್ದಾರೆ.

ಪೂರ್ವ ಕೆರಿಬಿಯನ್ ಸಮುದ್ರದ ಒಂದು ದ್ವೀಪ ಡೊಮಿನಿಕಾ. ಲೆಸ್ಸರ್ ಆಂಟಿಲಿಸ್ ಗ್ರೂಪ್ ಆಫ್ ಐಲ್ಯಾಂಡ್ಸ್​ ಗೆ ಸೇರಿದ ಒಂದು ದ್ವೀಪ ಇದು. ಸರಳವಾಗಿ ಹೇಳಬೇಕೆಂದರೆ ಲೆಸ್ಸರ್ ಆಂಟಿಲಿಸ್, ಗ್ರೇಟರ್ ಆಂಟಿಲಿಸ್ ಮತ್ತು ಲುಕಾಯನ್ ಆರ್ಕಿಪೆಲಾಗೊ ಸೇರಿದರೆ ವೆಸ್ಟ್​ ಇಂಡೀಸ್ ಆಗುತ್ತದೆ. ಫ್ರಾನ್ಸ್​ಗೆ ಸೇರಿದ ಗುಡೆಲೊಪ್ ದ್ವೀಪ್ ಡೊಮಿನಿಕಾದ ಉತ್ತರದಲ್ಲಿದೆ. ಸುಂದರ ಬೀಚ್​ಗಳು, ಸಸ್ಯರಾಶಿಯಿಂದ ನೋಡೋಕೆ ಅದ್ಭುತ ಎನಿಸುವಂತಿದೆ. ಹೀಗಾಗಿ, ಇಲ್ಲಿ ತಮ್ಮ ಸುಂದರ ಸಮಯವನ್ನು ಕಳೆಯಲು ಮೆಹುಲ್ ಚೋಕ್ಸಿ ತಮ್ಮ ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲೇ ಅವರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಮೆಹುಲ್ ಚೋಕ್ಸಿ ಡೊಮಿನಿಕಾಗೆ ಅಕ್ರಮ ಪ್ರವೇಶ ಮಾಡಿರುವುದರಿಂದ ಅವರನ್ನು ಡೊಮಿನಿಕಾದಿಂದ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ಆ್ಯಂಟಿಗುವಾ ಮತ್ತು ಬರ್ಬುದಾ ಪ್ರಧಾನಿ ಗ್ಯಾಸ್ಟನ್ ಬ್ರೌನೆ ಹೇಳಿದ್ದರು. ಹೀಗಾಗಿ, ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಿಂದ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ದೆಹಲಿಯಿಂದ ಡೊಮಿನಿಕಾಗೆ ವಿಮಾನವೊಂದನ್ನು ಕಳುಹಿಸಲಾಗಿದೆ. ಇದರ ನಡುವೆ ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿ ಜೈಲಿನೊಳಗಿರುವ ಫೋಟೋವೊಂದು ಹೊರಬಿದ್ದಿದ್ದು, ಅವರಿಗೆ ಜೈಲಿನಲ್ಲಿ ಥಳಿಸಿ, ಹಿಂಸೆ ನೀಡಲಾಗಿದೆ ಎಂದು ಚೋಕ್ಸಿ ಪರ ವಕೀಲ ಆರೋಪಿಸಿದ್ದಾರೆ.

ಇದನ್ನೂ ಓದಿ: Mehul Choksi: ಮೆಹುಲ್ ಚೋಕ್ಸಿ ಅರೆಸ್ಟ್ ಆದ್ಮೇಲೆ ಎಲ್ರೂ ಹುಡುಕುತ್ತಿರೋ ಡೊಮಿನಿಕಾ ದೇಶ ಎಲ್ಲಿದೆ ಗೊತ್ತಾ?

ಮೆಹುಲ್ ಚೋಕ್ಸಿ ಅವರ ಫೋಟೋದಲ್ಲಿ ಅವರ ಕೈಗಳ ಮೇಲೆ ಥಳಿಸಿದ ಗಾಯಗಳಾಗಿದ್ದು, ಒಂದು ಕಣ್ಣು ಕೆಂಪಾಗಿ ಊದಿಕೊಂಡಿದೆ. ಈ ಫೋಟೋವನ್ನು ಮೆಹುಲ್ ಚೋಕ್ಸಿ ಅವರ ವಕೀಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಜೈಲಿನಲ್ಲಿರುವ ನನ್ನ ಕಕ್ಷಿದಾರ ಚೋಕ್ಸಿಗೆ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮೆಹುಲ್ ಚೋಕ್ಸಿ ಅವರನ್ನು ಬಲವಂತವಾಗಿ ಅಪಹರಿಸಲಾಗಿದೆ ಎಂದು ವಕೀಲರು ಆರೋಪಿಸಿದ ಕೆಲವೇ ದಿನಗಳ ಬಳಿಕ ಅವರು ಈ ಫೋಟೋಗಳನ್ನು ರಿಲೀಸ್ ಮಾಡಿದ್ದಾರೆ. ಈ ಹಿಂದೆ ಪೊಲೀಸರು ಚೋಕ್ಸಿ ಅವರನ್ನು ಥಳಿಸಿ, ಡೊಮಿನಿಕಾಗೆ ಎಳೆದುಕೊಂಡು ಹೋಗಿ, ಜೈಲಿಗೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: Mehul Choksi: ಊದಿದ ಕಣ್ಣು, ಕೈಗಳಲ್ಲಿ ಗಾಯ; ಡೊಮಿನಿಕಾ ಜೈಲಿನಲ್ಲಿರುವ ಮೆಹುಲ್ ಚೋಕ್ಸಿ ಮೊದಲ ಫೋಟೋ ರಿಲೀಸ್

ಕಳೆದ ಸೋಮವಾರ ಸಂಜೆ ಆಂಟಿಗುವಾ ದ್ವೀಪದಿಂದ ನಾಪತ್ತೆಯಾಗಿದ್ದ ಭಾರತದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಕ್ಯೂಬಾಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿದೆ. ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಯನ್ನು ಬಂಧಿಸಿದ್ದರು. ಪಿಎನ್​ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್‌) ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿಗಳಲ್ಲಿ ಒಬ್ಬರಾಗಿರುವ ಮೆಹುಲ್ ಚೋಕ್ಸಿ ಈಗ ಡೊಮಿನಿಕಾದಲ್ಲಿ ಬಂಧನದಲ್ಲಿದ್ದಾರೆ.

62 ವರ್ಷದ ಚೋಕ್ಸಿ, ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬಡೋಸ್‌ನಲ್ಲಿ ನೆಲೆಸಿದ್ದರು. ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಯತ್ನ ನಡೆಸಿರುವ ಸಂದರ್ಭದಲ್ಲಿಯೇ ಅವರು ಆಂಟಿಗುವಾದಿಂದಲೂ ಪಲಾಯನ ಮಾಡಲು ಯೋಜನೆ ರೂಪಿಸಿದ್ದರು.

ಇದನ್ನೂ ಓದಿ: Mehul Choksi: PNB ಹಗರಣ; ಡೊಮಿನಿಕಾದಿಂದ ಮೆಹುಲ್ ಚೋಕ್ಸಿ ಗಡಿಪಾರು ಸಾಧ್ಯತೆ; ದೆಹಲಿಯಿಂದ ವಿಮಾನ ರವಾನೆ

ಸೋಮವಾರ ಸಂಜೆ ಮನೆಯಿಂದ ಹೊರಹೋಗಿದ್ದ ಚೋಕ್ಸಿ, ದೋಣಿಯೊಂದರಲ್ಲಿ ಪುಟ್ಟ ದ್ವೀಪವಾದ ಡೊಮಿನಿಕಾಕ್ಕೆ ತೆರಳಿದ್ದರು. ಆತನ ವಿರುದ್ಧ ಆಂಟಿಗುವಾ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ಚೋಕ್ಸಿಯನ್ನು ಗಮನಿಸಿದ ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಆತನನ್ನು ಬಂಧಿಸಿದ್ದರು. ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎನ್ನಲಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಡೊಮಿನಿಕಾಗೆ ದೆಹಲಿಯಿಂದ ವಿಮಾನವನ್ನು ಕಳುಹಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗಾಗಿ ಹಲವು ವರ್ಷಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಡೊಮಿನಿಕಾ ಮತ್ತು ಆಂಟಿಗುವಾ ಸರ್ಕಾರವನ್ನು ಕೇಳಿತ್ತು.

ಭಾರತದಿಂದ ಯೆಲ್ಲೋ ಕಾರ್ನರ್​ ನೊಟೀಸ್​ ಜಾರಿಯಾದ ನಂತರ, ದೇಶಬಿಟ್ಟು ಪರಾರಿಯಾಗಲು ಚೋಕ್ಸಿ ಯತ್ನಿಸಿದರೆ ಪೌರತ್ವ ಹಿಂಪಡೆಯುವುದಾಗಿ ಆಂಟಿಗುವಾ ಹೇಳಿತ್ತು. ಮೇಹುಲ್​ ಚೋಕ್ಸಿ ಮತ್ತು ನೀರವ್​ ಮೋದಿ ಇಬ್ಬರೂ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಇಂದ 13,500 ಕೋಟಿ ರೂ. ಸಾಲ ಪಡೆದು ವಂಚಿಸಿದ್ದರು. ಜಾರಿ ನಿರ್ದೇಶನಾಲಯಕ್ಕೆ ವಂಚನೆಯ ವಾಸನೆ ಬಂದ ತಕ್ಷಣ ಇಬ್ಬರೂ ದೇಶ ಬಿಟ್ಟು ಕಾಲ್ಕಿತ್ತಿದ್ದರು. ಸದ್ಯ ನೀರವ್​​ ಮೋದಿ ಇಂಗ್ಲೆಂಡ್​ನ ಜೈಲಿನಲ್ಲಿದ್ದು, ಕೋರ್ಟ್​​ ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದೆ. ಆದರೆ ನೀರವ್​ ಕೋರ್ಟ್​ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿದ್ದಾರೆ.
Published by:Sushma Chakre
First published: