ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಾವಿರಾರು ಕೋಟಿ ವಂಚಿಸಿ ದೇಶ ತೊರೆದಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಭಾರತ ಹಸ್ತಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಚೋಕ್ಸಿ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ನಾನೊಬ್ಬ ಕಾನೂನು ಪಾಲಿಸುವ ವ್ಯಕ್ತಿ. 2018ರವರೆಗೂ ಭಾರತದ ತನಿಖಾದಳಗಳು ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ನಾನು ಭಾರತ ತ್ಯಜಿಸುವಾಗ ನನ್ನ ವಿರುದ್ಧ ಯಾವುದೇ ವಾರೆಂಟ್ ಜಾರಿಯಾಗಿರಲಿಲ್ಲ. 2018ರಲ್ಲಿ ನನ್ನ ವೈದ್ಯಕೀಯ ಚಿಕಿತ್ಸೆಗಾಗಿ ನಾನು ಅಮೆರಿಕಕ್ಕೆ ಹೋಗಿದ್ದು. ಭಾರತದ ಅಧಿಕಾರಿಗಳು ಇಲ್ಲಿಗೆ ಬಂದು ನನ್ನ ವಿಚಾರಣೆ ನಡೆಸಲಿ, ಯಾವುದೇ ಪ್ರಶ್ನೆಗಳನ್ನಾದರೂ ಕೇಳಲಿ ಎಂದು ಮೆಹುಲ್ ಚೋಕ್ಸಿ ತಮ್ಮ ವಕೀಲರ ಮೂಲಕ 8 ಪುಟಗಳ ಅಫಿಡವಿಟ್ನಲ್ಲಿ ವಿವರಿಸಿದ್ದಾರೆ.
ನನಗೀಗ 62 ವರ್ಷ. ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಮಧುಮೇಹ ಸಮಸ್ಯೆಯೂ ಇದೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೃದಯದ ಸಮಸ್ಯೆಗಳು ಸೇರಿದಂತೆ ಹಲವು ವೈದ್ಯಕೀಯ ಸಮಸ್ಯೆಗಳಿವೆ”.ಇದು 13,500 ಕೋಟಿ ರೂಪಾಯಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ, ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ, ತಮಗೆ ಆಂಟಿಗುವಾಗೆ ಹೋಗಲು ಅನುಮತಿ ಬೇಕು ಎಂದು ಡೊಮಿನಿಕಾದ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿರುವ ಮಾಹಿತಿ.
ಇನ್ನೊಂದೆಡೆ, 2018ರಿಂದ ಆಂಟಿಗುವಾ ಮತ್ತು ಬರ್ಬುಡಾದ ಪ್ರಜೆಯಾಗಿರುವ ಮೆಹುಲ್ ಚೋಕ್ಸಿಯನ್ನು ಮೇ 23ರಂದು ಹನಿಟ್ರ್ಯಾಪ್ ಮಾಡಿ ಡೊಮಿನಿಕಾಗೆ ಅಪಹರಿಸಲಾಗಿದೆ ಎಂದು ಚೋಕ್ಸಿ ಪರ ವಕೀಲರು ಆಂಟಿಗುವಾ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಷಯ ಇರುವುದೇ ಇಲ್ಲಿ. ಡೊಮಿನಿಕಾದಲ್ಲಿ ಬಂಧನದಲ್ಲಿರುವ ಚೋಕ್ಸಿ ತಮ್ಮ ವಯಸ್ಸು, ಅನಾರೋಗ್ಯ ಇತ್ಯಾದಿಗಳ ಕಾರಣ ಕೊಟ್ಟು, ತಮ್ಮನ್ನು ಆಂಟಿಗುವಾಕ್ಕೆ ಮರಳಿ ಕಳಿಸಲು ಕೋರುತ್ತಿದ್ದಾರೆ. ಇನ್ನೊಂದೆಡೆ ಅವರ ಪರ ವಕೀಲರು, ಚೋಕ್ಸಿಯನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಇನ್ನೊಂದೆಡೆ ಭಾರತದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಮೆಹುಲ್ ಚೋಕ್ಸಿ ಪತ್ನಿ ಪ್ರೀತಿ ಕೂಡ ತನ್ನ ಪತಿಯನ್ನು ಹನಿಟ್ರ್ಯಾಪ್ ಮಾಡಿ ಅಪಹರಿಸಲಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ಹಾಗಾದರೆ ಇವರೆಡರಲ್ಲಿ ಯಾವುದು ಸತ್ಯ? ಮೆಹುಲ್ ಚೋಕ್ಸಿ ಆರೋಗ್ಯ ಅಷ್ಟೊಂದು ಹದಗೆಟ್ಟಿದ್ದರೆ ಅವರು ಮಹಿಳೆಯಿಂದ ಹನಿಟ್ರ್ಯಾಪ್ ಆಗಲು ಸಾಧ್ಯವೇ? ಚೋಕ್ಸಿ ಪತ್ನಿ ಪ್ರೀತಿ ಹೇಳಿಕೆಯಂತೆ ಆ ಅಜ್ಞಾತ ಮಹಿಳೆಯೇ ನಿಜವಾಗಿ ಹನಿಟ್ರ್ಯಾಪ್ ಮಾಡಿದ್ದರೆ ಚೋಕ್ಸಿ ಅವರ ಅನಾರೋಗ್ಯದ ಕತೆ ಕಟ್ಟು ಕತೆಯಾಗಿರಬಹುದೇ?
ಯಾರೀ ಬಾಬರಾ ಜಾರಬಿಕಾ ಎಂಬ ನಿಗೂಢ ಮಹಿಳೆ.?
ಮೆಹುಲ್ ಚೋಕ್ಸಿಯ ‘ಗರ್ಲ್ಫ್ರೆಂಡ್’ ಎನ್ನಲಾದ ಬಾಬರಾ ಜಾರಬಿಕಾ ಎಂಬ ಅಜ್ಞಾತ ಮಹಿಳೆಯೇ ಆತನನ್ನು ಆಂಟಿಗುವಾದಿಂದ ‘ಹನಿಟ್ರ್ಯಾಪ್’ ಮಾಡಿ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲು ಸಹಕರಿಸಿರುವುದು ಎಂದು ಚೋಕ್ಸಿ ಪತ್ನಿ ಪ್ರೀತಿ ಹಾಗೂ ಅವರ ವಕೀಲ ವಿಜಯ್ ಅಗರ್ವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಚೋಕ್ಸಿಯನ್ನು ಆಂಟಿಗುವಾದಿಂದ ಹೊರಗೊಯ್ದು ಭಾರತಕ್ಕೆ ಕರೆದೊಯ್ಯಲು ಭಾರತ ನಡೆಸಿರಬಹುದಾದ ಕಾರ್ಯಾಚರಣೆ ನಡೆದಿದ್ದು, ಅದರಲ್ಲಿ ಬಾಬರಾ ಜಾರಬಿಕಾ ಸಹಭಾಗಿಯಾಗಿರಬಹುದು ಎಂದು ಅವರು ಅನುಮಾನಿಸಿದ್ದಾರೆ.
ಆರು ತಿಂಗಳ ಹಿಂದೆ ತನ್ನ ಪತಿ ಚೋಕ್ಸಿ ಬೆಳಗ್ಗಿನ ವಾಕಿಂಗ್ ಗೆ ಹೋಗುವಾಗ ಬಾಬರಾ ಜಾರಬಿಕಾ ಪರಿಚಯವಾಗಿತ್ತು. ಮೇ 23ರಂದು ಆಕೆ, ಮೆಹುಲ್ ಚೋಕ್ಸಿಯನ್ನು ಆಂಟಿಗುವಾದ ಜಾಲಿ ಬಂದರಿನ ಬಳಿ ಇರುವ ತನ್ನ ಮನೆಗೆ ಡಿನ್ನರ್ ಗೆಂದು ಕರೆದಿದ್ದಳು. ಅಲ್ಲಿಂದ 8-10 ಪುರುಷರು ಚೋಕ್ಸಿಯ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಎಳೆದೊಯ್ದಿದ್ದಾರೆ ಎಂದು ಅವರು ಸಂಶಯಿಸಿದ್ದಾರೆ.
“ಆಕೆಯ ಅಸಲಿ ಹೆಸರು ಬಾಬರಾ ಜಾರಬಿಕಾ ಆಗಿರುವ ಬಗ್ಗೆ ಸಂಶಯವಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ಫೋಟೋ ಕೂಡ ಆಕೆಯದ್ದೇ ಆಗಿಲ್ಲದೇ ಇರಬಹುದು. ಆಕೆ ಆಂಟಿಗುವಾವಕ್ಕೆ ಆಗೊಮ್ಮೆ ಈಗೊಮ್ಮೆ ಭೇಟಿ ಮಾಡುತ್ತಿದ್ದಳು. ಕಳೆದ ಆಗಸ್ಟ್ ಕೊನೆಗೆ ಹಾಗೂ ಈ ವರ್ಷದ ಏಪ್ರಿಲ್ ಮತ್ತು ಮೇನಲ್ಲಿ ಆಕೆ ಇಲ್ಲಿಗೆ ಭೇಟಿ ಕೊಟ್ಟಿದ್ದಳು. ತಾನು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೋಳಿಕೊಂಡಿದ್ದಳು. ನನ್ನ ಗಂಡನ ಅಪಹರಣವಾದ ನಂತರ ಆಕೆಯೂ ನಾಪತ್ತೆಯಾಗಿದ್ದಾಳೆ. ಆಕೆ ಘಟನೆ ಬಗ್ಗೆ ಪೊಲೀಸರಿಗೆ ದೂರನ್ನೇಕೆ ನೋಡಿಲ್ಲ. ಬಹಿರಂಗವಾಗಿ ಈವರೆಗೆ ಕಾಣಿಸಿಕೊಂಡಿಲ್ಲ” ಎಂದು ಪ್ರೀತಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದೀಗ ಬಾಬರಾ ಜಾರಬಿಕಾ ವಿರುದ್ಧ ಸಂಶಯದ ಹುತ್ತ ಎದ್ದಿದೆ. ಆದರೆ ಚೋಕ್ಸಿಯ ಸುಳ್ಳಿನ ಕತೆಗಳ ಬಗೆಗೂ ಪುಕಾರು ಎದ್ದಿದೆ. ಆಂಟಿಗುವಾದ ಪ್ರಧಾನಿ ಗಾಸ್ಟನ್ ಬ್ರೌನ್ ಅವರೇ ಜಾರಬಿಕಾ ಅವರನ್ನು ಮೆಹುಲ್ ಚೋಕ್ಸಿಯ ಗರ್ಲ್ ಫ್ರೆಂಡ್ ಎಂದು ಹೇಳಿದ್ದರಲ್ಲದೆ, ಆಕೆಯೊಂದಿಗೆ ‘ಒಳ್ಳೆಯ ಸಮಯ’ ಕಳೆಯಲು ಡೊಮಿನಿಕಾಗೆ ತೆರಳಿದ್ದರು ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಒಟ್ಟು ಇಡೀ ಪ್ರಕರಣ ಗೊಂದಲದ ಗೂಡಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ