HOME » NEWS » National-international » MANN KI BAAT FARMERS PLAYING HUGE ROLE IN BUILDING AATMANIRBHAR BHARAT SAYS PM NARENDRA MODI SNVS

Mann Ki Baat - ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ರೈತರ ಪಾತ್ರ ಬಹಳ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ

ಕೋವಿಡ್ ಬಿಕ್ಕಟ್ಟಿನಲ್ಲೂ ಕೃಷಿ ಕ್ಷೇತ್ರ ತನ್ನ ಸಾಮರ್ಥ್ಯ ತೋರಿದೆ. ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ರೈತರ ಕೊಡುಗೆ ದೊಡ್ಡದಿದೆ. ಕೇಂದ್ರದ ಕೃಷಿ ನೀತಿಯಿಂದ ರೈತರಿಗೆ ಲಾಭವಾಗುತ್ತದೆ ಎಂಬುದು ಈಗಾಗಲೇ ಕೆಲ ರಾಜ್ಯಗಳಲ್ಲಿ ಸಾಬೀತಾಗಿದೆ ಎಂದು ಪ್ರಧಾನಿ ಹೇಳಿದ್ಧಾರೆ.

news18
Updated:September 27, 2020, 1:35 PM IST
Mann Ki Baat - ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ರೈತರ ಪಾತ್ರ ಬಹಳ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
  • News18
  • Last Updated: September 27, 2020, 1:35 PM IST
  • Share this:
ನವದೆಹಲಿ(ಸೆ. 27): ದೇಶದ ಕೃಷಿ ಕ್ಷೇತ್ರವನ್ನು ಬಲಪಡಿಸುತ್ತಿರುವ ರೈತರು ಸ್ವಾವಲಂಬಿ ದೇಶದ ನಿರ್ಮಾಣದಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಕೇಂದ್ರದ ಕೃಷಿ ನೀತಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಲ್ಲೇ ಇಂದು ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿಗಳು, ಕೇಂದ್ರದ ಕೃಷಿ ನೀತಿಯಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ತಿಳಿಸಿದರು. ಇತ್ತೀಚಿನ ವರ್ಷಗಳ ಹಿಂದೆ ಕೆಲ ರಾಜ್ಯಗಳಲ್ಲಿ ಎಪಿಎಂಸಿ ಕಾಯ್ದೆಯ ವ್ಯಾಪ್ತಿಯಿಂದ ಹಣ್ಣು ಮತ್ತು ತರಕಾರಿಗಳನ್ನ ಹೊರತುಪಡಿಸಿದಾಗ ರೈತರಿಗೆ ಬಹಳ ಲಾಭವಾಗಿದ್ದ ಸಂಗತಿಯನ್ನು ಉಲ್ಲೇಖಿಸಿ ತಮ್ಮ ನೂತನ ಕಾಯ್ದೆಯನ್ನು ಪ್ರಧಾನಿಗಳು ಸಮರ್ಥಿಸಿಕೊಂಡರು.

“ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ನಮ್ಮ ಕೃಷಿ ವಲಯ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ಸ್ವಾವಂಬನೆಯ ದೇಶದ ನಿರ್ಮಾಣದಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ” ಎಂದವರು ಹೇಳಿದರು.

ಇನ್ನು, ದೇಶದ ಹಲವು ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಮೂರ್ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ. ಮೊನ್ನೆ ನಡೆದ ಭಾರತ್ ಬಂದ್ ಕೆಲ ರಾಜ್ಯಗಳಲ್ಲಿ ಪಾಕ್ಷಿಕವಾಗಿ ಯಶಸ್ವಿಯಾಯಿತು. ನಾಳೆ ಸೋಮವಾರ ಕರ್ನಾಟಕ ಬಂದ್ ಕೂಡ ಇದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ. ರೈತರ ಬೆಳೆಗೆ ನೀಡಲಾಗುವ ಬೆಂಬಲ ಬೆಲೆ ಕ್ರಮವನ್ನು ಕೇಂದ್ರ ಕೈಬಿಡುತ್ತದೆ. ಕಾರ್ಪೊರೇಟ್ ಕಂಪನಿಗಳ ಮೇಲೆ ರೈತರು ಅವಲಂಬಿತರಾಗಬೇಕಾಗುತ್ತದೆ ಎಂಬುದು ರೈತ ಸಂಘಟನೆಗಳ ಅಭಿಪ್ರಾಯ. ಇದೇ ವಿಚಾರವಾಗಿ ಎನ್​ಡಿಎ ಸರ್ಕಾರದ ಅಂಗ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳ ಮೈತ್ರಿಕೂಟದಿಂದ ಹೊರಬಂದು ರೈತರ ಪ್ರತಿಭಟನೆಗೆ ಕೈಜೋಡಿಸಿದೆ.

ಇದನ್ನೂ ಓದಿ: Jaswant Singh: ಮಾಜಿ ಕೇಂದ್ರ ಸಚಿವ ಜಸ್ವಂತ್​​ ಸಿಂಗ್​ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಈ ನಡುವೆ ಪ್ರಧಾನಿ ಮೋದಿ ಅವರು ರೈತ ಸಂಘಟನೆಗಳ ಕೆಲ ಆತಂಕಗಳನ್ನ ದೂರ ಮಾಡುವ ಪ್ರಯತ್ನ ಮಾಡಿದರು. ರೈತರ ಬೆಳೆಗಳನ್ನ ಸರ್ಕಾರ ಖರೀದಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಎಂಎಸ್​ಪಿಯನ್ನ ಹಿಂತೆಗೆದುಕೊಳ್ಳುವುದಿಲ್ಲ. ರಾಜಕೀಯ ಸ್ವಾರ್ಥ ಸಾಧನೆಗೋಸ್ಕರ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಸುಳ್ಳುಗಳನ್ನ ಹರಡುತ್ತಿದ್ದಾರೆ ಎಂದು ಮೋದಿ ಟೀಕಿಸಿದರು.

ಕಾಂಗ್ರೆಸ್ ಪಕ್ಷ ಆರಂಭದಲ್ಲೇ ಮಹಾತ್ಮ ಗಾಂಧಿ ಅವರ ಆರ್ಥಿಕ ಚಿಂತನೆಗಳನ್ನ ಅಳವಡಿಸಿಕೊಂಡಿದ್ದರೆ ಬಹಳ ಹಿಂದೆಯೇ ಸ್ವಾವಲಂಬಿ ದೇಶ ನಿರ್ಮಾಣವಾಗಿರುತ್ತಿತ್ತು. ಈಗ ಆತ್ಮನಿರ್ಭರ್ ಭಾರತ್ ಎಂಬ ಆಂದೋಲನ ಆರಂಭಿಸುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ದೇಶದ ಹಲವು ರಾಜ್ಯಗಳಲ್ಲಿ ರೈತ ಗುಂಪುಗಳ ಯಶೋಗಾಥೆಗಳನ್ನ ಉದಾಹರಿಸಿದ ಪ್ರಧಾನಿ ಮೋದಿ, ಕೃಷಿಯಲ್ಲಿ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಕೃಷಿ ವಲಯಕ್ಕೆ ಅತೀವ ಲಾಭವಾಗುತ್ತದೆ ಎಂದರು.ಇನ್ನು ಪ್ರಧಾನಿ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ರೈತರ ವಿಚಾರದ ನಂತರ ಕಥೆಗಾರಿಕೆ ಬಗ್ಗೆ ಮಾತನಾಡಿದರು. “ನಮ್ಮ ದೇಶದಲ್ಲಿ ಬಹಳ ಪುರಾತನ ಕಾಲದಿಂದಲೂ ಕಥೆಗಾರಿಕೆ ಇದೆ… ವಿಜ್ಞಾನ ಸಂಬಂಧಿತ ಕಥೆಗಳು ಈಗ ಜನಪ್ರಿಯವಾಗುತ್ತಿವೆ” ಎಂದು ಹೇಳಿದ ಮೋದಿ, ಬೆಂಗಳೂರಿನ ಸ್ಟೋರಿಟೆಲಿಂಗ್ ಸೊಸೈಟಿಯ ಸದಸ್ಯರ ಜೊತೆ ಸಂವಾದವನ್ನೂ ಮಾಡಿದರು.
Published by: Vijayasarthy SN
First published: September 27, 2020, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories