ಮಾಧ್ಯಮಗಳಲ್ಲಿನ ಸಾವಿನ ಸುದ್ದಿ ನೋಡಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚು; ಬಯಲಾಯ್ತು ಆಘಾತಕಾರಿ ಮಾಹಿತಿ

ಜಗತ್ತಿನಾದ್ಯಂತ ಪ್ರತಿವರ್ಷ 8.50 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಿದ್ದಾರೆ. ಅಷ್ಟೇ ಅಲ್ಲ, ಒಂದೂವರೆ ಕೋಟಿಗೂ ಹೆಚ್ಚು ಜನರು ಆತ್ಮಹತ್ಯೆಯ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.

Sushma Chakre | news18-kannada
Updated:June 17, 2020, 2:49 PM IST
ಮಾಧ್ಯಮಗಳಲ್ಲಿನ ಸಾವಿನ ಸುದ್ದಿ ನೋಡಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚು; ಬಯಲಾಯ್ತು ಆಘಾತಕಾರಿ ಮಾಹಿತಿ
ಪ್ರಾತಿನಿಧಿಕ ಚಿತ್ರ
  • Share this:
ಪತ್ರಿಕೆಗಳು, ಸಿನಿಮಾ, ಟಿವಿ ಮುಂತಾದ ಮಾಧ್ಯಮಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದವರ ಬಗ್ಗೆ ವರದಿ ಮಾಡುವ ರೀತಿಯಿಂದಾಗಿ ಈ ರೀತಿಯ ಮನೋಭಾವ ಸಾಂಕ್ರಾಮಿಕವಾಗಿ ಹರಡಿ, ಆತ್ಮಹತ್ಯೆಯ ಮನಸ್ಥಿತಿಗಳು ಇನ್ನಷ್ಟು ಹೆಚ್ಚಾಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಮಾಧ್ಯಮಗಳಲ್ಲಿ ಆತ್ಮಹತ್ಯೆ ಅಥವಾ ಸಾವಿನ ಸುದ್ದಿಗಳನ್ನು ಹೆಚ್ಚು ವರ್ಣನಾತ್ಮಕವಾಗಿ ಬರೆಯುವುದರಿಂದ ಆ ಬಗ್ಗೆ ಜನರಿಗೆ ಆಸಕ್ತಿಯೂ ಹೆಚ್ಚಾಗುತ್ತದೆ. ಇದು ಆತಂಕಕಾರಿ ಬೆಳವಣಿಗೆಯೂ ಹೌದು ಎನ್ನಲಾಗಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಡಾ. ಫರಾ ಕಿದ್ವಾಯಿ 'ಸೂಸೈಡಿಯಲ್ ಬಿಹೇವಿಯರ್- ಅಸೆಸ್​ಮೆಂಟ್ ಆಫ್​ ಪೀಪಲ್ ಎಟ್ ರಿಸ್ಕ್' ಎಂಬ ಪುಸ್ತಕದಲ್ಲಿ ಬರೆದಿರುವ ಅಧ್ಯಾಯವನ್ನು ಇಲ್ಲಿ ನೀಡಲಾಗಿದೆ.

ತನ್ನ ಜೀವವನ್ನು ಅಂತ್ಯಗೊಳಿಸಿಕೊಳ್ಳಲು ಅನೇಕರು ನಾನಾ ರೀತಿಯ ಆತ್ಮಹತ್ಯೆ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಈ ಮನಸ್ಥಿತಿಯನ್ನು ಹೋಗಲಾಡಿಸುವುದು ಸಮಾಜದ ಮುಂದಿರುವ ದೊಡ್ಡ ಸವಾಲಾಗಿದೆ. ಒಂದು ಕ್ಷಣದಲ್ಲಿ ಬದಲಾಗುವ ಮನಸ್ಥಿತಿಯಿಂದ ವ್ಯಕ್ತಿ ತನ್ನ ಪ್ರಾಣವನ್ನೇ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜಗತ್ತಿನಾದ್ಯಂತ ಪ್ರತಿವರ್ಷ 8.50 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಿದ್ದಾರೆ. ಅಷ್ಟೇ ಅಲ್ಲ, ಒಂದೂವರೆ ಕೋಟಿಗೂ ಹೆಚ್ಚು ಜನರು ಆತ್ಮಹತ್ಯೆಯ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಯುವಪೀಳಿಗೆಯವರೇ ಹೆಚ್ಚಾಗಿ ಆತ್ಮಹತ್ಯೆಯ ಮಾರ್ಗವನ್ನು ಹಿಡಿಯುತ್ತಿದ್ದಾರೆ.

ಇದನ್ನೂ ಓದಿ: ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರ ತ್ಯಾಗವನ್ನು ಎಂದೂ ಮರೆಯುವುದಿಲ್ಲ; ರಕ್ಷಣಾ ಸಚಿವ ರಾಜನಾಥ್ ಸಿಂಗ್

ಸಾಮಾನ್ಯವಾಗಿ 15ರಿಂದ 35 ವರ್ಷದೊಳಗಿನ ಜನರಲ್ಲಿ ಆತ್ಮಹತ್ಯೆಯ ಮನಸ್ಥಿತಿ ಹೆಚ್ಚಾಗಿ ಕಂಡುಬಂದಿದೆ. ವಿಚಿತ್ರವೆಂದರೆ, ಇವರಲ್ಲಿ ಬಹುತೇಕರಿಗೆ ತಾವು ಸಾಯಬೇಕೋ, ಬೇಡವೋ ಎಂಬುದರ ಬಗ್ಗೆ ಖಚಿತತೆ ಇರುವುದಿಲ್ಲ. ಈ ಬಗ್ಗೆ ಗೊಂದಲದ ಮಸ್ಥಿತಿಯಲ್ಲಿರುವ ಅವರ ಮೇಲೆ ಮಾಧ್ಯಮಗಳ ವರದಿಗಳು ಪರಿಣಾಮ ಬೀರಬಲ್ಲವು. ದುರ್ಬಲ ಮನಸ್ಥಿತಿಯ ಜನರ ಮೇಲೆ ಮಾಧ್ಯಮಗಳ ವರದಿಗಳು ಬಹುಬೇಗ ಪರಿಣಾಮ ಬೀರುತ್ತವೆ. ಆ ವರದಿಗಳನ್ನು ಓದಿ ಅವರು ಉತ್ತೇಜಿತರಾಗಿ ಪ್ರಾಣ ಕಳೆದುಕೊಳ್ಳಲು ಗಟ್ಟಿ ನಿರ್ಧಾರ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.

ಭಾರತದಲ್ಲಿ ಆತ್ಮಹತ್ಯೆಯ ಮೇಲೆ ಮಾಧ್ಯಮಗಳ ಪ್ರಭಾವದ ಕುರಿತು ಮಾಧ್ಯಮ ಸಂಶೋಧನೆಯ ಕೊರತೆಯಿದೆ. ಬೇರೆ ದೇಶಗಳ ಶೈಕ್ಷಣಿಕ ಕ್ಷೇತ್ರದಲ್ಲಿ, ಮಾನಸಿಕ ಆರೋಗ್ಯ, ಸಾಮಾಜಿಕ ವಿಜ್ಞಾನ ಮತ್ತು ಸಮೂಹ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ತಜ್ಞರು ಆತ್ಮಹತ್ಯೆಯೆಂಬುದು ಸಾಂಕ್ರಾಮಿಕ ರೋಗವಿದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಬೇರೊಬ್ಬ ವ್ಯಕ್ತಿಯಿಂದ ಪ್ರಭಾವಿತರಾಗಿ ಸಾವನ್ನಪ್ಪುವವರ ಸಂಖ್ಯೆಯೇ ಹೆಚ್ಚಾಗಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮಕ್ಕೂ ಮೊದಲೇ ಚೀನಾ ಸೈನಿಕರ ಗುಂಡಿಗೆ ಬಲಿಯಾದ ತಮಿಳುನಾಡು ಯೋಧ ಪಳನಿಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಪ್ರತಿದಿನವೂ ಆತ್ಮಹತ್ಯೆಯ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದರಿಂದ, ಅವುಗಳನ್ನು ವೈಭವೀಕರಿಸುವುದರಿಂದ ದುರ್ಬಲ ಮನಸ್ಸಿನವರ ಮೇಲೆ ಪರಿಣಾಮ ಬೀರುತ್ತದೆ. ಅವರು ತಮ್ಮನ್ನು ಕೂಡ ಮೃತಪಟ್ಟವರ ಜೊತೆ ಹೋಲಿಸಿಕೊಳ್ಳತೊಡಗುತ್ತಾರೆ. ಹೀಗಾಗಿ, ಸಾವಿನ ಸುದ್ದಿಗಳನ್ನು ಪ್ರಸಾರ ಮಾಡುವಾಗ ಮಾಧ್ಯಮಗಳು ಕೂಡ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಅಧ್ಯಯನ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ತಜ್ಞರು ಮಾಧ್ಯಮಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಮಾಧ್ಯಮಗಳಿಗೆ ನೀಡಲಾಗಿರುವ ಮುಖ್ಯವಾದ ಮಾರ್ಗಸೂಚಿಗಳು ಇಲ್ಲಿವೆ...

  • ಆತ್ಮಹತ್ಯೆಯನ್ನು ಯಶಸ್ಸು ಎಂಬಂತೆ ಬಿಂಬಿಸಬೇಡಿ. ಅದು ಒಂದು ಸಾವಷ್ಟೆ.

  •  ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಬಹುತೇಕರು ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂಬುದನ್ನು ಹೈಲೈಟ್ ಮಾಡಿ. ಹಾಗೇ, ಇದು ಅಪಾಯಕಾರಿಯಾಗಿದ್ದು, ಖಿನ್ನತೆ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆಯೂ ಇದೆ, ಅದಕ್ಕೆ ಸಾವೊಂದೇ ಮಾರ್ಗವಲ್ಲ ಎಂದು ತಿಳಿಸಿ.

  •  ಮಾಧ್ಯಮಗಳಲ್ಲಿ ಆದಷ್ಟು ಸಹಾಯವಾಣಿ ಮತ್ತು ಇಂತಹ ಸಮಯದಲ್ಲಿ ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿಯನ್ನು ಒದಗಿಸಿ.

  • ಆತ್ಮಹತ್ಯೆಯ ಸುದ್ದಿ ಪ್ರಕಟಿಸುವಾಗ ಫೋಟೋಗಳು ಅಥವಾ ಸೂಸೈಡ್ ನೋಟ್​ಗಳನ್ನು ಪ್ರಕಟಿಸಬೇಡಿ.

  •  ಸಾವನ್ನಪ್ಪಿದ ವ್ಯಕ್ತಿ ಯಾವ ವಿಧಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಅತಿಯಾದ ವಿವರಣೆಗಳನ್ನು ನೀಡಬೇಡಿ. ಇದು ಬೇರೊಬ್ಬರನ್ನು ಪ್ರಚೋದಿಸಬಹುದು.

  •  ಆತ್ಮಹತ್ಯೆಯನ್ನು ಹೆಚ್ಚು ವೈಭವೀಕರಿಸಬೇಡಿ. ಹಾಗೇ, ಆತ್ಮಹತ್ಯೆಗೆ ಸಣ್ಣಪುಟ್ಟ ಕಾರಣಗಳೇ ಸಾಕು ಎಂಬರ್ಥದ ಸುದ್ದಿಗಳನ್ನು ಪ್ರಸಾರ ಮಾಡಬೇಡಿ.

  • ಆತ್ಮಹತ್ಯೆ ಮಾಡಿಕೊಂಡಿದ್ದರಿಂದಲೇ ಆ ವ್ಯಕ್ತಿ ಎಲ್ಲ ಸಮಸ್ಯೆಗಳಿಂದ ಬಚಾವಾಗಿದ್ದಾನೆ, ಅದೊಂದೇ ಆತನ ಮುಂದಿದ್ದ ಮಾರ್ಗವಾಗಿತ್ತು ಎಂಬರ್ಥದ ಸುದ್ದಿಗಳನ್ನು ನೀಡಬೇಡಿ.ಪ್ರೇಮ ವೈಫಲ್ಯ, ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಹಣವಿಲ್ಲದೆ ಪರದಾಡುತ್ತಿರುವುದು, ಲೈಂಗಿಕ ದೌರ್ಜನ್ಯ, ಕೌಟುಂಬಿಕ ವೈಮನಸ್ಸು ಇದೆಲ್ಲ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಗಳು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಮಾಧ್ಯಮದಿಂದ ಗೊತ್ತಾಗುತ್ತಿದ್ದಂತೆ ಹಲವರು ತಾವೂ ಅದೇ ಮಾರ್ಗ ಅನುಸರಿಸಲು ನೋಡುತ್ತಾರೆ. ಹೀಗಾಗಿ, ಮಾಧ್ಯಮಗಳು ಸಾವಿನ ಸುದ್ದಿ ಬಿತ್ತರಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

(ಲೇಖನ: ಫರಾ ಕಿದ್ವಾಯಿ)
First published:June 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading