ಬಿಜೆಪಿ ಜೊತೆ ಸೇರಿದರೂ ಸರಿಯೇ, ಎಸ್​ಪಿ ಸೋಲಿಸುವುದೇ ನಮ್ಮ ಗುರಿ: ಮಾಯಾವತಿ

ಕಾಂಗ್ರೆಸ್​ನಂತೆ ಸಮಾಜವಾದಿ ಪಕ್ಷ ಕೂಡ ದಲಿತ ವಿರೋಧಿ ಧೋರಣೆಯಿಂದ ಕೂಡಿದೆ. ಬಿಜೆಪಿ ಜೊತೆ ಕೈಜೋಡಿಸಬೇಕಾಗಿ ಬಂದರೂ ಎಸ್​ಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಮಾಯಾವತಿ ಮತ್ತು ಅಖಿಲೇಶ್ ಯಾದವ್

ಮಾಯಾವತಿ ಮತ್ತು ಅಖಿಲೇಶ್ ಯಾದವ್

 • News18
 • Last Updated :
 • Share this:
  ಲಕ್ನೋ(ಅ. 29): ಕಳೆದ ಲೋಕಸಭಾ ಚುನಾವಣೆಯ ವೇಳೆ ಒಂದಾಗಿದ್ದ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಈಗ ಮತ್ತೊಮ್ಮೆ ಹಾವು ಮುಂಗೂಸಿಗಳಂತಾಗಿವೆ. ಚುನಾವಣೆಯ ಸೋಲಿನ ಬಳಿಕ ಎರಡೂ ಪಕ್ಷಗಳ ಭಿನ್ನಾಭಿಪ್ರಾಯಗಳು ಇನ್ನಷ್ಟು ದಟ್ಟವಾಗಿ ಅನಾವರಣಗೊಳ್ಳುತ್ತಾ ಬಂದಿವೆ. ಬಿಎಸ್​ಪಿಯ ರಾಜ್ಯಸಭಾ ಅಭ್ಯರ್ಥಿ ಸ್ಪರ್ಧೆ ವಿರುದ್ಧ ಏಳು ಶಾಸಕರು ಬಂಡೆದ್ದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿರುವ ಬೆಳವಣಿಗೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರನ್ನ ಕೆರಳಿಸಿದೆ. ತನ್ನ ರೆಬೆಲ್ ಶಾಸಕರನ್ನ ಅಮಾನತುಗೊಳಿಸಿರುವ ಅವರು, ಸಮಾಜವಾದಿ ಪಕ್ಷದ ದಲಿತ ವಿರೋಧಿ ಮುಖ ನಿಚ್ಚಳವಾಗಿ ವ್ಯಕ್ತವಾಗಿದೆ ಎಂದು ಕುಟುಕಿದ್ದಾರೆ.

  “ಸಮಾಜವಾದಿ ಪಕ್ಷದ ಜನರು 1995ರಲ್ಲಿ ನನ್ನನ್ನು ಕೊಲ್ಲಲು ಯತ್ನಿಸಿದರು. ಆದರೆ, ದುರ್ಬಲ ವರ್ಗದವರ ಆಶೀರ್ವಾದದಿಂದ ನಾನು ಬಾಚಾವಾದೆ. ಅಂದು ಅವರು ತಮ್ಮ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಿಎಸ್​ಪಿ ಶಾಸಕರನ್ನ ಅಪಹರಿಸಿದ್ದರು. ಆ ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ಆದರೂ ಕೂಡ 2019ರ ಚುನಾವಣೆಯಲ್ಲಿ ಕೋಮುಶಕ್ತಿಗಳನ್ನ ಸೋಲಿಸುವ ಉದ್ದೇಶದಿಂದ ನಾವು ಆ ಕಹಿ ಮರೆತು ಮೈತ್ರಿಗೆ ಒಪ್ಪಿಕೊಂಡೆವು” ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಯಾವತಿ ತಿಳಿಸಿದರು.

  ಇದನ್ನೂ ಓದಿ: ಫ್ರಾನ್ಸ್​ನ ಚರ್ಚ್​ನಲ್ಲಿ ಮಹಿಳೆಯ ತಲೆ ಕತ್ತರಿಸಿ ಬರ್ಬರ ಹತ್ಯೆ; ಒಟ್ಟು 3 ಜನ ಸಾವು, ಹಲವರಿಗೆ ಗಾಯ

  ಅವರ ವಿರುದ್ಧ ಇದ್ದ 1995ರ ಪ್ರಕರಣವನ್ನು ಹಿಂಪಡೆದುಕೊಳ್ಳುವುದಕ್ಕಾಗಿ ನಮ್ಮ ಮೈತ್ರಿಯನ್ನು ಬಳಕೆ ಮಾಡಿಕೊಂಡರು. ನಾವು ಕೇಸ್ ವಾಪಸ್ ಪಡೆದು ತಪ್ಪು ಮಾಡಿದೆವು. ಯಾವಾಗ ಕೇಸ್ ಹಿಂಪಡೆದವೋ ಸಮಾಜವಾದಿ ಪಕ್ಷದ ವರ್ತನೆಯೇ ಬದಲಾಗಿ ಹೋಯಿತು. ಆ ಪಕ್ಷದ್ದು ಯಾವಾಗಲೂ ದಲಿತ ವಿರೋಧಿ ಧೋರಣೆಯೇ. ಅವರಿಗೆ ಚುನಾವಣೆ ಎದುರಿಸುವುದಕ್ಕಿಂತ ಹೆಚ್ಚಾಗಿ 1995ರ ಪ್ರಕರಣದಿಂದ ಬಚಾವಾಗುವುದು ಮುಖ್ಯವಾಗಿತ್ತು. ನಾವು ಮತ್ತೆ ಎಂದಿಗೂ ಆ ಪಕ್ಷದ ಜೊತೆ ಕೈಜೋಡಿಸುವುದಿಲ್ಲ ಎಂದು ಮಾಯಾವತಿ ಪಣತೊಟ್ಟರು.

  ರಾಜ್ಯ ಸಭಾ ಚುನಾವಣೆಯಲ್ಲೂ ಸಮಾಜವಾದಿ ಪಕ್ಷ ಮೋಸ ಮಾಡಿತು. ಒಬ್ಬರೇ ಅಭ್ಯರ್ಥಿಯನ್ನು ಹಾಕುತ್ತೇವೆಂದು ಕೊನೆಯ ಕ್ಷಣದಲ್ಲಿ ಸ್ವತಂತ್ರ ಅಭ್ಯರ್ಥಿಯನ್ನ ನಿಲ್ಲಿಸಿತು. ಎಸ್​​ಪಿಯಿಂದ ಒಬ್ಬರು ಮಾತ್ರ ನಿಲ್ಲುತ್ತಾರೆಂದು ಭಾವಿಸಿ ಬಿಎಸ್​ಪಿಯಿಂದ ರಾಮ್​ಜಿ ಗೌತಮ್ ಅವರನ್ನ ಕಣಕ್ಕಿಳಿಸಿದ್ದೆವು. ನಮ್ಮ ಅಭ್ಯರ್ಥಿಯ ನಾಮಪತ್ರ ಅಸಿಂಧುಗೊಳ್ಳುವಂತೆ ಮಾಡುವ ಅವರ ಕುತಂತ್ರ ಫಲಿಸಲಿಲ್ಲ ಎಂದು ಹೇಳಿದ ಬಿಎಸ್​ಪಿ ಮುಖ್ಯಸ್ಥೆ, ಏನೇ ಸಂದರ್ಭ ಬಂದರೂ, ಬಿಜೆಪಿ ಜೊತೆ ಕೈಜೋಡಿಸುವ ಪ್ರಮೇಯ ಬಂದರೂ ಸಮಾಜವಾದಿ ಪಕ್ಷದೊಂದಿಗೆ ಮಾತ್ರ ಮರಳಿ ಸ್ನೇಹ ಮಾಡಲ್ಲ ಎಂದರು.

  ಇದನ್ನೂ ಓದಿ: ಗುಜರಾತ್​ ಮಾಜಿ ಸಿಎಂ ಕೇಶುಭಾಯ್ ಪಟೇಲ್ ನಿಧನ; ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸಂತಾಪ

  “ನಮ್ಮ ಏಳು ಶಾಸಕರನ್ನು ಎಸ್​ಪಿ ಹಣದ ಬಲದಿಂದ ಕೊಳ್ಳಲು ಯತ್ನಿಸಿದರು. ಅವರ ಅಭ್ಯರ್ಥಿಯ ನಾಮಪತ್ರ ರದ್ದಾಗಿರುವ ಹಿನ್ನೆಲೆಯಲ್ಲಿ ಬಿಎಸ್​ಪಿ ಮತ್ತು ಬಿಜೆಪಿ ಒಳಮೈತ್ರಿ ಮಾಡಿಕೊಂಡಿವೆ ಎಂದು ಅವರು ಆರೋಪಿಸುತ್ತಿದ್ದಾರೆ. ಮುಂಬರುವ ವಿಧಾನಪರಿಷತ್ ಚುನಾವಣೆಗಳಲ್ಲಿ ಎಸ್​ಪಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ. ನಮ್ಮ ಶಾಸಕರಿಂದ ಬಿಜೆಪಿ ಅಥವಾ ಬೇರೆ ಅಭ್ಯರ್ಥಿಗೆ ಮತ ಹಾಕಿಸಿಯಾದರೂ ನಾವು ಎಸ್​ಪಿ ಅಭ್ಯರ್ಥಿಯನ್ನು ಸೋಲಿಸುತ್ತೇವೆ” ಎಂದರು.

  ಬಹುಜನ ಸಮಾಜ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ ಈ ಹಿಂದೆ ಮೈತ್ರಿ ಮಾಡಿಕೊಂಡು 2002ರಲ್ಲಿ ಸರ್ಕಾರ ರಚಿಸಿದ್ದವು. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಗಳಲ್ಲಿ ಬಿಎಸ್​ಪಿ ಮತ್ತು ಬಿಜೆಪಿ ಸ್ನೇಹ ಏರ್ಪಟ್ಟರೆ ಅನಿರೀಕ್ಷಿತವೇನಲ್ಲ, ಅಥವಾ ಆಶ್ಚರ್ಯವೂ ಅಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 2022ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇವೆಲ್ಲಾ ಬೆಳವಣಿಗೆಗಳು ಮುಂದಿನ ರಾಜಕೀಯ ದಿಕ್ಸೂಚಿಯಾರಿಬಹುದೆ?
  Published by:Vijayasarthy SN
  First published: