ನವದೆಹಲಿ (ಜ. 19): ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಇದೇ ಜ. 29ರಂದು ಸಂಸತ್ ಅಧಿವೇಶನ ಶುರುವಾಗಲಿದ್ದು, ಫೆ. 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಸಂಸತ್ ಸದಸ್ಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಪಾಡುವುದು ಅತ್ಯವಶ್ಯಕವಾಗಿದೆ. ಆರ್ಥಿಕತೆ ಮೇಲೆ ಈಗಾಗಲೇ ಸಾಕಷ್ಟು ಹೊಡೆತವನ್ನು ಕೊರೋನಾ ತಂದೊಡ್ಡಿದೆ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಮಂಡಿಸಲಾಗುತ್ತಿರುವ ಈ ಬಾರಿಯ ಬಜೆಟ್ನಲ್ಲಿ ಅನೇಕ ವಿಷಯಗಳಲ್ಲಿ ಮಾರ್ಪಾಡು ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್
ಸ್ವಾತಂತ್ರ್ಯ ಬಂದಾಗಿನಿಂದಲೂ ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡಿಸಲಾಗುತ್ತಿದೆ. ಪ್ರತಿ ವರ್ಷ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವಾಲಯದ ಆಂತರಿಕ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿತ್ತು. ಈ ಬಜೆಟ್ ಪ್ರತಿ ಮುದ್ರಿಸುವ ಹದಿನೈದು ದಿನಗಳ ಈ ಕಾರ್ಯದಲ್ಲಿ ಸುಮಾರು 100 ಉದ್ಯೋಗಿಗಳು ಭಾಗಿಯಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಬಜೆಟ್ ಪ್ರತಿಯನ್ನು ಸರ್ಕಾರ ಮುದ್ರಿಸಿಲ್ಲ. ಕೋವಿಡ್ ಹಿನ್ನಲೆಯಲ್ಲಿ ಬಜೆಟ್ ಮುದ್ರಣಕ್ಕೆ ತಡೆ ನೀಡಲಾಗಿದೆ. ಬಜೆಟ್ ಮಂಡನೆ ವೇಳೆ ಕೂಡ ಸಂಸದರಿಗೆ ಹಾರ್ಡ್ ಕಾಪಿ ಬದಲು ಸಾಫ್ಟ್ ಕಾಪಿ ನೀಡಲು ನಿರ್ಧರಿಸಲಾಗಿದೆ.
ಎರಡು ಭಾಗದಲ್ಲಿ ಬಜೆಟ್
ಕೇಂದ್ರ ಬಜೆಟ್ ಅನ್ನು ಫೆ. 1ರಂದು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಬಜೆಟ್ನ ಮೊದಲ ಸೆಷನ್ ಜನವರಿ 29ರಿಮದ ಫೆ. 15ರವರೆಗೆ ನಡೆಯಲಿದೆ. ಎರಡನೇ ಅಧಿವೇಶನ ಮಾರ್ಚ್ 8ರಿಂದ ಎಪ್ರಿಲ್ 8ರವರೆಗೆ ನಡೆಯಲಿದೆ.
ಹಲ್ವಾ ಕಾರ್ಯಕ್ರಮವಿಲ್ಲ
ಬಜೆಟ್ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಹಲ್ವಾ (ಸಿಹಿ ಖಾದ್ಯ) ಸಮಾರಂಭ ಈ ಬಾರಿ ನಡೆಯುವುದಿಲ್ಲ. ಬಜೆಟ್ ಮುದ್ರಣ ಸಂದರ್ಭದಲ್ಲಿ ಬಜೆಟ್ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸಿಬ್ಬಂದಿಗಳಿಗೆ ಸಿಹಿ ಖಾದ್ಯ ವಿತರಿಸಲಾಗುತ್ತದೆ. ಈ ಬಾರಿ ಈ ಸಿಹಿ ಹಂಚುವ ಸಂಭ್ರಮವಿರುವುದಿಲ್ಲ.
ಟ್ರಕ್ಗಳು ಕಾಣಸಿಗದು
ಬಜೆಟ್ ದಿನದಂದು ಸಾಮಾನ್ಯವಾಗಿ ಸಂಸತ್ತಿನ ಮುಂದೆ ಬಜೆಟ್ ಪ್ರತಿ ಹೊತ್ತ ಟ್ರಕ್ಗಳು ಕಂಡು ಬರುತ್ತವೆ. ಆದರೆ, ಈ ಬಾರಿ ಈ ಟ್ರಕ್ಗಳು ಕಂಡು ಬರುವುದಿಲ್ಲ. ಅಷ್ಟೇ ಅಲ್ಲದೇ ಈ ಬಜೆಟ್ ಹೊತ್ತ ಬ್ರಿಫ್ಕೇಸ್ ಹಿಡಿಯುವ ಸಂಪ್ರಾದಾಯ ಕೂಡ ಕಾಣಸಿಗದು.
ಸಾಮಾಜಿಕ ಅಂತರ
ಕೋವಿಡ್ ಮಾರ್ಗಸೂಚಿಗಳು ಇನ್ನು ಜಾರಿಯಲ್ಲಿರುವ ಹಿನ್ನಲೆ ಸಾಮಾಜಿಕ ಅಂತರದಂತಹ ಸುರಕ್ಷತಾ ನಿಯಮವನ್ನು ಕಾಪಾಡಲಾಗುವುದು. ಮೊದಲ ಬಾರಿಗೆ ಸಂಸತ್ ಸದಸ್ಯರು ಮೂರು ವಿಭಿನ್ನ ಸ್ಥಳಗಳಲ್ಲಿ ಕೂರಲಿದ್ದಾರೆ. ಜಂಟಿ ಅಧಿವೇಶನ ಸಂದರ್ಭದಲ್ಲಿ ಒಟ್ಟಾಗಿ ಕುಳಿತುಕೊಳ್ಳುತ್ತಿದ್ದ ಸದಸ್ಯರು ಈಗ ಲೋಕಸಭಾ , ರಾಜ್ಯಸಭಾ ಕೊಠಡಿಗಳಲ್ಲಿ ಕೂರಲಿದ್ದಾರೆ, ಸೆಂಟ್ರಲ್ ಹಾಲ್ನಿಂದ ರಾಷ್ಟ್ರಪತಿಗಳು ಭಾಷಣ ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ