ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಪತ್ತೆ ಹಚ್ಚಿದ್ದು ಯಾರು ಗೊತ್ತಾ? ನಿಜಕ್ಕೂ ಇದು ಹೆಮ್ಮೆಯ ವಿಚಾರ!

Chandrayaan-2: ಚಂದ್ರನ ದಕ್ಷಿಣ ಧೃವದ ಅಧ್ಯಯನಕ್ಕಾಗಿ ಇಸ್ರೋ ಸಂಸ್ಥೆ ಕಳೆದ ಜುಲೈ ತಿಂಗಳಿನಲ್ಲಿ ಚಂದ್ರಯಾನ-2 ಯೋಜನೆಯನ್ನು ಕೈಗೊಂಡಿತ್ತು. ಆದರೆ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಭೂ ಸ್ಪರ್ಶ ಮಾಡಲು ಇನ್ನೂ ಕೇವಲ 2.1 ಕಿಮೀ ದೂರದಲ್ಲಿ ಇದ್ದಾಗ ಲ್ಯಾಂಡರ್​ ಅನಿರೀಕ್ಷಿತವಾಗಿ ಸ್ಪೋಟಗೊಂಡಿತ್ತು.

MAshok Kumar | news18-kannada
Updated:December 3, 2019, 1:35 PM IST
ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಪತ್ತೆ ಹಚ್ಚಿದ್ದು ಯಾರು ಗೊತ್ತಾ? ನಿಜಕ್ಕೂ ಇದು ಹೆಮ್ಮೆಯ ವಿಚಾರ!
ವಿಕ್ರಂ ಲ್ಯಾಂಡರ್​ ಸ್ಪೋಟಗೊಂಡ ಸ್ಥಳವನ್ನು ಪತ್ತೆ ಹಚ್ಚಿರುವ ತಮಿಳುನಾಡಿನ ಟೆಕ್ಕಿ ಷನ್ಮುಖ ಸುಬ್ರಮಣ್ಯ.
  • Share this:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಪತ್ತೆ ಹಚ್ಚಲಾಗಿದೆ. ಲ್ಯಾಂಡರ್ ಸ್ಪೋಟಗೊಂಡ ಸ್ಥಳದ ಛಾಯಾಚಿತ್ರವನ್ನು ಅಮೆರಿಕದ ‘ನಾಸಾ’ ಬಿಡುಗಡೆ ಮಾಡಿದೆ. ಆದರೆ, ಈ ಸ್ಥಳವನ್ನು ಪತ್ತೆ ಹಚ್ಚಿದ ವ್ಯಕ್ತಿ ಯಾರು? ಎಂಬ ವಿಚಾರ ಇದೀಗ ಎಲ್ಲೆಡೆ ಕುತೂಹಲಕ್ಕೆ ಕಾರಣವಾಗಿದೆ.

ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಸ್ಫೋಟಗೊಂಡು ಪತನವಾದ ಸ್ಥಳವನ್ನು ಪತ್ತೆ ಹಚ್ಚಿದ್ದು ಓರ್ವ ಭಾರತೀಯ. ತಮಿಳುನಾಡಿನ ಚೆನ್ನೈ ಮೂಲದ 33 ವರ್ಷದ ಟೆಕ್ಕಿ ಹಾಗೂ ಹವ್ಯಾಸಿ ಬಾಹ್ಯಾಕಾಶ ಉತ್ಸಾಹಿ ‘ಷನ್ಮುಖ ಸುಬ್ರಮಣ್ಯಂ’ ಎಂಬುದು ಈ ಎಲ್ಲಾ ಕುತೂಹಲಕ್ಕೆ ಕಾರಣ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಈತನ ಕೆಲಸಕ್ಕೆ ತನ್ನ ಟ್ವಿಟರ್ ಖಾತೆಯಲ್ಲಿ ಮೆಚ್ಚುಗೆಯನ್ನೂ ಸಹ ಸೂಚಿಸಿದೆ.

ಚಂದ್ರನ ದಕ್ಷಿಣ ಧೃವದ ಅಧ್ಯಯನಕ್ಕಾಗಿ ಇಸ್ರೋ ಸಂಸ್ಥೆ ಕಳೆದ ಜುಲೈ ತಿಂಗಳಿನಲ್ಲಿ ಚಂದ್ರಯಾನ-2 ಯೋಜನೆಯನ್ನು ಕೈಗೊಂಡಿತ್ತು. ಆದರೆ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಭೂ ಸ್ಪರ್ಶ ಮಾಡಲು ಇನ್ನೂ ಕೇವಲ 2.1 ಕಿಮೀ ದೂರದಲ್ಲಿ ಇದ್ದಾಗ ಲ್ಯಾಂಡರ್​ ಅನಿರೀಕ್ಷಿತವಾಗಿ ಸ್ಪೋಟಗೊಂಡಿತ್ತು.

ಕಳೆದ ನಾಲ್ಕು ತಿಂಗಳ ಸತತ ಪ್ರಯತ್ನದಿಂದಾಗಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ “ನಾಸಾ’ ತನ್ನ ಲೂನಾರ್​ ಸಹಾಯದಿಂದ ಚಂದ್ರನ ಮೇಲೆ ಭಾರತದ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ತನ್ನ ಆರ್ಬಿಟರ್ ಮೂಲಕ ಪತ್ತೆ ಹಚ್ಚಿದೆ. ಅಲ್ಲದೆ, ಲ್ಯಾಂಡರ್​ ಪತನವಾದ ಸ್ಥಳದ ಚಿತ್ರವನ್ನು ಸಹ ಸೆರೆಹಿಡಿದು ಇದೀಗ ಬಿಡುಗಡೆ ಮಾಡಿದೆ.

ನಾಸಾ ಸಂಸ್ಥೆಯ ಲೂನಾರ್ ಸೆರೆಹಿಡಿದಿರುವ ಚಿತ್ರಗಳ ಪೈಕಿ ವಿಕ್ರಮ್ ಲ್ಯಾಂಡಿಂಗ್ ಮುನ್ನ ಚಂದ್ರನ ಮೇಲ್ಮೈ ಹೇಗಿತ್ತು? ಲ್ಯಾಂಡಿಂಗ್ ನಂತರ ಚಂದ್ರನ ಮೇಲ್ಮೈ ಹೇಗಿದೆ? ಎಂಬ ಎರಡು ಮೊಸಾಯಿಕ್ ಚಿತ್ರವನ್ನು ತನ್ನ ವೆಬ್​ಸೈಟಿನಲ್ಲಿ ಹಾಕಿದ್ದ ‘ನಾಸಾ’ ಸಂಸ್ಥೆ ಅಪಘಾತದ ಮೊದಲ ಚಿತ್ರದ ಜೊತೆಗೆ ಈಗಿನ ಚಿತ್ರವನ್ನು ಹೋಲಿಸಿ ಲ್ಯಾಂಡರ್ ಸ್ಫೋಟಗೊಂಡ ಸ್ಥಳವನ್ನು ಗುರುತಿಸಲು ಸಾರ್ವಜನಿಕರಿಗೆ ಕಳೆದ ಸೆಪ್ಟೆಂಬರ್ 26 ರಂದು ಮುಕ್ತ ಆಹ್ವಾನ ನೀಡಿತ್ತು.

ಆದರೆ, "ಲ್ಯಾಂಡರ್ ಪತನವಾದ ಸ್ಥಳದ ಕುರಿತು ಧನಾತ್ಮಕ ಗುರುತಿನೊಂದಿಗೆ ಬಂದ ಮೊದಲ ವ್ಯಕ್ತಿ ಚೆನ್ನೈನ ಐಟಿ ಉದ್ಯೋಗಿ ಷನ್ಮುಖ ಸುಬ್ರಮಣ್ಯಂ. ಈತ ಚಂದ್ರಯಾನದ ಲ್ಯಾಂಡರ್ ಸ್ಪೋಟಗೊಂಡ ಸ್ಥಳವನ್ನು ಪತ್ತೆಹಚ್ಚುವಲ್ಲಿ ಸಫಲನಾಗಿದ್ದಾನೆ" ಎಂದು 'ನಾಸಾ' ತನ್ನ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿದೆ.

ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಷನ್ಮುಖ ಸುಬ್ರಮಣ್ಯ, “ನನ್ನ ಎರಡು ಲ್ಯಾಪ್​ಟಾಪ್​ಗಳಲ್ಲಿ ಈ ಎರಡೂ ಚಿತ್ರದ ಹೋಲಿಕೆಗಳನ್ನು ನಾನು ಹೊಂದಿದ್ದೇನೆ. ಒಂದು ಬದಿಯಲ್ಲಿ ಹಳೆಯ ಚಿತ್ರವಿತ್ತು, ಇನ್ನೊಂದು ಬದಿಯಲ್ಲಿ ನಾಸಾ ಬಿಡುಗಡೆ ಮಾಡಿದ ಹೊಸ ಚಿತ್ರವಿದೆ. ಇದರ ಹೋಲಿಕೆಯ ಆಧಾರದ ಮೇಲೆ ನಾನು ಸ್ಪೋಟಗೊಂಡ ಸ್ಥಳವನ್ನು ಪತ್ತೆ ಹಚ್ಚಿದ್ದೇನೆ. ಸ್ಫೋಟಗೊಂಡ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಬೂದಿಯಾಗಿರುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.

ಸಿಎನ್ಎನ್-ನ್ಯೂಸ್ 18 ಜೊತೆಗೂ ಮಾತನಾಡಿರುವ ಸುಬ್ರಮಣ್ಯಂ, "ನನ್ನ ಮಟ್ಟಿಗೆ ಚಂದ್ರಯಾನ್ -2 ಯೋಜನೆ ಯಶಸ್ವಿಯಾಗಿದೆ. ವಿಕ್ರಮ್ ಲ್ಯಾಂಡರ್ ಸ್ಫೋಟಗೊಂಡಿರುವುದು ದುಖಃಕರ ಸಂಗತಿ. ಆದರೆ, ಭಾರತೀಯರು ಇಸ್ರೋ ಮತ್ತು ಲ್ಯಾಂಡರ್ ಬಗ್ಗೆ ಹೆಮ್ಮೆ ಪಡುತ್ತಿರುವುದು ಧನಾತ್ಮಕ ಅಂಶ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಅಲ್ಲದೆ, “ಲ್ಯಾಂಡರ್ ಸ್ಫೋಟಗೊಂಡ ಸ್ಥಳವನ್ನು ಅವಲೋಕಿಸಲು ನಾನು ನಾಸಾ ಸಂಸ್ಥೆಯ ಚಿತ್ರಗಳನ್ನು ಬಳಸಿಕೊಂಡಿದ್ದೇನೆ. ಚಂದ್ರನ ಮೇಲ್ಮೈನಲ್ಲಿ ಶಿಲಾಖಂಡಗಳನ್ನು ಗುರುತಿಸುವುದು ಕಷ್ಟ. ಆದರೆ, ನನ್ನ ಶ್ರಮಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾನ್ಯತೆ ನೀಡಿರುವುದು ನನಗೆ ಖುಷಿ ನೀಡಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಂದ್ರನ ದಕ್ಷಿಣ ಧೃವದ ಮೇಲೆ ಈವರೆಗೆ ಅಮೆರಿಕ, ರಷ್ಯಾ, ಮತ್ತು ಚೀನಾ ಮಾತ್ರ ಲ್ಯಾಂಡರ್ ಇಳಿಸುವಲ್ಲಿ ಸಫಲವಾಗಿದೆ. ಈ ಪಟ್ಟಿಯಲ್ಲಿ ನಾಲ್ಕನೇಯ ರಾಷ್ಟ್ರವಾಗಿ ಸೇರ್ಪಡೆಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದಾಗಿ ಏಷ್ಯಾದ ದೈತ್ಯ ಶಕ್ತಿಯಾದಂತಹ ಭಾರತ ಕಳೆದ ಜುಲೈ ತಿಂಗಳಲ್ಲಿ ಚಂದ್ರಯಾನ-2 ಯೋಜನೆಯನ್ನು ಕಾರ್ಯರೂಪಕ್ಕೆ ತಂದಿತ್ತು. ಆದರೆ, ಚಂದ್ರನ ಕಕ್ಷೆಯಲ್ಲಿ ಸತತ 5 ದಿನ ತಿರುಗಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲು ಕೇವಲ 2.1 ಕಿಮೀ ದೂರದಲ್ಲಿದ್ದಾಗ ಅನಿರೀಕ್ಷಿತವಾಗಿ ಸ್ಫೋಟಗೊಳ್ಳುವ ಮೂಲಕ 130 ಕೋಟಿ ಭಾರತೀಯರಲ್ಲಿ ನಿರಾಸೆ ಮೂಡಿಸಿತ್ತು.

ಇದನ್ನೂ ಓದಿ : Chandrayaan-2: ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ
First published: December 3, 2019, 12:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading