ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ ಮುಫ್ತಿ ಮತ್ತೆ ಗೃಹಬಂಧನ
ಎನ್ಎಐಯಿಂದ ಬಂಧಿತರಾಗಿರುವ ಪಿಡಿಪಿ ಯುವ ಮುಖಂಡ ವಾಹೀದ್ ಪಾರಾ ಅವರ ಕುಟುಂಬವನ್ನು ಭೇಟಿ ಮಾಡಲು ಅಣಿಯಾಗಿದ್ದ ಮೆಹಬೂಬ ಮುಫ್ತಿ ಮತ್ತವರ ಮಗಳನ್ನ ಗೃಹ ಬಂಧನದಲ್ಲಿಡಲಾಗಿದೆ. ಈ ವಿಚಾರವನ್ನು ಖುದ್ದು ಮಾಜಿ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ.
ಶ್ರೀನಗರ್(ನ. 27): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರನ್ನ ಮತ್ತೆ ವಶಕ್ಕೆ ತೆಗೆದುಕೊಳ್ಳಲಾಗಿರುವುದು ತಿಳಿದುಬಂದಿದೆ. ಎರಡು ದಿನಗಳಿಂದ ನನ್ನನ್ನು ಮತ್ತು ನನ್ನ ಮಗಳು ಇತಿಜಾ ಅವರನ್ನು ಗೃಹ ಬಂಧನದಲ್ಲಿಟ್ಟಿದ್ದಾರೆ ಎಂದು ಸ್ವತಃ ಮುಫ್ತಿ ಅವರೇ ಹೇಳಿಕೊಂಡಿದ್ದು, ತಮ್ಮ ಪಕ್ಷದ ನಾಯಕ ವಾಹೀದ್ ಪಾರಾ ಅವರ ಕುಟುಂಬವನ್ನು ಭೇಟಿ ಮಾಡಲೂ ಅವಕಾಶ ನಿರಾಕರಿಸಲಾಗಿದೆ ಎಂದಿದ್ದಾರೆ.
ಪಿಡಿಪಿಯು ಯುವ ಘಟಕದ ಅಧ್ಯಕ್ಷರಾಗಿರುವ ಮಾಜಿ ಸಚಿವ ಪಾರಾ ಅವರನ್ನು ನಿನ್ನೆ ಎನ್ಐಎ ತನಿಖಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದರು. ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ವಾಹೀದ್ ಪೀರಾ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರನ್ನ ಬಂಧಿಸುವ ಮುನ್ನ ಎನ್ಎಎ ಅಧಿಕಾರಿಗಳು ದೆಹಲಿಯಲ್ಲಿ ಎರಡು ದಿನ ಅವರ ವಿಚಾರಣೆ ನಡೆಸಿದ್ದರು.
ವಾಹೀದ್ ಪಾರಾ ವಿರುದ್ಧ ಆಧಾರರಹಿತ ಆರೋಪಗಳನ್ನ ಮಾಡಲಾಗಿದೆ ಎಂದು ಈ ವೇಳೆ ಮುಫ್ತಿ ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕ್ರೀಡಾ ಮಂಡಳಿಯ ಕಾರ್ಯದರ್ಶಿಯಾಗಿ ವಾಹೀದ್ ಪಾರಾ ಅವರ ಕೊಡುಗೆ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಶ್ಲಾಘನೆ ವ್ಯಕ್ತಪಡಿಸಿರುವ ಕ್ಲಿಪ್ವೊಂದನ್ನು ಬಿಡುಗಡೆ ಮಾಡಿದ ಮುಫ್ತಿ, ಇದೀಗ ಅವರ ಬಂಧನವಾಗಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ಇದ್ದಾಗ ಪಾರಾ ಅವರು ಕಾರ್ಯವನ್ನು ರಾಜನಾಥ್ ಮೆಚ್ಚಿಕೊಂಡಿದ್ದು ಈ ಕ್ಲಿಪ್ನಿಂದ ತಿಳಿದುಬರುತ್ತದೆ.
ಮೆಹಬೂಬ ಮುಫ್ತಿ ಅವರ ಆಪ್ತರಾಗಿರುವ ವಾಹೀದ್ ಪಾರಾ ಅವರಿಗೆ ಕಾಶ್ಮೀರದ ಯುವ ಸಮುದಾಯದಿಂದ ಸಾಕಷ್ಟು ಬೆಂಬಲ ಇದೆ. ಪಿಡಿಪಿ-ಬಿಜೆಪಿ ಮೈತ್ರಿ ಮುರಿದುಬಿದ್ದು, ಪಿಡಿಪಿಯಿಂದ ಹಲವು ಹಿರಿಯ ನಾಯಕರು ರಾಜೀನಾಮೆ ನೀಡಿದ ಹೊತ್ತಲ್ಲೂ ತಮ್ಮ ನಾಯಕಿಯ ಬೆನ್ನಿಗೆ ನಿಂತ ಕೆಲವರಲ್ಲಿ ಪಾರಾ ಕೂಡ ಒಬ್ಬರು. ಮುಫ್ತಿ ಅವರಿಗೆ ಅವರ ಪರವಾಗಿ ಬಹಿರಂಗವಾಗಿ ಬೆಂಬಲದ ಧ್ವನಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಮುಫ್ತಿ ಅವರ ಶಕ್ತಿ ಕುಂದಿಸುವ ಪ್ರಯತ್ನದಲ್ಲಿ ಪಾರಾ ಅವರ ಬಂಧನದ ಕ್ರಮವೂ ಒಂದು ಎಂದು ಹೇಳಲಾಗುತ್ತಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ