ಆಟೋಮೊಬೈಲ್ ಕ್ಷೇತ್ರ ಕುಸಿತಕ್ಕೆ ಓಲಾ ಊಬರ್ ಕಾರಣವಲ್ಲ; ಸಚಿವೆ ನಿರ್ಮಲಾ ಸೀತಾರಾಮನ್​ಗೆ ತಿರುಗೇಟು ನೀಡಿದ ಮಾರುತಿ ಸುಜುಕಿ!

ಭಾರತದಲ್ಲಿ ಮಾಲೀಕತ್ವದ ಮಾದರಿ ಇನ್ನೂ ಬದಲಾಗಿಲ್ಲ. ಕಾರು ಖರೀದಿ ಎಂಬುದು ಇಲ್ಲಿನ ಜನರ ಹಾಗೂ ಕುಟುಂಬಗಳ ಮಹತ್ವಾಕಾಂಕ್ಷೆಯ ವಿಚಾರ. ಹೀಗಾಗಿ ಓಲಾ-ಊಬರ್ ನಂತಹ ಸೇವೆಯಿಂದಲೇ ಆಟೋಮೊಬೈಲ್ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾರುತಿ ಸುಜುಕಿ ತಿಳಿಸಿದೆ.

MAshok Kumar | news18-kannada
Updated:September 12, 2019, 11:03 AM IST
ಆಟೋಮೊಬೈಲ್ ಕ್ಷೇತ್ರ ಕುಸಿತಕ್ಕೆ ಓಲಾ ಊಬರ್ ಕಾರಣವಲ್ಲ; ಸಚಿವೆ ನಿರ್ಮಲಾ ಸೀತಾರಾಮನ್​ಗೆ ತಿರುಗೇಟು ನೀಡಿದ ಮಾರುತಿ ಸುಜುಕಿ!
ಸಾಂದರ್ಭಿಕ ಚಿತ್ರ.
  • Share this:
ಗುವಾಹಟಿ (ಸೆಪ್ಟೆಂಬರ್.12); ದೇಶದ ಆಟೋಮೊಬೈಲ್ ಕ್ಷೇತ್ರದ ಹಿನ್ನಡೆಗೆ ಓಲಾ ಮತ್ತು ಊಬರ್ ಸೇವೆಗಳು ಕಾರಣವಲ್ಲ, ಇಂತಹ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ವಿವರವಾದ ಅಧ್ಯಯನದ ಅವಶ್ಯಕತೆ ಇದೆ ಎಂದು ಭಾರತದ ಅತಿದೊಡ್ಡ ಕಾರುಗಳ ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ಅಭಿಪ್ರಾಯಪಟ್ಟಿದೆ.

ಇತ್ತೀಚೆಗೆ ಭಾರತದ ಆರ್ಥಿಕತೆ ಸತತವಾಗಿ ಹಿನ್ನೆಡೆ ಅನುಭವಿಸುತ್ತಿದೆ. ಪರಿಣಾಮ ದೇಶದ ಆಟೋಮೊಬೈಲ್ ಕ್ಷೇತ್ರದ ಅಭಿವೃದ್ಧಿ ಪಾತಾಳಕ್ಕೆ ಕುಸಿಸಿದೆ. ಹತ್ತಾರು ಕಂಪೆನಿಗಳು ಕಾರುಗಳ ತಯಾರಿಕೆಯನ್ನೇ ಸ್ಥಗಿತಗೊಳಿಸಿವೆ. ಇದರಿಂದಾಗಿ ಅಪಾರ ಸಂಖ್ಯೆಯ ಜನ ನಿರುದ್ಯೋಗದ ಬೀತಿಯನ್ನು ಎದುರಿಸುತ್ತಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿದ್ದ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘

“ದೇಶದಲ್ಲಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಓಲಾ ಮತ್ತು ಊಬರ್ ಸಾರಿಗೆ ಸೇವೆಯಿಂದಾಗಿ ಜನ ಕಾರುಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಕಾರು ಖರೀದಿಸಿ ಮಾಸಿಕ ಕಂತುಗಳಿಗೆ ಬದ್ಧರಾಗುವ ಬದಲು ಓಲಾ ಉಬರ್ ನಂತಹ ಸಾರಿಗೆ ವ್ಯವಸ್ಥೆಗೆ ಆದ್ಯತೆ ನೀಡುವುದು ಉತ್ತಮ ಎಂಬ ಮನಸ್ಥಿತಿ ಜನರ ನಡುವೆ ಬೆಳೆಯುತ್ತಿದೆ. ಇದು ಆಟೋ ಮೊಬೈಲ್ ಕ್ಷೇತ್ರದ ಮಂದಗತಿಗೆ ಕಾರಣ” ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ : ಜನರು ಓಲಾ, ಊಬರ್​ ಬಳಸುತ್ತಿರುವುದರಿಂದ ಆಟೋಮೊಬೈಲ್​ ಉದ್ಯಮ ಕುಸಿದಿದೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ವ್ಯಾಖ್ಯಾನ

ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಭಿಪ್ರಾಯಕ್ಕೆ ತಿರುಗೇಟು ನೀಡಿರುವ ಮಾರುತಿ ಸುಜುಕಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಶ್ರೀವಾಸ್ತವ್, “ಭಾರತದಲ್ಲಿ ಮಾಲೀಕತ್ವದ ಮಾದರಿ ಇನ್ನೂ ಬದಲಾಗಿಲ್ಲ. ಕಾರು ಖರೀದಿ ಎಂಬುದು ಇಲ್ಲಿನ ಜನರ ಹಾಗೂ ಕುಟುಂಬಗಳ ಮಹತ್ವಾಕಾಂಕ್ಷೆಯ ವಿಚಾರ. ಹೀಗಾಗಿ ಓಲಾ-ಊಬರ್ ನಂತಹ ಸೇವೆಯಿಂದಲೇ ಆಟೋಮೊಬೈಲ್ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಇಂತಹ ತೀರ್ಮಾನಕ್ಕೆ ಬರುವುದಾದರೆ ಈ ಕುರಿತು ಸೂಕ್ತ ಸಂಶೋಧನೆ ಹಾಗೂ ಅಧ್ಯಯನದ ಅಗತ್ಯತೆ ಇದೆ” ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

“ಓಲಾ ಮತ್ತು ಊಬರ್ ಭಾರತದಲ್ಲಿ ಅಸ್ಥಿತ್ವಕ್ಕೆ ಬಂದು ಕೇವಲ 6-7 ವರ್ಷಗಳು ಮಾತ್ರ ಕಳೆದಿವೆ. ಈ ಅವಧಿಯಲ್ಲೂ ದೇಶದ ಆಟೋ ಮೊಬೈಲ್ ಕ್ಷೇತ್ರ ಉನ್ನತಿಯ ದಿನಗಳನ್ನು ಅತ್ಯುತ್ತಮ ಸಮಯವನ್ನು ಕಂಡಿದೆ. ಆದರೆ, ಆಟೋಮೊಬೈಲ್ ಕ್ಷೇತ್ರ ಸತತ ಕುಸಿತವನ್ನು ಅನುಭವಿಸುತ್ತಿರುವುದು ಇತ್ತೀಚಿನ ಕೆಲ ದಿನಗಳಲ್ಲಿ. ಹೀಗಾಗಿ ಈ ಕ್ಷೇತ್ರದ ಕುಸಿತಕ್ಕೆ ಓಲಾ-ಊಬರ್ ಕಾರಣ ಎಂದು ಊಹಿಸಬೇಡಿ” ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಅಮೆರಿಕಾ ಮಾರುಕಟ್ಟೆಯನ್ನು ಉದಾಹರಿಸಿದ ಅವರು, “ಓಲಾ ಮತ್ತು ಊಬರ್ ಅಮೆರಿಕಾದಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಆದರೂ ವರ್ಷದಿಂದ ವರ್ಷಕ್ಕೆ ಅಲ್ಲಿನ ಕಾರು ಮಾರಾಟ ದುಪ್ಪಟ್ಟಾಗುತ್ತಿದೆ” ಎಂದು ಅಭಿಪ್ರಾಯಿಸಿದ್ದಾರೆ.“ಜನ ಸಾಮಾನ್ಯರು ವಾರದ ದಿನಗಳಲ್ಲಿ ಕಚೇರಿಗೆ ತೆರಳಲು ಓಲಾ-ಊಬರ್ ನಂತಹ ಸಾರ್ವಜನಿಕ ಸಾರಿಗೆಯನ್ನು ಬಳಸಬಹುದು. ಆದರೆ, ವಾರಾಂತ್ಯದ ದಿನಗಳಲ್ಲಿ ಕುಟುಂಬ ಸಮೇತರಾಗಿ ವಿಹಾರಕ್ಕೆ ತೆರಳಲು ಖಾಸಗಿ ವಾಹನಗಳನ್ನೇ ನೆಚ್ಚಿಕೊಂಡಿದ್ದಾರೆ. ಭಾರತದಲ್ಲಿ ಮಾಲೀಕತ್ವದ ಮಾದರಿ ಇನ್ನೂ ಬದಲಾಗಿಲ್ಲ. ಹೀಗಾಗಿ ಆಟೋಮೊಬೈಲ್ ಕ್ಷೇತ್ರದ ಕುಸಿತಕ್ಕೆ ಹಣದ ದ್ರವ್ಯತೆಯಲ್ಲಿನ ಬಿಕ್ಕಟ್ಟು, ಉತ್ಪನ್ನಗಳ ಬೆಲೆಯಲ್ಲಿನ ಹೆಚ್ಚಳ, ಅಧಿಕ ತೆರಿಗೆ ಮತ್ತು ವಿಮಾ ದರಗಳ ಏರಿಕೆಯೇ ಕಾರಣ ಎಂದು ಶ್ರೀವಾಸ್ತವ್ ಆರೋಪಿಸಿದ್ದಾರೆ.

ಇದನ್ನೂ ಓದಿ : ಪಾನಿಪುರಿ, BHEL, ರೊಟ್ಟಿ, ಪೀಜ್ಜಾ, ಊಬರ್ ಓಲಾ… ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ನಿರ್ಮಲಾ ಸೀತಾರಾಮನ್

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಎದುರು ಪ್ರಮುಖ ಕೋರಿಕೆಗಳನ್ನು ಮುಂದಿಟ್ಟಿರುವ ಅವರು, “ಆಟೋಮೊಬೈಲ್ ಕ್ಷೇತ್ರದ ಮಂದಗತಿಯನ್ನು ನಿಭಾಯಿಸಲು ಸರ್ಕಾರ ಕಳೆದ ತಿಂಗಳು ಘೋಷಿಸಿದ ಕ್ರಮಗಳು ಸಾಕಾಗುವುದಿಲ್ಲ. ಪ್ರಸ್ತುತ ಪರಿಸ್ಥಿತಿಯ ನಿಖರ ಮಾಹಿತಿ ಸರ್ಕಾರಕ್ಕಿದೆ. ಹೀಗಾಗಿ ದೇಶದ ಆರ್ಥಿಕತೆಯನ್ನು ಮತ್ತೆ ಸುಸ್ಥಿತೆಯೆಡೆಗೆ ಚಲಿಸುವಂತೆ ಮಾಡಲು ಸರ್ಕಾರ ಮತ್ತಷ್ಟು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು ನೀಡಿರುವ ವರದಿಯ ಪ್ರಕಾರ ಆಗಸ್ಟ್​ನಲ್ಲಿ ದೇಶೀಯ ವಾಹನಗಳ ಮಾರಾಟ ಕಳೆದ ವರ್ಷ ಇದೇ ತಿಂಗಳಿನಲ್ಲಿ 23,82,436 ಯುನಿಟ್ ಗಳಿಂದ 18,21,490 ಕ್ಕೆ ಇಳಿಕೆಯಾಗಿದೆ. ಅಂದರೆ ಶೇ.23.55 ರಷ್ಟು ಕುಂಠಿತ ಕಂಡು ಬಂದಿದೆ. ಅಲ್ಲದೆ ಇದೇ ವರ್ಷ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಮಾರಾಟದಲ್ಲಿ ಶೇ. 15.89 ರಷ್ಟು ಕುಸಿತವಾಗಿದೆ.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ