ನವ ದೆಹಲಿ (ಜನವರಿ 19); ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ದೇಶವ್ಯಾಪಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಭಾರತದ ಉದಾರವಾದಿ ಪ್ರಜಾಪ್ರಭುತ್ವದ ಸಂಸ್ಥೆಗಳು ಬಲಗೊಳ್ಳಬೇಕು ಮತ್ತು ಸಂವಿಧಾನದ ರಕ್ಷಣೆಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಅವರ 'ಹ್ಯೂಮನ್ ಡಿಗ್ನಿಟಿ - ಎ ಪರ್ಪಸ್ ಇನ್ ಪರ್ಪೆಚ್ಯುಟಿ' ಎಂಬ ಪುಸ್ತಕವನ್ನು ಇಲ್ಲಿ ಬಿಡುಗಡೆ ಮಾಡಿ ಮಾತನಾಡಿರುವ ಮನಮೋಹನ್ ಸಿಂಗ್,
“ನಮ್ಮ ಉದಾರ ಮತ್ತು ಸ್ವಾತಂತ್ರ್ಯವಾದಿ ಪ್ರಜಾಪ್ರಭುತ್ವದ ಸಂಸ್ಥೆಗಳ ಮೂಲಭೂತ ಸ್ವಾತಂತ್ರ್ಯಗಳಿಗೆ ಬೆದರಿಕೆ ಹಾಕಿ ಹಲವಾರು ಸಂದರ್ಭಗಳಲ್ಲಿ ಪರೀಕ್ಷೆಗೂ ಒಳಪಡಿಸಲಾಗಿದೆ. ಇಷ್ಟು ವರ್ಷಗಳ ಕಾಲ ಪೋಷಿಸಲ್ಪಟ್ಟ ಈ ಸಂಸ್ಥೆಗಳು ಬಲಗೊಳ್ಳಬೇಕು ಮತ್ತು ಸಂವಿಧಾನದ ರಕ್ಷಣೆಯಲ್ಲಿ ತಮ್ಮನ್ನು ತಾವು ಪ್ರತಿಪಾದಿಸಿಕೊಳ್ಳಬೇಕಿದೆ” ಎಂದು ಒತ್ತಾಯಿಸಿದ್ದಾರೆ.
“ಕಾನೂನಿನ ಅಡಿಯಲ್ಲಿ ಸಮಾನ ನಾಗರಿಕರಾಗಿ ಬದುಕಲು ಸಾಧ್ಯವಾದರೆ ಮಾತ್ರ ಸ್ವಾತಂತ್ರ್ಯದ ಕಲ್ಪನೆಯು ನಮ್ಮ ಜನರ ಜೀವನದಲ್ಲಿ ಆಕಾರ ಮತ್ತು ರೂಪವನ್ನು ಪಡೆದುಕೊಳ್ಳುತ್ತದೆ” ಎಂದು ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ : ಮಂಗಳೂರು ಗೋಲಿಬಾರ್; ಕಮೀಶನರ್ ಡಾ.ಹರ್ಷಾ ರಾಜೀನಾಮೆ ನೀಡಿ ಹುದ್ದೆಯ ಘನತೆ ಉಳಿಸಲಿ ಎಂದು ಬಹಿರಂಗ ಪತ್ರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ