ನವದೆಹಲಿ (ಜೂನ್ 1): ಪಿಎನ್ಬಿ ಹಗರಣದಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿ, ಭಾರತದಿಂದ ತಲೆಮರೆಸಿಕೊಂಡಿದ್ದ ಆರೋಪಿ, ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿದೆ. ಆ್ಯಂಟಿಗುವಾ ಪ್ರಜೆಯಾಗಿರುವ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಈಗಾಗಲೇ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ದೆಹಲಿಯಿಂದ ಆ್ಯಂಟಿಗುವಾಕ್ಕೆ ವಿಶೇಷ ಜೆಟ್ ಕಳುಹಿಸಲಾಗಿದೆ. ಹಾಗಿದ್ದರೆ, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆದುಕೊಂಡು ಬರಲು ಎಷ್ಟು ಹಣ ಖರ್ಚಾಗುತ್ತದೆ? ಅದಕ್ಕೆ ಪಾಲಿಸಬೇಕಾದ ನಿಯಮಗಳೇನು? ಇಲ್ಲಿದೆ ಮಾಹಿತಿ...
ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ದೆಹಲಿಯಿಂದ ಬೋಂಬರ್ಡಿಯರ್ ಗ್ಲೋಬಲ್ 5000 ಜೆಟ್ ಅನ್ನು ಕಳುಹಿಸಲಾಗಿದೆ. ಈ ಚಾರ್ಟರ್ ಜೆಟ್ಗೆ 1 ಗಂಟೆಗೆ 8.46 ಲಕ್ಷ ರೂ. ನೀಡಬೇಕು. ಈಗಾಗಲೇ ಆ್ಯಂಟಿಗುವಾಗೆ ದೆಹಲಿಯಿಂದ ಜೆಟ್ ಬಂದಿಳಿದಿದೆ. ಸದ್ಯದಲ್ಲೇ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಅಲ್ಲಿನ ಪ್ರಧಾನಿ ತಿಳಿಸಿದ್ದಾರೆ.
ಆ್ಯಂಟಿಗುವಾದಿಂದ ಭಾರತಕ್ಕೆ ಸುಮಾರು 16ರಿಂದ 17 ಗಂಟೆಗಳ ಕಾಲ ಪ್ರಯಾಣ ಮಾಡಬೇಕು. ಹೀಗಾಗಿ, ಈಗಾಗಲೇ ದೆಹಲಿಯಿಂದ ಆ್ಯಂಟಿಗುವಾಗೆ ತೆರಳುವುದಕ್ಕೆ ಈ ಜೆಟ್ಗೆ 1.35 ಕೋಟಿಯಿಂದ 1.43 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ವಾಪಾಸ್ ಕರೆತರಲು 2.75ರಿಂದ 2.86 ಕೋಟಿ ರೂ. ಖರ್ಚಾಗಲಿದೆ. ಇದಲ್ಲದೆ, ಈ ಜೆಟ್ಗೆ ಜಿಎಸ್ಟಿ ಕೂಡ ಕಟ್ಟಬೇಕು.
ಇದನ್ನೂ ಓದಿ: Mehul Choksi: ಮೆಹುಲ್ ಚೋಕ್ಸಿಯಿಂದ ಲಾಭ ಪಡೆದು ಪೌರತ್ವ ಕೊಟ್ಟವರೇ ನಮ್ಮ ಮೇಲೆ ಆರೋಪಿಸುತ್ತಿದ್ದಾರೆ; ಆ್ಯಂಟಿಗುವಾ ಪ್ರಧಾನಿ ವಿರುದ್ಧ ವಿಪಕ್ಷ ಟೀಕೆ
ಇದಿಷ್ಟು ಮಾತ್ರವಲ್ಲದೆ, ಈ ಜೆಟ್ ಅನ್ನು ಕಳುಹಿಸಿದ ಏಜೆನ್ಸಿಗೆ ಎರಡೂ ದೇಶಗಳೂ 5,11,000 ರೂ. ನೀಡಬೇಕು. ಇದಲ್ಲದೆ, ಇಂಧನದ ಖರ್ಚು ಅದೂ ಇದು ಎಂದು ಹಣ ಖರ್ಚಾಗುತ್ತದೆ. ಹಾಗೇ, ಈಗಾಗಲೇ ಆ್ಯಂಟಿಗುವಾಗೆ ತೆರಳಿರುವ ಜೆಟ್ಗೆ ಸುಮಾರು 1 ಲಕ್ಷ ರೂ. ಹಾಲ್ಟಿಂಗ್ ಚಾರ್ಜಸ್ ಕೂಡ ನೀಡಬೇಕು.
ಟ್ರಾವೆಲ್ ಯಾತ್ರಾ ವೆಬ್ಸೈಟ್ ನೀಡಿರುವ ಮಾಹಿತಿ ಪ್ರಕಾರ, ದೆಹಲಿಯಿಂದ ಆ್ಯಂಟಿಗುವಾಗೆ ಹೋಗಿ ಬರಲು 52 ಗಂಟೆ 27 ನಿಮಿಷಗಳು ಬೇಕಾಗುತ್ತದೆ. ಮೆಹುಲ್ ಚೋಕ್ಸಿ ತಮ್ಮ ಪ್ರೇಯಸಿಯೊಂದಿಗೆ ಡೊಮಿನಿಕಾ ದ್ವೀಪಕ್ಕೆ ರೊಮ್ಯಾಂಟಿಕ್ ಟ್ರಿಪ್ ಹೋಗಿದ್ದಾಗ ಅಲ್ಲಿ ಅವರನ್ನು ಆ್ಯಂಟಿಗುವಾ ಪೊಲೀಸರು ಬಂಧಿಸಿದ್ದರು. ಈ ಮೊದಲೇ ಆ್ಯಂಟಿಗುವಾ ಸರ್ಕಾರದಿಂದ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.
ಪೂರ್ವ ಕೆರಿಬಿಯನ್ ಸಮುದ್ರದ ಒಂದು ದ್ವೀಪ ಡೊಮಿನಿಕಾ. ಲೆಸ್ಸರ್ ಆಂಟಿಲಿಸ್ ಗ್ರೂಪ್ ಆಫ್ ಐಲ್ಯಾಂಡ್ಸ್ ಗೆ ಸೇರಿದ ಒಂದು ದ್ವೀಪ ಇದು. ಸರಳವಾಗಿ ಹೇಳಬೇಕೆಂದರೆ ಲೆಸ್ಸರ್ ಆಂಟಿಲಿಸ್, ಗ್ರೇಟರ್ ಆಂಟಿಲಿಸ್ ಮತ್ತು ಲುಕಾಯನ್ ಆರ್ಕಿಪೆಲಾಗೊ ಸೇರಿದರೆ ವೆಸ್ಟ್ ಇಂಡೀಸ್ ಆಗುತ್ತದೆ. ಫ್ರಾನ್ಸ್ಗೆ ಸೇರಿದ ಗುಡೆಲೊಪ್ ದ್ವೀಪ್ ಡೊಮಿನಿಕಾದ ಉತ್ತರದಲ್ಲಿದೆ. ಸುಂದರ ಬೀಚ್ಗಳು, ಸಸ್ಯರಾಶಿಯಿಂದ ನೋಡೋಕೆ ಅದ್ಭುತ ಎನಿಸುವಂತಿದೆ. ಹೀಗಾಗಿ, ಇಲ್ಲಿ ತಮ್ಮ ಸುಂದರ ಸಮಯವನ್ನು ಕಳೆಯಲು ಮೆಹುಲ್ ಚೋಕ್ಸಿ ತಮ್ಮ ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲೇ ಅವರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: Mehul Choksi | ಗರ್ಲ್ಫ್ರೆಂಡ್ ಜೊತೆ ರೊಮ್ಯಾಂಟಿಕ್ ಟ್ರಿಪ್ಗೆ ಹೋಗಿದ್ದ ಮೆಹುಲ್ ಚೋಕ್ಸಿಗೆ ಕಾದಿತ್ತು ಶಾಕ್!
ಕಳೆದ ಸೋಮವಾರ ಸಂಜೆ ಆಂಟಿಗುವಾ ದ್ವೀಪದಿಂದ ನಾಪತ್ತೆಯಾಗಿದ್ದ ಭಾರತದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಕ್ಯೂಬಾಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿದೆ. ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಯನ್ನು ಬಂಧಿಸಿದ್ದರು. ಪಿಎನ್ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್) ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿಗಳಲ್ಲಿ ಒಬ್ಬರಾಗಿರುವ ಮೆಹುಲ್ ಚೋಕ್ಸಿ ಈಗ ಡೊಮಿನಿಕಾದಲ್ಲಿ ಬಂಧನದಲ್ಲಿದ್ದಾರೆ.
62 ವರ್ಷದ ಚೋಕ್ಸಿ, ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬಡೋಸ್ನಲ್ಲಿ ನೆಲೆಸಿದ್ದರು. ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಯತ್ನ ನಡೆಸಿರುವ ಸಂದರ್ಭದಲ್ಲಿಯೇ ಅವರು ಆಂಟಿಗುವಾದಿಂದಲೂ ಪಲಾಯನ ಮಾಡಲು ಯೋಜನೆ ರೂಪಿಸಿದ್ದರು.
ಸೋಮವಾರ ಸಂಜೆ ಮನೆಯಿಂದ ಹೊರಹೋಗಿದ್ದ ಚೋಕ್ಸಿ, ದೋಣಿಯೊಂದರಲ್ಲಿ ಪುಟ್ಟ ದ್ವೀಪವಾದ ಡೊಮಿನಿಕಾಕ್ಕೆ ತೆರಳಿದ್ದರು. ಆತನ ವಿರುದ್ಧ ಆಂಟಿಗುವಾ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಚೋಕ್ಸಿಯನ್ನು ಗಮನಿಸಿದ ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಆತನನ್ನು ಬಂಧಿಸಿದ್ದರು. ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎನ್ನಲಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಡೊಮಿನಿಕಾಗೆ ದೆಹಲಿಯಿಂದ ವಿಮಾನವನ್ನು ಕಳುಹಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗಾಗಿ ಹಲವು ವರ್ಷಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಡೊಮಿನಿಕಾ ಮತ್ತು ಆಂಟಿಗುವಾ ಸರ್ಕಾರವನ್ನು ಕೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ