ಲಕ್ನೋ: ಶ್ರೀ ಕೃಷ್ಣ (Loard Sri Krishna) ಪರಮಾತ್ಮನ ಜನ್ಮಭೂಮಿ ಎಂದು ಹೇಳಲಾದ ಸ್ಥಳದಲ್ಲಿ ನಿರ್ಮಾಣವಾಗಿರುವ ಶಾಹಿ ಈದ್ಗಾ ಮಸೀದಿ (Shahi Idgha Mosque) ಕುರಿತಂತೆ ಜನವರಿ 2ರ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸಲು ಉತ್ತರ ಪ್ರದೇಶದ (Uttar Pradesh) ಮಥುರಾದ (Mathura) ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ. ಅಲ್ಲದೇ ಜನವರಿ 20ರ ನಂತರ ಈ ಕುರಿತ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಹಿಂದೂ ಸೇನೆಯ ವಿಷ್ಣು ಗುಪ್ತಾ ಅವರು ಸಲ್ಲಿಸಿದ ಮೊಕದ್ದಮೆಯ ಆಧಾರದ ಮೇಲೆ ನ್ಯಾಯಾಲಯ ಈ ಆದೇಶ ನೀಡಿದೆ. ಇದು ಕೂಡ ವಾರಣಾಸಿಯ (Varanasi) ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ರೀತಿಯ ಪ್ರಕರಣವೇ ಆಗಿದೆ. ಶಾಹಿ ಈದ್ಗಾ ಮಸೀದಿ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಲಾಗಿದೆ.
ಶಾಹಿ ಈದ್ಗಾ ಮಸೀದಿ ಕೆಡವಲು ಹಿಂದೂ ಸಂಘಟನೆಗಳ ಒತ್ತಾಯ
17ನೇ ಶತಮಾನದ ಕತ್ರಾ ಕೇಶವ್ ದೇವ್ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ಕೆಡವಿ ಹಾಕುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿ, ಮೊಕದ್ದಮೆ ಹೂಡಿತ್ತು. ಅಲ್ಲದೇ ಮಸೀದಿಯನ್ನು ಶ್ರೀ ಕೃಷ್ಣನ ಜನ್ಮ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಿತ್ತು.
1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಶಾಹಿ ಈದ್ಗಾ ಮಸೀದಿಯನ್ನು ಕತ್ರಾ ಕೇಶವ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ ನಿರ್ಮಿಸಲಾಯಿತು ಎಂದು ವಿಷ್ಣು ಗುಪ್ತಾ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ವಕೀಲ ಶೈಲೇಶ್ ದುಬೆ ಪ್ರತಿಕ್ರಿಯೆ
ಈ ಕುರಿತಂತೆ ಪ್ರತಿಕ್ರಿಯಿಸಿರುವ ವಿಷ್ಣು ಗುಪ್ತಾ ಅವರ ವಕೀಲ ಶೈಲೇಶ್ ದುಬೆ ಅವರು, ಡಿಸೆಂಬರ್ 8 ರಂದು ದೆಹಲಿ ಮೂಲದ ಶ್ರೀ ಗುಪ್ತಾ, ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಅದರ ಉಪಾಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಅವರು ನ್ಯಾಯಾಲಯದಲ್ಲಿ ಈ ಬಗ್ಗೆ ಹಕ್ಕು ಮಂಡಿಸಿದ್ದಾರೆ ಎಂದು ತಿಳಿಸಿದರು.
ನಂತರ ಶ್ರೀಕೃಷ್ಣ ಜನಿಸಿದಾಗಿನಿಂದ ಮಂದಿರ ನಿರ್ಮಾಣದವರೆಗಿನ ಸಂಪೂರ್ಣ ಇತಿಹಾಸವನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. 1968ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಈದ್ಗಾ ನಡುವೆ ಮಾಡಿಕೊಂಡಿರುವ ಒಪ್ಪಂದವನ್ನು ಕಾನೂನುಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸುವಂತೆ ಒತ್ತಾಯಿಸಿರುವುದಾಗಿ ಹೇಳಿದರು.
ಈ ಹಿಂದೆ ಪ್ರಕರಣ ವಜಾಗೊಳಿಸಿದ್ದ ಮಥುರಾದ ಸಿವಿಲ್ ಕೋರ್ಟ್
1947ರ ಆಗಸ್ಟ್ 15 ರಂದು ಇದ್ದಂತೆ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ಥಾನಮಾನವನ್ನು ಕಾಯ್ದುಕೊಳ್ಳುವ 1991ರ ಪೂಜಾ ಸ್ಥಳಗಳ ಕಾಯ್ದೆಯಡಿಯಲ್ಲಿ ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಈ ಹಿಂದೆ ಮಥುರಾದ ಸಿವಿಲ್ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತ್ತು.
ಅಲ್ಲದೇ, 16 ನೇ ಶತಮಾನದ ಬಾಬರಿ ಮಸೀದಿಯನ್ನು ಒಳಗೊಂಡಿರುವ ಅಯೋಧ್ಯೆ ದೇವಾಲಯ-ಮಸೀದಿ ಪ್ರಕರಣವು ಕಾನೂನಿಗೆ ಏಕೈಕ ಅಪವಾದವಾಗಿದೆ. ಇದನ್ನು ಪುರಾತನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ನಂಬಿದ್ದ ಹಿಂದೂ ಕಾರ್ಯಕರ್ತರು 1992 ರಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. 2019 ರಲ್ಲಿ ಸುಪ್ರೀಂ ಕೋರ್ಟ್ ಮಸೀದಿ ಸ್ಥಳವನ್ನು ಹಿಂದೂಗಳಿಗೆ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಹಸ್ತಾಂತರಿಸಿತು ಮತ್ತು ಮಸೀದಿಗಾಗಿ ಪರ್ಯಾಯ ಭೂಮಿಗೆ ನೀಡಲು ಆದೇಶಿಸಿತು.y
ಕೃಷ್ಣ ಜನ್ಮಭೂಮಿ ಮೊಕದ್ದಮೆ ಹಿಂದೆ ವಜಾಗೊಳಿಸಿದ್ದ ಕೋರ್ಟ್
ಮಥುರಾ ನ್ಯಾಯಾಲಯವು ಕೃಷ್ಣ ಜನ್ಮಭೂಮಿ ಮೊಕದ್ದಮೆಯನ್ನು ಈ ಹಿಂದೆ ವಜಾಗೊಳಿಸಿತ್ತು, ಅದನ್ನು ನೋಂದಾಯಿಸಿದರೆ, ಅನೇಕ ಆರಾಧಕರು ವಿವಿಧ ಪ್ರಕರಣಗಳಲ್ಲಿ ಕೋರ್ಟ್ ಮೆಟ್ಟಿಲೇರಬಹುದು ಎಂದು ಅಂದುಕೊಂಡಿತ್ತು. ಅದರಂತೆ ಕೋರ್ಟ್ ಆದೇಶದ ವಿರುದ್ಧ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: Sri Krishna Janmashtami: ಶ್ರೀ ಕೃಷ್ಣ ಪ್ರಾಣ ತ್ಯಾಗ ಮಾಡಿದ ಸ್ಥಳ ಇದಂತೆ; ಎಲ್ಲಿದೆ, ಏನು ಈ ಸ್ಥಳದ ಮಹಿಮೆ?
ಅಲ್ಲದೆ, ಶ್ರೀಕೃಷ್ಣನ ಭಕ್ತರಾದ ತಮಗೆ ನ್ಯಾಯಾಲಯವನ್ನು ಸಂಪರ್ಕಿಸುವ ಹಕ್ಕಿದೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ವಾದಿಸಿದ್ದಾರೆ. ಹಾಗೂ, ಭಗವಾನ್ ಕೃಷ್ಣನ ನಿಜವಾದ ಜನ್ಮಸ್ಥಳದಲ್ಲಿ ಪೂಜೆ ಮಾಡುವ ಹಕ್ಕಿದೆ ಎಂದೂ ಅವರು ಹೇಳುತ್ತಾರೆ.
ಶಾಹಿ ಮಸೀದಿಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಕರೆ ನೀಡಿದ್ದ ಹಿಂದೂ ಸಂಘಟನೆಗಳು
ಈ ತಿಂಗಳ ಆರಂಭದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದ ಅಂಗವಾಗಿ ಶಾಹಿ ಮಸೀದಿ ಈದ್ಗಾದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಕರೆ ನೀಡಿತ್ತು. ಈ ವೇಳೆ ಸಂಘಟನೆಯ ನಾಯಕರಲ್ಲಿ ಒಬ್ಬನನ್ನು ಸೇರಿದಂತೆ 7 ರಿಂದ 8 ಮಂದಿಯನ್ನು ಬಂಧಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ