ನವ ದೆಹಲಿ (ಮೇ 03); ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಕುರಿತು ಮಾಧ್ಯಮಗಳು ವರದಿ ಮಾಡಲು ನಿರ್ಬಂಧ ಹೇರುವಂತೆ ಕೋರಿಸಿ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದು, ಮಾಧ್ಯಮಗಳು ವರದಿ ಮಾಡದಂತೆ ತಡೆಯಲು ಸಾಧ್ಯವಿಲ್ಲ ಎಂದಿದೆ. ಈ ಕುರಿತು ಸ್ಪಷ್ಟ ಸಂದೇಶ ನೀಡಿರುವ ಸುಪ್ರೀಂ ಕೋರ್ಟ್, "ಮಾಧ್ಯಮವು ಶಕ್ತಿಯುತವಾಗಿದೆ. ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದನ್ನು ಜನರಿಗೆ ತಿಳಿಸುತ್ತದೆ. ನಮ್ಮ ತೀರ್ಪುಗಳು ಮಾತ್ರವಲ್ಲದೆ, ಜನರ ಹಿತಕ್ಕಾಗಿ ಪ್ರಶ್ನೆಗಳು, ಉತ್ತರಗಳು ಮತ್ತು ಹೇಳಿಕೆಗಳನ್ನು ಮುಂದಿಡುತ್ತದೆ. ಆದರೆ ಮಾಧ್ಯಮಗಳು ನ್ಯಾಯಾಲಯದ ಹೇಳಿಕೆಗಳನ್ನು ವರದಿ ಮಾಡದೇ ಇರುವುದು ಸಾಧ್ಯವಿಲ್ಲ. ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಆದರೆ, ಮಾಧ್ಯಮಗಳು ನ್ಯಾಯಾಲಯದಲ್ಲಿ ಏನಾಗುತ್ತಿದೆ ಎಂಬುವುದನ್ನು ಸಂಪೂರ್ಣವಾಗಿ ವರದಿ ಮಾಡಬೇಕು" ಎಂದು ಕೋರ್ಟ್ ತಿಳಿಸಿದೆ.
ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. "ಪಂಚ ರಾಜ್ಯಗಳಲ್ಲಿ ಕೊರೋನಾ ಭೀತಿಯ ನಡುವೆಯೂ ಚುನಾವಣಾ ರ್ಯಾಲಿಗಳಿಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ. ಇದೇ ಕಾರಣಕ್ಕೆ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡಿದೆ. ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ದ ಏಕೆ ಕೊಲೆ ಪ್ರಕರಣ ದಾಖಲಿಸಬಾರದು?" ಎಂದು ಕಟುವಾಗಿ ವಿಮರ್ಶಿಸಿತ್ತು.
ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿ ಜನರ ನಡುವೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ಅಲ್ಲದೆ, ಈ ಪ್ರಕರಣ ಚುನಾವಣಾ ಆಯೋಗವನ್ನು ಮುಜುಗರಕ್ಕೂ ದೂಡಿತ್ತು. ಹೀಗಾಗಿ ಮಾಧ್ಯಮಗಳು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಪ್ರಕರಣದ ವರದಿಗೆ ತಡೆ ನೀಡುವಂತೆ ಆಯೋಗವು ಕೋರ್ಟ್ ಮೆಟ್ಟಿಲೇರಿತ್ತು.
ಅಲ್ಲದೆ ಇಂದು ನ್ಯಾಯಾಲಯದಲ್ಲಿ ವಾದಿಸಿರುವ ಆಯೋಗ, "ಚುನಾವಣಾ ಆಯೋಗಕ್ಕೆ ಯಾವುದೇ ಅವಕಾಶ ನೀಡದೆ ಅಥವಾ ವಿಪತ್ತು ನಿರ್ವಹಣಾ ಕಾಯ್ದೆಯಡಿ ಜವಾಬ್ದಾರಿಯುತ ಅಧಿಕಾರಿಗಳಿಂದ ಯಾವುದೇ ಉತ್ತರವನ್ನು ಪಡೆಯದೆ, ನಮ್ಮನ್ನು ಅಪರಾಧಿಗಳನ್ನಾಗಿ ಮಾಡಲಾಗಿದೆ" ಎಂದಿದೆ.
ಆದರೆ, ಇದಕ್ಕೆ ತಕ್ಕ ಉತ್ತರ ನೀಡಿರುವ ನ್ಯಾಯಾಲಯ, "ನ್ಯಾಯಾಲಯದ ವಿಚಾರಣೆಯ ವಿಷಯಗಳನ್ನು ಮಾಧ್ಯಮಗಳು ವರದಿ ಮಾಡುವಂತಿಲ್ಲ ಎಂದು ನಾವು ಇಂದಿನ ಕಾಲದಲ್ಲಿ ಹೇಳಲು ಸಾಧ್ಯವಿಲ್ಲ. ಅಂತಿಮ ಆದೇಶದಂತೆಯೆ, ನ್ಯಾಯಾಲಯದಲ್ಲಿ ನಡೆಯುವ ಚರ್ಚೆಗಳು ಕೂಡಾ ಸಮಾನ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿವೆ" ಎಂದು ಅಭಿಪ್ರಾಯಪಟ್ಟಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ