Farmers Protest: ರೈತರ ಜೊತೆ ಅಮಿತ್​ ಶಾ ಮಾತುಕತೆ ವಿಫಲ; ಬುಧವಾರದ ಸಭೆ ಬಹಿಷ್ಕರಿಸಿದ ರೈತ ಮುಖಂಡರು

ಭಾರತ್ ಬಂದ್ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರಕ್ಕೆ ಈಗ ನಮ್ಮ ಶಕ್ತಿ ತಿಳಿದಿದೆ. ಇದೇ ಕಾರಣಕ್ಕೆ ಬೇರೆ ದಾರಿ ಇಲ್ಲದೆ ನಮ್ಮನ್ನು ಮಾತುಕತೆಗೆ ಕರೆದಿದ್ದಾರೆ. ಆದರೆ, ನಾವು ಬಯಸುವ ಉತ್ತರ ಸಿಗುವವರೆಗೆ ಈ ಹೋರಾಟ ಮುಂದುವರೆಯುತ್ತದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಅಮಿತ್​ ಶಾ ಭೇಟಿಗೆ ತೆರಳಿರುವ ರೈತ ಮುಖಂಡರು.

ಅಮಿತ್​ ಶಾ ಭೇಟಿಗೆ ತೆರಳಿರುವ ರೈತ ಮುಖಂಡರು.

 • Share this:
  ನವ ದೆಹಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದ ರೈತರು ಕರೆ ಕೊಟ್ಟಿರುವ "ದೆಹಲಿ ಚಲೋ" ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಈ ನಡುವೆ ಇಂದು ಕರೆ ನೀಡಲಾಗಿದ್ದ ಭಾರತ್​ ಬಂದ್​ ಸಹ ಯಶಸ್ವಿಯಾಗಿದೆ. ಪ್ರತಿಭಟನೆಯ ನಡುವೆಯೂ ಸರ್ಕಾರ ಮತ್ತು ರೈತ ಹೋರಾಟಗಾರರ ನಡುವೆ ಈವರೆಗೆ ಐದು ಬಾರಿ ಮಾತುಕತೆ ನಡೆದಿದೆ. ಆದರೆ, ಈವರೆಗೆ ಯಾವ ಮಾತುಕತೆಯೂ ಫಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಗೃಹ ಸಚಿವ ಅಮಿತ್​ ಶಾ ಇಂದು ಸಂಜೆ ರೈತರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ, ಅಮಿತ್​ ಶಾ ಜೊತೆಗಿನ ಭೇಟಿಗೆ ಮುನ್ನವೇ ಬೇಡಿಕೆಯೊಂದನ್ನು ಮುಂದಿಟ್ಟಿರುವ ರೈತರು, "ಕೃಷಿ ಮಸೂದೆಗಳಿಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್​ ಶಾ ನಮ್ಮ ಬೇಡಿಕೆಗಳಿಗೆ ಹೌದು-ಇಲ್ಲ ಎಂದಷ್ಟೇ ಉತ್ತರಿಸಬೇಕು" ಎಂದು ಒತ್ತಾಯಿಸಿದ್ದಾರೆ. 

  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 13 ದಿನಗಳಿಂದ ರೈತರ ಹೋರಾಟ ನಡೆಯುತ್ತಲೇ ಇದೆ. ಸದ್ಯಕ್ಕಂತೂ ರೈತರ ಮತ್ತು ಸರ್ಕಾರದ ನಡುವೆ ಸಾಮರಸ್ಯ ಮೂಡುವ ಯಾವುದೇ ಲಕ್ಷಣಗಳೂ ಘೋಚರಿಸುತ್ತಿಲ್ಲ. ಇದೇ ಕಾರಣಕ್ಕೆ ಎರಡು ವಾರಗಳ ನಂತರ ಮೊದಲ ಬಾರಿಗೆ ಸ್ವತಃ ಗೃಹ ಸಚಿವ ಅಮಿತ್​ ಶಾ ರೈತರನ್ನು ಮಾತುಕತೆಗೆ ಕರೆದಿದ್ದರು. ಸರ್ಕಾರದ ಈ ನಡೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ, ಇದೀಗ ರೈತ ಮುಖಂಡರು ಮುಂದಿಟ್ಟಿರುವ ಖಡಕ್​ ಮಾತಿಗೆ ಸ್ವತಃ ಇಡೀ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ ಎನ್ನಲಾಗುತ್ತಿದೆ.

  ಈ ಕುರಿತು ಇಂದು ದೆಹಲಿ-ಹರಿಯಾಣ ಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ರೈತ ಮುಖಂಡ ರುದ್ರು ಸಿಂಗ್ ಮಾನ್ಸಾ ಸಿಂಗ್, "ಸರ್ಕಾರ ಅಥವಾ ಸಚಿವರಿಂದ ಹೌದು ಅಥವಾ ಇಲ್ಲ ಎಂಬ ಉತ್ತರವನ್ನಲ್ಲದೇ ನಾವು ಮತ್ತೇನನ್ನೂ ಬಯಸುವುದಿಲ್ಲ. ಇದನ್ನು ಬಿಟ್ಟು ನಮಗೆ ಬೇರೆ ಮಾರ್ಗವೂ ಇಲ್ಲ. ನಮ್ಮ ಹೋರಾಟದ ಮುಂದೆ ಕೇಂದ್ರ ಸರ್ಕಾರ ಕೊನೆಗೂ ತಲೆಬಾಗಿದೆ" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ : ಯಶಸ್ವಿಯಾದ ಭಾರತ್ ಬಂದ್; ರೈತ ನಾಯಕರನ್ನು ಇಂದು ಸಂಜೆ 7ಕ್ಕೆ ಮಾತುಕತೆಗೆ ಆಹ್ವಾನಿಸಿರುವ ಗೃಹ ಸಚಿವ ಅಮಿತ್​ ಶಾ

  ಮತ್ತೊಬ್ಬ ನಾಯಕ ಗುರ್ನಮ್ ಸಿಂಗ್ ಚಧುನಿ ಮಾತನಾಡಿ, “ಭಾರತ್ ಬಂದ್ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರಕ್ಕೆ ಈಗ ನಮ್ಮ ಶಕ್ತಿ ತಿಳಿದಿದೆ. ಇದೇ ಕಾರಣಕ್ಕೆ ಬೇರೆ ದಾರಿ ಇಲ್ಲದೆ ನಮ್ಮನ್ನು ಮಾತುಕತೆಗೆ ಕರೆದಿದ್ದಾರೆ. ಆದರೆ, ನಾವು ಬಯಸುವ ಉತ್ತರ ಸಿಗುವವರೆಗೆ ಈ ಹೋರಾಟ ಮುಂದುವರೆಯುತ್ತದೆ" ಎಂದಿದ್ದಾರೆ.

  ರೈತರ ಹೋರಾಟದ ಭಾಗವಾಗಿ ಇಂದು ಆಯೋಜಿಸಲಾಗಿದ್ದ ಭಾರತ್​ ಬಂದ್​ ರಾಷ್ಟ್ರವ್ಯಾಪಿ ಯಶಸ್ವಿಯಾಗಿದೆ. ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಬಂದ್​ಗೆ ಬೆಂಬಲ ಘೋಷಿಸಿದ್ದ ಪರಿಣಾಮ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಅಮಿತ್​ ಶಾ ರೈತರನ್ನು ಮಾತುಕತೆಗೆ ಕರೆದಿದ್ದು, ಕೇಂದ್ರ ಸರ್ಕಾರ ತನ್ನ ವಿವಾದಾತ್ಮಕ ಕಾನೂನನ್ನು ಹಿಂಪಡೆದರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
  Published by:MAshok Kumar
  First published: