ನವದೆಹಲಿ (ಜೂನ್ 1): ಪಿಎನ್ಬಿ ಹಗರಣದಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿ, ಭಾರತದಿಂದ ತಲೆಮರೆಸಿಕೊಂಡಿದ್ದ ಆರೋಪಿ, ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿದೆ. ಆ್ಯಂಟಿಗುವಾ ಪ್ರಜೆಯಾಗಿರುವ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಆ್ಯಂಟಿಗುವಾ ಪ್ರಧಾನಿ ಗ್ಯಾಸ್ಟನ್ ಬ್ರೌನೆ ಹೇಳಿದ್ದರು. ಆದರೆ, ಅದಕ್ಕೆ ಚೋಕ್ಸಿ ಪರ ವಕೀಲ ಸೇರಿದಂತೆ ಅಲ್ಲಿನ ವಿಪಕ್ಷಗಳ ಕೆಲವರು ಕೂಡ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಆ್ಯಂಟಿಗುವಾದ ವಿಪಕ್ಷ ನಾಯಕಿ ಗಿಸೆಲ್ ಇಸ್ಸಾಕ್, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಯುನೈಟೆಡ್ ಪ್ರೋಗ್ರೆಸಿವ್ ಪಾರ್ಟಿಯಿಂದ ಯಾವುದೇ ವಿರೋಧವಿಲ್ಲ. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆದರೆ, ಆ್ಯಂಟಿಗುವಾ ಪ್ರಧಾನಿ ಬ್ರೌನೆ ಈ ನಿಟ್ಟಿನಲ್ಲಿ ಕಾನೂನು ಕ್ರಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ನಮ್ಮ ವಿರೋಧವಿದೆ ಎಂದಿದ್ದಾರೆ.
ಮೆಹುಲ್ ಚೋಕ್ಸಿಯನ್ನು ಆ್ಯಂಟಿಗುವಾದಿಂದ ಅಪಹರಿಸಿ, ಡೊಮಿನಿಕಾಗೆ ಕರೆದುಕೊಂಡು ಹೋಗಿ ಅಲ್ಲಿ ಬಂಧಿಸಿದ್ದು ಪೂರ್ವ ನಿಯೋಜಿತ ಪ್ಲಾನ್ ಎಂದು ಅವರ ವಕೀಲರು ಆರೋಪಿಸಿದ್ದಾರೆ. ನಿಮಗೂ ಹಾಗೇ ಅನಿಸುತ್ತದೆಯೇ? ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ವಿಪಕ್ಷ ನಾಯಕಿ ಗಿಸೆಲ್, ಆತನನ್ನು ಕಿಡ್ನಾಪ್ ಮಾಡಿ ಡೊಮಿನಿಕಾಗೆ ಕರೆದುಕೊಂಡು ಹೋಗಲಾಗಿದೆ ಎಂದು ನನಗೆ ಕೂಡ ಅನಿಸುತ್ತಿದೆ. ಭಾರತದಿಂದ ಪರಾರಿಯಾಗಿದ್ದ ಮೆಹುಲ್ ಚೋಕ್ಸಿ ತನ್ನ ಸುರಕ್ಷತಾ ದೃಷ್ಟಿಯಿಂದಲೇ ಆ್ಯಂಟಿಗುವಾದ ಪೌರತ್ವ ಪಡೆದು, ಇಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಅವರಿಗೆ ಇಲ್ಲಿ ಯಾವ ನಿರ್ಬಂಧಗಳೂ ಇರಲಿಲ್ಲ. ಅವರು ಎಲ್ಲಿಗೆ ಬೇಕಾದರೂ ಹೋಗಲು ಅವರಿಗೆ ಅವಕಾಶವಿತ್ತು, ಅವರ ಕೈಯಲ್ಲಿ ಬೇಕಾದಷ್ಟು ಹಣವಿತ್ತು. ಹಾಗಿದ್ದಾಗ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಅವರು ಏಕೆ ಡೊಮಿನಿಕಾಗೆ ಹೋಗುತ್ತಾರೆ? ಆತನ ಮೇಲೆ ಎಲ್ಲರೂ ಹದ್ದಿನ ಕಣ್ಣಿಟ್ಟಿರುವಾಗ, ಆತನನ್ನು ಗಡಿಪಾರು ಮಾಡಲು ಸಿದ್ಧತೆಗಳು ನಡೆದಿರುವಾಗ ಆತ ಏಕೆ ಡೊಮಿನಿಕಾಗೆ ಹೋಗಿ ಸಿಕ್ಕಿಬೀಳುತ್ತಾರೆ? ಅವರು ಡೊಮಿನಿಕಾದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಲು ಕಾರಣವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Mehul Choksi: PNB ಹಗರಣ; ಡೊಮಿನಿಕಾದಿಂದ ಮೆಹುಲ್ ಚೋಕ್ಸಿ ಗಡಿಪಾರು ಸಾಧ್ಯತೆ; ದೆಹಲಿಯಿಂದ ವಿಮಾನ ರವಾನೆ
ಯುನೈಟೆಡ್ ಪ್ರೋಗ್ರೆಸಿವ್ ಪಾರ್ಟಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಎಂದಿಗೂ ವಿರೋಧಿಸಿಲ್ಲ. ಮೆಹುಲ್ ಚೋಕ್ಸಿ ಆ್ಯಂಟಿಗುವಾದ ಪ್ರಜೆಯಾಗಿದ್ದು, ಆತನ ಪೌರತ್ವದ ಪ್ರಕಾರ ಆತನಿಗಿರುವ ಕಾನೂನುಬದ್ಧವಾದ ಹಕ್ಕುಗಳನ್ನು ಆತನಿಂದ ಕಿತ್ತುಕೊಳ್ಳಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ. ಈಗಾಗಲೇ ಆ್ಯಂಟಿಗುವಾದಲ್ಲಿ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಿದೆ. ನಾವು ಯಾವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂಬ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಸರಿಯಾದ ಕ್ರಮದಲ್ಲಿ ಪ್ರಧಾನಿ ಬ್ರೌನೆ ಮುಂದುವರೆದರೆ ನಮ್ಮ ಸಹಕಾರ ಇದ್ದೇ ಇರುತ್ತದೆ. ನಮ್ಮ ಪ್ರಧಾನಿಗಳ ಈಗಿನ ಧೋರಣೆಯನ್ನು ನೋಡಿದರೆ ಆ್ಯಂಟಿಗುವಾದ ಯಾವ ಪ್ರಜೆಯನ್ನಾದರೂ ಬೇರೆ ರಾಷ್ಟ್ರದವರು ಬಂದು ಕರೆದುಕೊಂಡು ಹೋಗಲು ಅನುಮತಿ ಕೊಡುವಂತಿದೆ. ಇದನ್ನು ನಾವು ಒಪ್ಪುವುದಿಲ್ಲ. ಇದರಿಂದ ನಮ್ಮ ದೇಶದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ನಮ್ಮ ದೇಶದ ನಾಗರಿಕರಿಗೆ ಇರುವ ಹಕ್ಕುಗಳನ್ನು ಚೋಕ್ಸಿಗೂ ನೀಡಿ ಎಂದು ನಾವು ಕೇಳಿಕೊಳ್ಳುತ್ತಿದ್ದೇವೆ ಎಂದು ಆ್ಯಂಟಿಗುವಾ ವಿರೋಧ ಪಕ್ಷದ ನಾಯಕಿ ಗಿಸೆಲ್ ಐಸಾಕ್ ಹೇಳಿದ್ದಾರೆ.
ನನಗಿರುವ ಮಾಹಿತಿ ಪ್ರಕಾರ, ಭಾರತದ ಪ್ರಜೆಯಾದವನು ಒಮ್ಮೆ ಬೇರೆ ರಾಷ್ಟ್ರದ ಪೌರತ್ವ ಪಡೆದರೆ ಭಾರತದಲ್ಲಿ ಆತನ ಪೌರತ್ವ ರದ್ದಾಗುತ್ತದೆ. ಭಾರತದಲ್ಲಿ ದ್ವಿ ಪೌರತ್ವ ವ್ಯವಸ್ಥೆಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೆಹುಲ್ ಚೋಕ್ಸಿ ಈಗ ಆ್ಯಂಟಿಗುವಾ ಪ್ರಜೆಯಾಗಿದ್ದಾರೆ. 2018ರಿಂದ ಅವರು ಇಲ್ಲಿನ ಪೌರತ್ವ ಪಡೆದಿದ್ದಾರೆ. ಆತನಿಗೆ ಪೌರತ್ವ ನೀಡಿದ್ದು ಕೂಡ ಬ್ರೌನೆ ಅವರ ಸರ್ಕಾರವೇ! ಹೀಗಿರುವಾಗ ಏಕಾಏಕಿ ನಮ್ಮ ದೇಶದ ಪ್ರಜೆಯನ್ನು ಬೇರೆ ದೇಶಕ್ಕೆ ಗಡಿಪಾರು ಮಾಡುವ ನಿರ್ಧಾರವನ್ನು ಪ್ರಧಾನಿಯಾಧವರು ತೆಗೆದುಕೊಂಡರೆ ನಾವದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ನಾವು ಎಂದಿಗೂ ಚೋಕ್ಸಿಯಿಂದ ಹಣ ಪಡೆದಿಲ್ಲ. ಆದರೆ, ಪ್ರಧಾನಿ ಬ್ರೌನೆ ಚೋಕ್ಸಿಯಿಂದ ಭಾರೀ ಮೊತ್ತದ ಹಣ ಪಡೆದು ಆತನಿಗೆ ಪೌರತ್ವ ನೀಡಿದ್ದಾರೆ. ಚೋಕ್ಸಿಯಿಂದ ಆಡಳಿತ ಪಕ್ಷದವರು ದುಡ್ಡು ಮಾಡಿದ್ದಾರೆಯೇ ವಿನಃ ನಾವಲ್ಲ. ಈಗ ನಾವು ಮೆಹುಲ್ ಚೋಕ್ಸಿಯಿಂದ ಹಣ ಪಡೆದು ಆತನನ್ನು ಗಡಿಪಾರು ಮಾಡಲು ವಿರೋಧಿಸುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂದು ಗಿಸೆಲ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Mehul Choksi: ಊದಿದ ಕಣ್ಣು, ಕೈಗಳಲ್ಲಿ ಗಾಯ; ಡೊಮಿನಿಕಾ ಜೈಲಿನಲ್ಲಿರುವ ಮೆಹುಲ್ ಚೋಕ್ಸಿ ಮೊದಲ ಫೋಟೋ ರಿಲೀಸ್
ಜೈಲಿನಲ್ಲಿ ಮೆಹುಲ್ ಚೋಕ್ಸಿಗೆ ಮನಬಂದಂಥೆ ಥಳಿಸಿರುವ ಫೋಟೋಗಳು ಈಗಾಗಲೇ ಎಲ್ಲೆಡೆ ಹಡಿದಾಡುತ್ತಿವೆ. ಅದನ್ನು ಅವರ ವಕೀಲರೇ ರಿಲೀಸ್ ಮಾಡಿದ್ದಾರೆ. ಇದು ಏನನ್ನು ಸಾರುತ್ತಿದೆ? ಮೆಹುಲ್ ಚೋಕ್ಸಿ ಚಾಪ್ಟರ್ನಿಂದ ವಿಶ್ವದ ಮುಂದೆ ಆ್ಯಂಟಿಗುವಾದ ಇಮೇಜ್ ಹಾಳಾಗುತ್ತಿದೆ ಎಂಬುದಷ್ಟೇ ನಮ್ಮ ಕಾಳಜಿ ಎಂದು ವಿಪಕ್ಷ ನಾಯಕಿ ಗಿಸೆಲ್ ತಿಳಿಸಿದ್ದಾರೆ.
ಮೆಹುಲ್ ಚೋಕ್ಸಿ ತಮ್ಮ ಗರ್ಲ್ಫ್ರೆಂಡ್ ಜೊತೆಗೆ ಡೊಮಿನಿಕಾಗೆ ಪ್ರಯಾಣ ಮಾಡಿದ್ದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಅಲ್ಲಿಯೇ ಆತನನ್ನು ಅರೆಸ್ಟ್ ಮಾಡಲಾಯಿತು. ಅವರನ್ನು ಭಾರತಕ್ಕೆ ವಾಪಾಸ್ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆ್ಯಂಟಿಗುವಾ ಪ್ರಧಾನಿ ಹೇಳಿದ್ದರು. ಆದರೆ, ಮೆಹುಲ್ ಚೋಕ್ಸಿ ಈಗ ಭಾರತದ ಪ್ರಜೆಯಲ್ಲ, ಹೀಗಾಗಿ, ಅವರನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಚೋಕ್ಸಿ ಪರ ವಕೀಲ ಹೇಳಿದ್ದರು.
ಮೆಹುಲ್ ಚೋಕ್ಸಿ ಡೊಮಿನಿಕಾಗೆ ಅಕ್ರಮ ಪ್ರವೇಶ ಮಾಡಿರುವುದರಿಂದ ಅವರನ್ನು ಡೊಮಿನಿಕಾದಿಂದ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ಆ್ಯಂಟಿಗುವಾ ಮತ್ತು ಬರ್ಬುದಾ ಪ್ರಧಾನಿ ಗ್ಯಾಸ್ಟನ್ ಬ್ರೌನೆ ಹೇಳಿದ್ದರು. ಹೀಗಾಗಿ, ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಿಂದ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ದೆಹಲಿಯಿಂದ ಡೊಮಿನಿಕಾಗೆ ವಿಮಾನವೊಂದನ್ನು ಕಳುಹಿಸಲಾಗಿದೆ. ಇದರ ನಡುವೆ ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿ ಜೈಲಿನೊಳಗಿರುವ ಫೋಟೋವೊಂದು ಹೊರಬಿದ್ದಿದ್ದು, ಅವರಿಗೆ ಜೈಲಿನಲ್ಲಿ ಥಳಿಸಿ, ಹಿಂಸೆ ನೀಡಲಾಗಿದೆ ಎಂದು ಚೋಕ್ಸಿ ಪರ ವಕೀಲ ಆರೋಪಿಸಿದ್ದರು.
ಇದನ್ನೂ ಓದಿ: Mehul Choksi | ಗರ್ಲ್ಫ್ರೆಂಡ್ ಜೊತೆ ರೊಮ್ಯಾಂಟಿಕ್ ಟ್ರಿಪ್ಗೆ ಹೋಗಿದ್ದ ಮೆಹುಲ್ ಚೋಕ್ಸಿಗೆ ಕಾದಿತ್ತು ಶಾಕ್!
ಮೆಹುಲ್ ಚೋಕ್ಸಿ ಅವರ ಫೋಟೋದಲ್ಲಿ ಅವರ ಕೈಗಳ ಮೇಲೆ ಥಳಿಸಿದ ಗಾಯಗಳಾಗಿದ್ದು, ಒಂದು ಕಣ್ಣು ಕೆಂಪಾಗಿ ಊದಿಕೊಂಡಿತ್ತು. ಈ ಫೋಟೋವನ್ನು ಮೆಹುಲ್ ಚೋಕ್ಸಿ ಅವರ ವಕೀಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಜೈಲಿನಲ್ಲಿರುವ ನನ್ನ ಕಕ್ಷಿದಾರ ಚೋಕ್ಸಿಗೆ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
62 ವರ್ಷದ ಚೋಕ್ಸಿ, ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬಡೋಸ್‌ನಲ್ಲಿ ನೆಲೆಸಿದ್ದರು. ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಯತ್ನ ನಡೆಸಿರುವ ಸಂದರ್ಭದಲ್ಲಿಯೇ ಅವರು ಆಂಟಿಗುವಾದಿಂದಲೂ ಪಲಾಯನ ಮಾಡಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಈ ವೇಳೆ ಅವರು ಆ್ಯಂಟಿಗುವಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗಾಗಿ ಹಲವು ವರ್ಷಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಡೊಮಿನಿಕಾ ಮತ್ತು ಆಂಟಿಗುವಾ ಸರ್ಕಾರವನ್ನು ಕೇಳಿತ್ತು. ಅದರಂತೆ ಈಗ ಆ್ಯಂಟಿಗುವಾದಿಂದ ಮೆಹುಲ್ ಚೋಕ್ಸಿಯನ್ನು ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಿದೆ.
(ವರದಿ: ಶ್ರೇಯಾ ದೌಂಡಿಯಾಲ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ