• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Martyrs Day 2021: ರೈತ ಹೋರಾಟ ಬೆಂಬಲಿಸಿ ದೆಹಲಿ ಗಡಿಯಲ್ಲಿ ಇಂದು ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ಹುತಾತ್ಮ ದಿನಾಚರಣೆ

Martyrs Day 2021: ರೈತ ಹೋರಾಟ ಬೆಂಬಲಿಸಿ ದೆಹಲಿ ಗಡಿಯಲ್ಲಿ ಇಂದು ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ಹುತಾತ್ಮ ದಿನಾಚರಣೆ

ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್

ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್

Martyrs Day 2021: ಸಮಾವೇಶದಲ್ಲಿ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ವಿಚಾರಧಾರೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ದೆಹಲಿ ಗಡಿಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ.

  • Share this:

ನವದೆಹಲಿ, ಮಾ. 23: ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ದೆಹಲಿ‌ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು‌ ಸ್ವತಂತ್ರ ಸೇನಾನಿಗಳಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನದ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಯುವಜನರ ಬೃಹತ್ ಸಮಾವೇಶ ನಡೆಸಲಿದ್ದಾರೆ.


ಸಮಾವೇಶದಲ್ಲಿ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ವಿಚಾರಧಾರೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಮುಖ್ಯವಾಗಿ ಈ ಮೂವರು ಮಹಾನ್ ದೇಶಪ್ರೇಮಿಗಳ ಹೋರಾಟದ ಬಗ್ಗೆ ಮನನ ಮಾಡಲಾಗುವುದು. ಆ ಮೂಲಕ ರೈತರ ಹೋರಾಟದಲ್ಲೂ ಯಶಸ್ವಿ ಕಾಣಲೇಬೇಕು ಎಂದು ಪಣತೊಡಗಲಾಗುವುದು.


ದೆಹಲಿ ಗಡಿಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ಅದಕ್ಕಾಗಿ ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಖಂಡ ಮತ್ತಿತರ ಪ್ರದೇಶಗಳಿಂದ ಯುವ ಜನರು ಪಾದಯಾತ್ರೆ ಮೂಲಕ ದೆಹಲಿ‌ ಗಡಿಗಳಿಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಖಟ್ಕಾಡ್ ಕಲನ್, ಹಿಸಾರ್ ಮತ್ತು ಮಥುರಾದಿಂದ ಪಾದ ಯಾತ್ರೆಗಳು ದೆಹಲಿಯ ಕಡೆ ಬರುತ್ತಿವೆ. ಎಲ್ಲರೂ ಒಂದೆಡೆ ಸೇರಿ ಅನ್ನದಾತರ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ.


ಇದನ್ನೂ ಓದಿ: Karnataka Coronavirus: ಕರ್ನಾಟಕದಲ್ಲಿ ಕೇರಳ, ಮಹಾರಾಷ್ಟ್ರ, ಪಂಜಾಬ್ ಪ್ರಯಾಣಿಕರಿಗಿರುವ ಕೊರೋನಾ ನಿಯಮ ತಮಿಳುನಾಡಿನವರಿಗೆ ಯಾಕಿಲ್ಲ?


ಬೇರೆ ಬೇರೆ ಭಾಗಗಳಿಂದ ದೆಹಲಿ ಕಡೆಗೆ ಬರುತ್ತಿರುವ ಯಾತ್ರೆಗಳಿಗೆ ಸಾರ್ವಜನಿಕ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎಲ್ಲೆಡೆ  ಮಾರ್ಚ್ 26ರಂದು ಹಮ್ಮಿಕೊಂಡಿರುವ  ಭಾರತ್ ಬಂದ್ ಗೂ ಬೆಂಬಲ ನೀಡುವಂತೆ ಮನವಿ ಮಾಡಲಾಗುತ್ತಿದೆ. ಅದಕ್ಕೂ ಕೂಡ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ದೆಹಲಿ ಗಡಿಗಳಲ್ಲಿ  50ಕ್ಕೂ ಹೆಚ್ಚು ರೈತ ಸಂಘಟನೆಗಳೊಂದಿಗೆ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆ ತಿಳಿಸಿದೆ.


ಸದ್ಯ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವುದರ ಜೊತೆಗೆ ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಬೇರೆ ಬೇರೆ ಭಾಗಗಳಲ್ಲಿ ರೈತ ಮಹಾಪಂಚಾಯತ್ ನಡೆಸಿ ರೈತರಿಗೆ ಕೇಂದ್ರ ಸರ್ಕಾರ ತಂದಿರುವ ಕರಾಳ ಶಾಸನಗಳ ಬಗ್ಗೆ ತಿಳಿಸಬೇಕು ಮತ್ತು ದೇಶದೆಲ್ಲೆಡೆ ರೈತರ ಹೋರಾಟ ಆಗುವಂತೆ ಮಾಡಬೇಕೆಂದು ಆಲೋಚಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಮಾರ್ಚ್ 20ರಂದು ಕರ್ನಾಟಕದಲ್ಲೂ ರೈತ ಮಹಾಪಂಚಾಯತ್ ನಡೆಸಿದೆ. ಕರ್ನಾಟಕದಲ್ಲಿ ಮತ್ತೊಂದು ರೈತ ಮಹಾಪಂಚಾಯತ್ ನಡೆಸುವ ಬಗ್ಗೆ ಕೂಡ ಆಲೋಚಿಸಲಾಗುತ್ತಿದೆ.


ಇದಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಮಾರ್ಚ್ 26ರಂದು ಭಾರತ್ ಬಂದ್ ‌ಗೆ ಕರೆ ನೀಡಲಾಗಿದೆ. ಭಾರತ್ ಬಂದ್ ಬೆಂಬಲಿಸುವಂತೆ ವಿವಿಧ ಸಂಘಟನೆಗಳನ್ನು ಮನವಿ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ದೆಹಲಿ ಹೊರಗೆ ಏನೇ ಆದರೂ ಇಲ್ಲಿನ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟದ ಕಿಚ್ಚು ಕುಂದಬಾರದು ಎಂಬ ಕಾರಣಕ್ಕೆ ಇಂದು ಸ್ವತಂತ್ರ ಸೇನಾನಿಗಳಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನದ ಹಿನ್ನೆಲೆಯಲ್ಲಿ ಯುವಜನರ ಬೃಹತ್ ಸಮಾವೇಶ ನಡೆಸಲಾಗುತ್ತಿದೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು