Mehul Choksi: ಊದಿದ ಕಣ್ಣು, ಕೈಗಳಲ್ಲಿ ಗಾಯ; ಡೊಮಿನಿಕಾ ಜೈಲಿನಲ್ಲಿರುವ ಮೆಹುಲ್ ಚೋಕ್ಸಿ ಮೊದಲ ಫೋಟೋ ರಿಲೀಸ್

Mehul Choksi Photo: ಮೆಹುಲ್ ಚೋಕ್ಸಿ ಡೊಮಿನಿಕಾದ ಜೈಲಿನೊಳಗಿರುವ ಫೋಟೋವೊಂದು ಹೊರಬಿದ್ದಿದ್ದು, ಅವರ ಕೈಗಳ ಮೇಲೆ ಥಳಿಸಿದ ಗಾಯಗಳಾಗಿದ್ದು, ಒಂದು ಕಣ್ಣು ಕೆಂಪಾಗಿ ಊದಿಕೊಂಡಿದೆ.

ಮೆಹುಲ್ ಚೋಕ್ಸಿಯ ಲೇಟೆಸ್ಟ್ ಫೋಟೋ

ಮೆಹುಲ್ ಚೋಕ್ಸಿಯ ಲೇಟೆಸ್ಟ್ ಫೋಟೋ

  • Share this:
ನವದೆಹಲಿ (ಮೇ 30): ಭಾರತದಿಂದ ತಲೆಮರೆಸಿಕೊಂಡಿದ್ದ ಪಿಎನ್​ಬಿ ಹಗರಣದ ಆರೋಪಿ, ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಕಳೆದ ಸೋಮವಾರ ರಾತ್ರಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿತ್ತು. ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಿಂದ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರ ನಡುವೆ ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿ ಜೈಲಿನೊಳಗಿರುವ ಫೋಟೋವೊಂದು ಹೊರಬಿದ್ದಿದ್ದು, ಅವರಿಗೆ ಜೈಲಿನಲ್ಲಿ ಥಳಿಸಿ, ಹಿಂಸೆ ನೀಡಲಾಗಿದೆ ಎಂದು ಚೋಕ್ಸಿ ಪರ ವಕೀಲ ಆರೋಪಿಸಿದ್ದಾರೆ.

ಮೆಹುಲ್ ಚೋಕ್ಸಿ ಅವರ ಫೋಟೋದಲ್ಲಿ ಅವರ ಕೈಗಳ ಮೇಲೆ ಥಳಿಸಿದ ಗಾಯಗಳಾಗಿದ್ದು, ಒಂದು ಕಣ್ಣು ಕೆಂಪಾಗಿ ಊದಿಕೊಂಡಿದೆ. ಈ ಫೋಟೋವನ್ನು ಮೆಹುಲ್ ಚೋಕ್ಸಿ ಅವರ ವಕೀಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಜೈಲಿನಲ್ಲಿರುವ ನನ್ನ ಕಕ್ಷಿದಾರ ಚೋಕ್ಸಿಗೆ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮೆಹುಲ್ ಚೋಕ್ಸಿ ಅವರನ್ನು ಬಲವಂತವಾಗಿ ಅಪಹರಿಸಲಾಗಿದೆ ಎಂದು ವಕೀಲರು ಆರೋಪಿಸಿದ ಕೆಲವೇ ದಿನಗಳ ಬಳಿಕ ಅವರು ಈ ಫೋಟೋಗಳನ್ನು ರಿಲೀಸ್ ಮಾಡಿದ್ದಾರೆ. ಈ ಹಿಂದೆ ಪೊಲೀಸರು ಚೋಕ್ಸಿ ಅವರನ್ನು ಥಳಿಸಿ, ಡೊಮಿನಿಕಾಗೆ ಎಳೆದುಕೊಂಡು ಹೋಗಿ, ಜೈಲಿಗೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: PM Narendra Modi: ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕೊರೋನಾ; ಜೂನ್​ 2ಕ್ಕೆ ಸಿಎಂಗಳ ಸಭೆ ಕರೆದ ಪ್ರಧಾನಿ ಮೋದಿ

ಕಳೆದ ಸೋಮವಾರ ಸಂಜೆ ಆಂಟಿಗುವಾ ದ್ವೀಪದಿಂದ ನಾಪತ್ತೆಯಾಗಿದ್ದ ಭಾರತದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಕ್ಯೂಬಾಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿದೆ. ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಯನ್ನು ಬಂಧಿಸಿದ್ದರು. ಪಿಎನ್​ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್‌) ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿಗಳಲ್ಲಿ ಒಬ್ಬರಾಗಿರುವ ಮೆಹುಲ್ ಚೋಕ್ಸಿ ಈಗ ಡೊಮಿನಿಕಾದಲ್ಲಿ ಬಂಧನದಲ್ಲಿದ್ದಾರೆ.



62 ವರ್ಷದ ಚೋಕ್ಸಿ, ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬಡೋಸ್‌ನಲ್ಲಿ ನೆಲೆಸಿದ್ದರು. ಸೋಮವಾರ ಸಂಜೆ ಊಟಕ್ಕಾಗಿ ಮನೆಯಿಂದ ಹೊರಗೆ ಹೋದವರು ವಾಪಾಸ್ ಬಂದಿರಲಿಲ್ಲ. ಆತ ಕ್ಯೂಬಾಕ್ಕೆ ಪರಾರಿಯಾಗಿರುವ ಅನುಮಾನಗಳು ವ್ಯಕ್ತವಾಗಿದ್ದವು. ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಯತ್ನ ನಡೆಸಿರುವ ಸಂದರ್ಭದಲ್ಲಿಯೇ ಅವರು ಆಂಟಿಗುವಾದಿಂದಲೂ ಪಲಾಯನ ಮಾಡಲು ಯೋಜನೆ ರೂಪಿಸಿದ್ದರು.

ಇದನ್ನೂ ಓದಿ: Mehul Choksi: PNB ಹಗರಣ; ಡೊಮಿನಿಕಾದಿಂದ ಮೆಹುಲ್ ಚೋಕ್ಸಿ ಗಡಿಪಾರು ಸಾಧ್ಯತೆ; ದೆಹಲಿಯಿಂದ ವಿಮಾನ ರವಾನೆ

ಸೋಮವಾರ ಸಂಜೆ ಮನೆಯಿಂದ ಹೊರಹೋಗಿದ್ದ ಚೋಕ್ಸಿ, ದೋಣಿಯೊಂದರಲ್ಲಿ ಪುಟ್ಟ ದ್ವೀಪವಾದ ಡೊಮಿನಿಕಾಕ್ಕೆ ತೆರಳಿದ್ದರು. ಆತನ ವಿರುದ್ಧ ಆಂಟಿಗುವಾ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ಚೋಕ್ಸಿಯನ್ನು ಗಮನಿಸಿದ ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಆತನನ್ನು ಬಂಧಿಸಿದ್ದರು. ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎನ್ನಲಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಡೊಮಿನಿಕಾಗೆ ದೆಹಲಿಯಿಂದ ವಿಮಾನವನ್ನು ಕಳುಹಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗಾಗಿ ಹಲವು ವರ್ಷಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಡೊಮಿನಿಕಾ ಮತ್ತು ಆಂಟಿಗುವಾ ಸರ್ಕಾರವನ್ನು ಕೇಳಿತ್ತು.

ಭಾರತದಿಂದ ಯೆಲ್ಲೋ ಕಾರ್ನರ್​ ನೊಟೀಸ್​ ಜಾರಿಯಾದ ನಂತರ, ದೇಶಬಿಟ್ಟು ಪರಾರಿಯಾಗಲು ಚೋಕ್ಸಿ ಯತ್ನಿಸಿದರೆ ಪೌರತ್ವ ಹಿಂಪಡೆಯುವುದಾಗಿ ಆಂಟಿಗುವಾ ಹೇಳಿತ್ತು. ಮೇಹುಲ್​ ಚೋಕ್ಸಿ ಮತ್ತು ನೀರವ್​ ಮೋದಿ ಇಬ್ಬರೂ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಇಂದ ರೂ. 13,500 ಕೋಟಿ ಸಾಲ ಪಡೆದು ವಂಚಿಸಿದ್ದರು. ಜಾರಿ ನಿರ್ದೇಶನಾಲಯಕ್ಕೆ ವಂಚನೆಯ ವಾಸನೆ ಬಂದ ತಕ್ಷಣ ಇಬ್ಬರೂ ದೇಶ ಬಿಟ್ಟು ಕಾಲ್ಕಿತ್ತಿದ್ದರು. ಸದ್ಯ ನೀರವ್​​ ಮೋದಿ ಇಂಗ್ಲೆಂಡ್​ನ ಜೈಲಿನಲ್ಲಿದ್ದು, ಕೋರ್ಟ್​​ ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದೆ. ಆದರೆ ನೀರವ್​ ಕೋರ್ಟ್​ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿದ್ದಾರೆ.
Published by:Sushma Chakre
First published: