ದೆಹಲಿ (ಜೂನ್.02); ರಾಷ್ಟ್ರ ರಾಜಧಾನಿಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ನಟ-ರಾಜಕಾರಣಿ ಮನೋಜ್ ತಿವಾರಿ ಅವರನ್ನು ದಿಢೀರ್ ವಜಾ ಮಾಡಿರುವ ಬಿಜೆಪಿ ಹೈಕಮಾಂಡ್, ಆ ಸ್ಥಾನಕ್ಕೆ ಇಂದು ಆದೇಶ್ ಕುಮಾರ್ ಗುಪ್ತಾ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಿದೆ.
ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಇಂದು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಪಕ್ಷದ ಈ ನಿರ್ಧಾರವನ್ನು ತಿಳಿಸಿದ್ದಾರೆ. ಅಲ್ಲದೆ, ಗುಪ್ತಾ ಅವರ ನೇಮಕಾತಿ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಉತ್ತರ ದೆಹಲಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಆಗಿರುವ ಆದೇಶ್ ಕುಮಾರ್ ಗುಪ್ತಾ, ತಿವಾರಿ ಅವರ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಲಿದ್ದಾರೆ. ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ರಾಷ್ಟ್ರಾದ್ಯಂತ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಆದೇಶ್ ಕುಮಾರ್ ಗುಪ್ತಾ, “ನನ್ನಂತಹ ಪಕ್ಷದ ವಿನಮ್ರ ಕಾರ್ಯಕರ್ತರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಇತರ ಹಿರಿಯ ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ" ಎಂದು ತಿಳಿಸಿದ್ದಾರೆ.
ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಹೀನಾಯ ಸೋಲನುಭವಿಸಿದ ನಂತರ ರಾಜ್ಯಾಧ್ಯಕ್ಷರಾಗಿದ್ದ ಮನೋಜ್ ತಿವಾರಿ ತಮ್ಮ ಸ್ಥಾನವನ್ನು ತೊರೆಯಲು ನಿರ್ಧರಿಸಿದ್ದರು. ಆದರೆ, ಅದಕ್ಕೆ ಇಂದು ಮುಹೂರ್ತ ಕೂಡಿ ಬಂದಿದೆ. ಈ ನಡುವೆ ಕೊರೋನಾ ಭೀತಿಯ ಹೊರತಾಗಿಯೂ ದೆಹಲಿಯಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಿ ನೆಲೆಯನ್ನು ವಿಸ್ತರಿಸುವ ದೊಡ್ಡ ಸವಾಲು ನೂತನ ಅಧ್ಯಕ್ಷರ ಮೇಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಮಹತ್ವದ ನಿರ್ಧಾರ; ಗೃಹ ಸಾಲ-ಉಳಿತಾಯ ಖಾತೆ ಮೇಲಿನ ಬಡ್ಡಿ ದರ ಇಳಿಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ