UPSC: ಇತ್ತೀಚೆಗೆ 'ಅಸ್ಪಿರೆಂಟ್' ಅಂತ ಒಂದು ವೆಬ್ ಸೀರಿಸ್ ಬಂದಿತ್ತು, ಅದರಲ್ಲಿ ಮೂವರು ಗೆಳೆಯರು ತುಂಬಾ ಕಠಿಣವಾದಂತಹ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡುವುದಕ್ಕೆ ತಯಾರಿ ನಡೆಸುವಂತಹ ಕತೆಯನ್ನು ಹೊಂದಿತ್ತು.ಅದು ಕತೆಯಾಗಿತ್ತು, ಆದರೆ ಇಲ್ಲಿ ನಿಮಗೆ ನಿಜವಾಗಲೂ ಯುಪಿಎಸ್ಸಿ ಪರೀಕ್ಷೆಯನ್ನು ತನ್ನ ಮೊದಲನೆಯ ಪ್ರಯತ್ನದಲ್ಲಿಯೇ ತುಂಬಾ ಸರಾಗವಾಗಿ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಸಹ ಎಲ್ಲವನ್ನು ಮೆಟ್ಟಿನಿಂತು ಭಾರತ ದೇಶದಲ್ಲಿಯೇ 5ನೇ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿದ್ದ ಭೋಪಾಲ್ ಮೂಲದ ನಿವಾಸಿಯಾದ ಸೃಷ್ಟಿ ಜಯಂತ್ ದೇಶಮುಖ್ ಅವರ ಬಗ್ಗೆ ನಿಮಗೆ ಹೇಳುತ್ತೇವೆ. ಇವರ ಕತೆಯು ಅನೇಕ ಯುವಜನರಿಗೆ ಮತ್ತು ಯುಪಿಎಸ್ಸಿ ಪರೀಕ್ಷೆಯನ್ನ ಕ್ಲಿಯರ್ ಮಾಡಬೇಕೆಂದು ತುಂಬಾ ವರ್ಷಗಳಿಂದ ಕಠಿಣ ಪರಿಶ್ರಮ ಪಡುತ್ತಿರುವ ಅನೇಕ ವಿದ್ಯಾರ್ಥಿಗಳಿಗೆ ದಾರಿ ದೀಪ ಆಗಲಿದೆ.
1. ಇಡೀ ಭಾರತ ದೇಶದಲ್ಲಿಯೇ 5ನೇ ಸ್ಥಾನ ಗಿಟ್ಟಿಸಿಕೊಂಡ ಸೃಷ್ಟಿ
ಸೃಷ್ಟಿ ಜಯಂತ್ ದೇಶಮುಖ್ ಅವರು 2018 ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಇಡೀ ಭಾರತ ದೇಶದಲ್ಲಿಯೇ 5ನೇ ಸ್ಥಾನವನ್ನು ಗಿಟ್ಟಿಸಿಕೊಂಡು ಮಹಿಳೆಯರ ಪಟ್ಟಿಯಲ್ಲಿ ಇವರೇ ಪ್ರಥಮ ಸ್ಥಾನದಲ್ಲಿದ್ದಾರೆ.
2. ಎಂಜಿನಿಯರಿಂಗ್ ಮಾಡುತ್ತಲೇಯುಪಿಎಸ್ಸಿ ಪರೀಕ್ಷೆಗೆ ತಯಾರಿ
ತನ್ನ ಇಡೀ ಜೀವನವನ್ನು ಒಂದು ಎಂಜಿನಿಯರಿಂಗ್ ಉದ್ಯೋಗದಿಂದ ಸಾಗಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡ ಸೃಷ್ಟಿ ದೇಶಮುಖ್ ಅವರು ತಾವು ಎಂಜಿನಿಯರಿಂಗ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಯುಪಿಎಸ್ಸಿ ಪರೀಕ್ಷೆಯ ತಯಾರಿಯನ್ನು ಶುರು ಮಾಡಿದ್ದರು.
3. ಎರಡು ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ನಡೆಸಿದ್ದೀರಿ
ನನ್ನ ಎಂಜಿನಿಯರಿಂಗ್ ಸೆಮಿಸ್ಟರ್ ಪರೀಕ್ಷೆಗಳಿಗೆ ಸುಮಾರು ಒಂದು ಅಥವಾ ಒಂದೂವರೆ ತಿಂಗಳು ಮಾತ್ರವೇ ಮೀಸಲಿಟ್ಟು, ಉಳಿದ ಎಲ್ಲಾ ಸಮಯವನ್ನು ನಾನು ಯುಪಿಎಸ್ಸಿ ಪರೀಕ್ಷೆಯ ತಯಾರಿಗೆ ಮೀಸಲಿಟ್ಟಿದ್ದು ಹೆಚ್ಚಿನ ಗಮನ ಮತ್ತು ಪ್ರಯತ್ನ ಯುಪಿಎಸ್ಸಿ ಪರೀಕ್ಷೆಯ ಕಡೆಗೆ ಇತ್ತು ಎಂದು ಸೃಷ್ಟಿ ಹೇಳುತ್ತಾರೆ.
4. ತಂದೆ ತಾಯಿಯ ಬೆಂಬಲ
ಸೃಷ್ಟಿಯ ತಾಯಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಂದೆ ಎಂಜಿನಿಯರ್ ಆಗಿದ್ದಾರೆ. ತಂದೆ ತಾಯಿಯ ಸಂಪೂರ್ಣವಾದ ಬೆಂಬಲ ಸೃಷ್ಟಿಗಿದ್ದು ಅವಳನ್ನು ಏನು ಓದುತ್ತಿದೀಯಾ, ಯಾವಾಗ ಓದುತ್ತಿರುವೆ ಎಂದು ಯಾವುದೇ ಪ್ರಶ್ನೆಗಳನ್ನ ಕೇಳದೇ ತಮ್ಮ ಮಗಳ ಮೇಲೆ ನಂಬಿಕೆ ಇಟ್ಟಿದ್ದರು. ಸೃಷ್ಟಿಗೆ ಬಾಲ್ಯದಿಂದಲೂ ಒಂದು ಉತ್ತಮವಾದ ಮತ್ತು ಆರೋಗ್ಯಕರವಾದ ವಾತಾವರಣವನ್ನು ತಂದೆ ತಾಯಿ ಸೃಷ್ಟಿಸಿದ್ದರು.
5. ಸಾಮಾಜಿಕ ಮಾಧ್ಯಮಗಳಿಂದ ದೂರ
ಹೇಗಾದರೂ ಮಾಡಿ ಯುಪಿಎಸ್ಸಿ ಪರೀಕ್ಷೆಯನ್ನು ಮೊದಲನೇ ಪ್ರಯತ್ನದಲ್ಲಿಯೇ ಪಾಸ್ ಮಾಡಬೇಕೆಂಬ ಬಯಕೆ ತುಂಬಾ ಬಲವಾಗಿದ್ದರಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡುವ ಮೊದಲೇ ಸೃಷ್ಟಿ ತನ್ನೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿರುವ ಅಕೌಂಟ್ಗಳನ್ನು ಮುಚ್ಚಿದರು. ಅವರ ಮೊದಲ ಪ್ರಯತ್ನವೇ ಅವರ ಕೊನೆಯ ಪ್ರಯತ್ನವು ಎಂಬಂತೆ ನಂಬಿದ್ದ ಸೃಷ್ಟಿಗೆ ಕಂಡಿದ್ದು ಬರೀ ಯುಪಿಎಸ್ಸಿ ಪರೀಕ್ಷೆ ಮಾತ್ರ.
6.ಯುಪಿಎಸ್ಸಿ ಪರೀಕ್ಷೆ ತಯಾರಿಗೆ ರಾಜ್ಯಸಭೆ ಟಿವಿ ನೋಡಿದ್ದು ತುಂಬಾ ಸಹಾಯವಾಯ್ತು
ಯುಪಿಎಸ್ಸಿ ಪರೀಕ್ಷೆ ತಯಾರಿಗೆ ನನಗೆ ಪ್ರತಿದಿನ ದಿನಪತ್ರಿಕೆಯನ್ನು ಓದಿದ್ದು ಮತ್ತು ರಾಜ್ಯಸಭೆ ಟಿವಿ ನೋಡಿದ್ದು ತುಂಬಾ ಸಹಾಯಕವಾಯ್ತು ಎಂದು ಸೃಷ್ಟಿ ಹೇಳಿದ್ದಾರೆ. ಆನ್ಲೈನ್ನಲ್ಲಿ ಲಭ್ಯವಾದಂತಹ ಸ್ಟಡಿ ಮೆಟೀರಿಯಲ್ ಸಹ ತುಂಬಾ ಉಪಯೋಗಕ್ಕೆ ಬಂತು ಎಂದು ಇವರು ಹೇಳಿದ್ದಾರೆ.
7.ಯುಪಿಎಸ್ಸಿ ಪರೀಕ್ಷೆ ಆಕಾಂಕ್ಷಿಗಳಿಗೆ ಸೃಷ್ಟಿ ಹೇಳುವ ಟಿಪ್ಸ್
ಯುಪಿಎಸ್ಸಿ ಪರೀಕ್ಷೆ ಆಕಾಂಕ್ಷಿಗಳಿಗೆ ಸೃಷ್ಟಿ ಹೇಳುವ ಟಿಪ್ಸ್ ಏನೆಂದರೆ "ಯುಪಿಎಸ್ಸಿ ಪರೀಕ್ಷೆ ತಯಾರಿ ಶುರು ಮಾಡಿದಾಗ ನೀವು ನಿಮ್ಮ ಮೊದಲನೆಯ ಪ್ರಯತ್ನವನ್ನೇ ಕೊನೆಯ ಪ್ರಯತ್ನ ಎಂದು ತಿಳಿದುಕೊಳ್ಳಿ ಮತ್ತು ನಿಮ್ಮ ಸ್ಪರ್ಧೆ ಏನಿದ್ದರೂ ಕೇವಲ ಗಂಭೀರವಾಗಿ ಅತ್ಯಂತ ಛಲದಿಂದ ಪರೀಕ್ಷೆಯನ್ನು ಬರೆಯುವಂತಹ ವಿದ್ಯಾರ್ಥಿಗಳೊಂದಿಗೆ ಮಾತ್ರ ಹಾಗಾಗಿ ಎಷ್ಟು ಜನರು ಪರೀಕ್ಷೆ ಬರೆಯುತ್ತಿದ್ದಾರೆ ಎನ್ನುವುದರ ಬಗ್ಗೆ ನಿಮಗೆ ಅನವಶ್ಯಕವಾದ ಭಯವನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ".
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ