ಭಾನುವಾರ ಟೋಕಿಯೋದಲ್ಲಿ ನಡೆದ ಆರಂಭಿಕ ಸುತ್ತಿನ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಡೊಮಿನಿಕನ್ ರಿಪಬ್ಲಿಕ್ನ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾ ಅವರ ಕಠಿಣ ಸವಾಲನ್ನು ಸಮರ್ಥವಾಗಿ ಎದುರಿಸಿದ ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ (51 ಕೆಜಿ ವಿಭಾಗ) ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿ ಪ್ರೀ-ಕ್ವಾರ್ಟರ್ ಪ್ರವೇಶಿಸಿದರು. 2012 ರ ಒಲಿಂಪಿಕ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ 38 ವರ್ಷದ ಮೇರಿ ಕೋಮ್, ತನಗಿಂತ 15 ವರ್ಷ ಕಿರಿಯ ಮತ್ತು ಪ್ಯಾನ್ ಅಮೇರಿಕನ್ ಗೇಮ್ಸ್ ಕಂಚಿನ ಪದಕ ವಿಜೇತೆಯ ವಿರುದ್ಧ 4-1 ಅಂಕಗಳಿಂದ ಮೇಲುಗೈ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಪ್ರಾರಂಭದಿಂದ ಮುಗಿಯುವ ತನಕ ಅತ್ಯಂತ ರೋಮಾಂಚನಕಾರಿಯಾದ ಪಂದ್ಯ ಇದಾಗಿತ್ತು. ಗಾರ್ಸಿಯಾ ಅವರ ಉತ್ಸಾಹಭರಿತ ಹೋರಾಟವನ್ನು ಅತ್ಯಂತ ಸಮರ್ಥವಾಗಿ ಮೇರಿ ಕೋಮ್ ತಮ್ಮ ಅದ್ಭುತ ತಂತ್ರಗಳ ಮೂಲಕ ಅತ್ಯಂತ ಚಾಣಾಕ್ಷತನದಿಂದ ಎದುರಿಸಿದರು. ತನ್ನ ಪ್ರತಿಸ್ಪರ್ಧಿಯ ಆಟದ ತಂತ್ರವನ್ನು ಗ್ರಹಿಸಿದ ಮೇರಿ ಮೊದಲ ಸುತ್ತನ್ನು ತಮ್ಮದಾಗಿಸಿಕೊಂಡರು. ಆದರೆ ಯುವ ಆಟಗಾರ್ತಿ ಗಾರ್ಸಿಯಾ ಎರಡನೇ ಸುತ್ತಿನಲ್ಲಿ ತನ್ನದೇ ಆದ ಕೆಲವು ತೀವ್ರವಾದ ಹೊಡೆತಗಳಿಂದ ಗೆದ್ದುಕೊಂಡರು. ನಂತರ ಅಂತಿಮ ಮೂರು ನಿಮಿಷಗಳಲ್ಲಿ ಅನುಭವಿ ಆಟಗಾರ್ತಿ, 6 ಬಾರಿ ವಿಶ್ವ ಚಾಂಪಿಯನ್ ಈ ಅವಕಾಶವನ್ನು ಬಿಟ್ಟುಕೊಡಲು ತಯಾರಾಗದೆ ಅತ್ಯಂತ ಸಮರ್ಥವಾಗಿ ಎದುರಾಳಿಯನ್ನು ಎದುರಿಸಿ ಪಂದ್ಯ ತಮ್ಮದಾಗಿಸಿಕೊಂಡರು.
ಐವರು ತೀರ್ಪುಗಾರರಲ್ಲಿ ಮೊದಲ ಎರಡು ಸುತ್ತಿನಲ್ಲಿ ಮೂವರು ತೀರ್ಪುಗಾರರು ಮೇರಿ ಪರ ಅಂಕ ನೀಡಿದ್ದರು, ಮಿಕ್ಕ ಇಬ್ಬರು ತೀರ್ಪುಗಾರರು ಎದುರಾಳಿ ಬಾಕ್ಸರ್ ಮಿಗುಯೆಲಿನಾ ಅಂಕ ನೀಡಿದರು. ಆದರೆ ಮೂರನೇ ಸುತ್ತಿನಲ್ಲಿ ಅತ್ಯಂತ ಆಕ್ರಮಣಕಾರಿ ಆಟ ತೋರಿಸಿದ್ದ ಮೇರಿ ಕೋಮ್ ಅವರಿಗೆ 5 ತೀರ್ಪುಗಾರರು ಅಂಕ ನೀಡಿದರು. ಅಂತಿಮವಾಗಿ 4-1 ಅಂತರದಲ್ಲಿ ಮೇರಿ ಅವರು ಜಯಶಾಲಿಯಾದರು.
ನಾಲ್ಕು ಮಕ್ಕಳ ತಾಯಿಯಾದ ಮೇರಿ ಕೋಮ್ ಮುಂದಿನ ಪಂದ್ಯದಲ್ಲಿ ತೃತೀಯ ಶ್ರೇಯಾಂಕದ ಪದಕ ವಿಜೇತೆ ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಸೆಣೆಸಲಿದ್ದಾರೆ 2016 ರ ರಿಯೊ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ