ನವದೆಹಲಿ (ಆಗಸ್ಟ್ 26); ಸೆಪ್ಟೆಂಬರ್ 2 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿರುವ "ಬ್ಯಾಡ್ ಬಾಯ್ ಬಿಲಿಯನೇರ್ಸ್" ವೆಬ್ ಸರಣಿಯನ್ನು ಪ್ರದರ್ಶನ ಮಾಡುವ ಮುನ್ನ ಕಡ್ಡಾಯವಾಗಿ ತಮಗೆ ತೋರಿಸಬೇಕು ಎಂದು ಒತ್ತಾಯಿಸಿ ಬಹುಕೋಟಿ ವಂಚಕ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ 61 ವರ್ಷದ ಮೆಹುಲ್ ಚೋಕ್ಸಿ ಇಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಭಾರತದ ಅತ್ಯಂತ ಕುಖ್ಯಾತ ಉದ್ಯಮಿಗಳು ಮತ್ತು ಅಂತಿಮವಾಗಿ ಉರುಳಿದ ಅವರ ದುರಾಸೆ, ವಂಚನೆ ಮತ್ತು ಭ್ರಷ್ಟಾಚಾರವನ್ನು ಕಥೆಯನ್ನಾಗಿಸಿ ವೆಬ್ ಸರಣಿಯೊಂದನ್ನು ನಿರ್ಮಿಸುತ್ತಿರುವುದಾಗಿ ಈ ಹಿಂದೆಯೇ ನೆಟ್ಫ್ಲಿಕ್ಸ್ ಘೋಷಿಸಿತ್ತು.
ಈ ವೆಬ್ ಸರಣಿಯಲ್ಲಿ ಉದ್ಯಮಿಗಳಾದ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಅವರ ಜೀವನದ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಈ ವೆಬ್ ಸರಣಿಯ ವಿರುದ್ಧ ಮೆಹುಲ್ ಚೋಕ್ಸಿ ಇದೀಗ ದೆಹಲಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇಂದು ವಿಚಾರಣೆಯ ಸಮಯದಲ್ಲಿ ಮೆಹುಲ್ ಚೋಕ್ಸಿ ಅವರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ, "ವೆಬ್ ಸರಣಿಯ ಬಿಡುಗಡೆಯ ಮೊದಲು ನಾವು ಅದರ ಪೂರ್ವವೀಕ್ಷಣೆಯನ್ನು ಮಾತ್ರ ನೋಡಲು ಬಯಸುತ್ತೇವೆ. ಏಕೆಂದರೆ ವೆಬ್ ಸರಣಿಯು ವಂಚನೆ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಇಡೀ "ಬ್ಯಾಡ್ ಬಾಯ್ ಬಿಲಿಯನೇರ್ಸ್" ವೆಬ್ ಸರಣಿಯಲ್ಲಿ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಕಥೆಯನ್ನು ಕೇವಲ ಎರಡು ನಿಮಿಷಗಳ ಮಾತ್ರ ಬಳಸಿಕೊಳ್ಳಲಾಗಿದೆ ಎಂದು ಒಟಿಟಿ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ. ಈ ವಿಷಯದ ಬಗ್ಗೆ ದೆಹಲಿ ಹೈಕೋರ್ಟ್ ನೆಟ್ಫ್ಲಿಕ್ಸ್ನಿಂದ ದೀರ್ಘ ಉತ್ತರ ಕೋರಿದ್ದು ಮುಂದಿನ ವಿಚಾರಣೆಯನ್ನು ಆಗಸ್ಟ್ 28 ಕ್ಕೆ ನಿಗದಿಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ