Quad Summit 2021: ವಸುದೈವ ಕುಟುಂಬಂ ಎಂಬ ತತ್ವದಂತೆ ನಾವು ಮತ್ತಷ್ಟು ಆಪ್ತವಾಗಿ ಕಾರ್ಯನಿರ್ವಹಿಸೋಣ: ಪ್ರಧಾನಿ ಮೋದಿ

ಕ್ವಾಡ್ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು 2007ರಲ್ಲಿ. ಜಪಾನ್ ದೇಶದ ಅಂದಿನ ಪ್ರಧಾನಿ ಶಿಂಜೋ ಆಬೆ ಅವರಿಂದ ಮೊಳಕೆಯೊಡೆದ ಒಕ್ಕೂಟ ಇದು. ಹೆಚ್ಚುತ್ತಿರುವ ಚೀನಾದ ಪ್ರಭಾವಳಿಯನ್ನು ಎದುರಿಸುವ ಉದ್ದೇಶದಿಂದ ಕ್ವಾಡ್ ರಾಷ್ಟ್ರಗಳ ಗುಂಪನ್ನ ರಚಿಸಲಾಯಿತು. ಕ್ವಾಡ್ ಎಂದರೆ ನಾಲ್ಕು ಎಂದರ್ಥ. ನಾಲ್ಕು ದೇಶಗಳ ಗುಂಪು ಇದು. ಇದರಲ್ಲಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳಿವೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

 • Share this:
  ನವದೆಹಲಿ: ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ಕ್ವಾಡ್ ಸಭೆ ಇಂದ ಸಂಜೆ ನಡೆದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಮಂತ್ರಿ ಯೋಶಿಹಿಡೆ ಸುಗಾ ಹಾಗೂ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು ಈ ಕ್ವಾಡ್ ಸಭೆಯಲ್ಲಿ ಪಾಲ್ಗೊಂಡಿದ್ದರು. 

  ಸಂಜೆ 7 ಗಂಟೆಗೆ ನಿಗದಿಯಾಗಿದ್ದ ಕ್ವಾಡ್ ಶೃಂಗಸಭೆಗೂ ಮುನ್ನ ಪ್ರಧಾನಿ ಮೋದಿ ಅವರು  "ಶೃಂಗಸಭೆಯು ಹಂಚಿಕೆಯ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ" ಎಂದು ಹೇಳಿದ್ದರು. ಬಳಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಸಿಕೆ, ಹವಾಮಾನ ಬದಲಾವಣೆ ಹಾಗೂ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನ ವಿಷಯಗಳ ಚರ್ಚೆಯೂ ನಮ್ಮ ಮುಖ್ಯ ಉದ್ದೇಶವಾಗಿದೆ. ಇದರಿಂದಾಗಿ ಕ್ವಾಡ್ ಜಾಗತಿಕ ಒಳಿತಿನ ಶಕ್ತಿಯಾಗಲಿದೆ ಎಂದು ಹೇಳಿದರು.

  ಈ ಸಕಾರಾತ್ಮಕ ದೃಷ್ಟಿಯನ್ನು ಭಾರತದ ಪುರಾತನ ತತ್ವವಾದ ವಸುದೈವ ಕುಟುಂಬಂ ವಿಸ್ತರಿಸಿದ ಭಾಗದಂತೆ ಕಾಣುತ್ತೇನೆ. ಹಿಂದೆಂದಿಗಿಂತಲೂ ನಾವು ಮತ್ತಷ್ಟು ಆಪ್ತವಾಗಿ ಕಾರ್ಯನಿರ್ವಹಿಸೋಣ, ಒಪ್ಪಿತ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ಹಾಗೂ ಸಮಾನ, ಸುಸ್ಥಿರ ಹಾಗೂ ಸಮೃದ್ಧ ಇಂಡೋ- ಪೆಸಿಫಿಕ್ ಉತ್ತೇಜಿಸಲು ಶ್ರಮಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.

  ಸಭೆಯಲ್ಲಿ ಮಾತನಾಡಿದ ಅಮೆರಿಕ ನೂತನ ಅಧ್ಯಕ್ಷ ಜೊ ಬಿಡೆನ್ ಅವರು, ನಾವು ಕೊರೋನಾ ವೈರಸ್​ಗೆ ಹೊಸ ಲಸಿಕೆ ತಯಾರಿಕೆ ಒಪ್ಪಂದ ಪ್ರಾರಂಭಿಸುತ್ತಿದ್ದೇವೆ. ನಮ್ಮ ಒಪ್ಪಂದವನ್ನು ಸಾರ್ವತ್ರಿಕ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ. ಅದರಲ್ಲಿ ಕ್ವಾಡ್ ಮುಖ್ಯವಾಗಲಿದೆ,"ಎಂದು ಹೇಳಿದರು.

  ಪ್ರಾದೇಶಿಕ ಸ್ಥಿರತೆ ಸಾಧಿಸಲು ಯುನೈಟೆಡ್ ಸ್ಟೇಟ್ಸ್ ನಿಮ್ಮೊಂದಿಗೆ ಹಾಗೂ ಮಿತ್ರ ದೇಶಗಳೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ. ಅದರಲ್ಲಿ ಈ ಕ್ವಾಡ್ ಗುಂಪು ವಿಶೇಷವಾಗಿ ಮಹತ್ವದ್ದಾಗಿದೆ. ಏಕೆಂದರೆ ಇದು ಪ್ರಾಯೋಗಿಕ ಪರಿಹಾರಗಳು ಮತ್ತು ದೃಢ ಫಲಿತಾಂಶ ಹೊಂದಿದೆ ಎಂದು ಮೊದಲ ಬಾರಿಗೆ ಕ್ವಾಡ್ ನಾಯಕರ ವರ್ಚುವಲ್ ಶೃಂಗಸಭೆಯಲ್ಲಿ ಬಿಡೆನ್ ಹೇಳಿದರು.

  ಇದನ್ನು ಓದಿ: ಭಾರತದ ಲಸಿಕೆ ಸಾಮರ್ಥ್ಯವನ್ನು ಐತಿಹಾಸಿಕ ಉಪ್ಪಿನ ಚಳವಳಿಗೆ ಹೋಲಿಸಿದ ಪ್ರಧಾನಿ ಮೋದಿ

  ಏನಿದು ಕ್ವಾಡ್ ಸಭೆ?

  ಕ್ವಾಡ್ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು 2007ರಲ್ಲಿ. ಜಪಾನ್ ದೇಶದ ಅಂದಿನ ಪ್ರಧಾನಿ ಶಿಂಜೋ ಆಬೆ ಅವರಿಂದ ಮೊಳಕೆಯೊಡೆದ ಒಕ್ಕೂಟ ಇದು. ಹೆಚ್ಚುತ್ತಿರುವ ಚೀನಾದ ಪ್ರಭಾವಳಿಯನ್ನು ಎದುರಿಸುವ ಉದ್ದೇಶದಿಂದ ಕ್ವಾಡ್ ರಾಷ್ಟ್ರಗಳ ಗುಂಪನ್ನ ರಚಿಸಲಾಯಿತು. ಕ್ವಾಡ್ ಎಂದರೆ ನಾಲ್ಕು ಎಂದರ್ಥ. ನಾಲ್ಕು ದೇಶಗಳ ಗುಂಪು ಇದು. ಇದರಲ್ಲಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳಿವೆ. 2007ರಲ್ಲಿ ಸ್ಥಾಪನೆಯಾದ ಈ ಗುಂಪು ಒಂದೇ ವರ್ಷದಲ್ಲಿ ಬಹುತೇಕ ನಿರ್ಜೀವವಾಗಿತ್ತು. ಚೀನಾ ವಿರುದ್ಧ ಯಾವುದೇ ತಂತ್ರದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು 2008ರಲ್ಲಿ ಭಾರತದ ಪ್ರಧಾನಿ ಸ್ಪಷ್ಟಪಡಿಸಿದರು. ಆಸ್ಟ್ರೇಲಿಯಾ ಕೂಡ ಈ ಗುಂಪಿನಿಂದ ಹೊರಬಿದ್ದಿತು. ಆದರೆ, 2017ರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ಈ ಕ್ವಾಡ್ ಕೂಟಕ್ಕೆ ಮರುಚೈತನ್ಯ ಸಿಕ್ಕಿದೆ. ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಕೂಡ ಈ ಕ್ವಾಡ್ ಬಗ್ಗೆ ಮುತುವರ್ಜಿ ತೋರಿದ್ದಾರೆ.

  ಏಷ್ಯಾ, ಆಫ್ರಿಕಾ ಅಮೆರಿಕ ಖಂಡಗಳ ನಡುವೆ ನಡೆಯುವ ವಾಣಿಜ್ಯ ವಹಿವಾಟುಗಳು ಕಾರ್ಯರೂಪಕ್ಕೆ ಬರುವುದು ಈ ಸಮುದ್ರಮಾರ್ಗದ ಮೂಲಕವೇ. ಇದನ್ನು ಮುಕ್ತ ಮತ್ತು ಸ್ವತಂತ್ರವಾಗಿ ಇರಿಸುವುದರಲ್ಲಿ ಜಾಗತಿಕ ವಾಣಿಜ್ಯ ಹಿತಾಸಕ್ತಿ ಅಡಗಿದೆ. ಈ ಸಮುದ್ರಮಾರ್ಗದ ಮೇಲೆ ಚೀನಾವು ತನ್ನ ಹಿಡಿತವನ್ನು ಬಿಗಿಗೊಳಿಸಲು ಯತ್ನಿಸುತ್ತಿದೆ. ಈ ಯತ್ನವನ್ನು ತಡೆಹಿಡಿಯುವುದೇ ಕ್ವಾಡ್ ಒಕ್ಕೂಟದ ಪ್ರಧಾನ ಉದ್ದೇಶ. ಹಿಂದೂ ಮಹಾಸಾಗರ- ಪೆಸಿಫಿಕ್ ಪ್ರದೇಶವನ್ನು ಹಾದುಹೋಗುವ ಸಮುದ್ರ ಮಾರ್ಗದ ಆಯಕಟ್ಟಿನ ಜಾಗದಲ್ಲಿ ಕ್ವಾಡ್ ಕೂಟದ ಮಲಬಾರ್ ಸಮರಾಭ್ಯಾಸ ನಡೆಸುವುದಕ್ಕೆ ಈ ಮೈತ್ರಿ ಸೀಮಿತವಾಗಿತ್ತು.
  Published by:HR Ramesh
  First published: