Manipur Elections: ಭಾರತ ಹಲವು ರಾಜ್ಯಗಳ ಒಕ್ಕೂಟ; ಬಿಜೆಪಿಗೆ ರಾಹುಲ್ ಗಾಂಧಿ ತಿರುಗೇಟು

ಆರ್ ಎಸ್ಎಸ್ ಮತ್ತು ಬಿಜೆಪಿ ನಾಯಕರು ಮಣಿಪುರಕ್ಕೆ ಬಂದಾಗ ಗೌರವದಿಂದ ಬರುವುದಿಲ್ಲ, ಶ್ರೇಷ್ಠತೆಯ ಭಾವನೆಯೊಂದಿಗೆ ಬರುತ್ತಾರೆ. ನಾನು ಇಲ್ಲಿಗೆ ಬಂದಾಗ, ಶ್ರೇಷ್ಠತೆಯ ಭಾವನೆಯಿಂದ ಬರುವುದಿಲ್ಲ, ನಮ್ರತೆಯಿಂದ ಬರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ, ಫೆ. 21: ಆರ್ ಎಸ್ಎಸ್ (RSS) ಮತ್ತು ಬಿಜೆಪಿ (BJP) ಅಜೆಂಡಾಗಳನ್ನು ಬಹಳ ಸ್ಪಷ್ಟತೆಯಿಂದ ಖಂಡಿಸುವ ಮತ್ತು ದೇಶ, ಧರ್ಮ ಹಾಗೂ ಸೈನ್ಯದ ಹೆಸರಿನಲ್ಲಿ ಆರ್ ಎಸ್ಎಸ್ ಹೇಗೆ ಕೋಮು ರಾಜಕಾರಣ (Communal Politics) ಮಾಡುತ್ತದೆ ಎಂದು ಪದೇ ಪದೇ ಗಟ್ಟಿ ದನಿಯಲ್ಲಿ ಮಾತನಾಡುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (AICC Former President Rahul Gandhi) ಅವರು ಮಣಿಪುರದಲ್ಲಿ ಮತ್ತೊಮ್ಮೆ ಆರ್ ಎಸ್ಎಸ್ ಮತ್ತು ಬಿಜೆಪಿ ನಡೆಗಳನ್ನು ಖಂಡಿಸಿದ್ದಾರೆ. ಭಾರತ ಹಲವು ರಾಜ್ಯಗಳ ಒಕ್ಕೂಟ ಆದರೆ ಆರ್ ಎಸ್ಎಸ್ ಮತ್ತು ಬಿಜೆಪಿ ಕಲ್ಪನೆಯು ಒಂದು ಸಿದ್ಧಾಂತ, ಒಂದು ಭಾಷೆ, ನಾವು ಎಲ್ಲಕ್ಕಿಂತ ಶ್ರೇಷ್ಠ ಎಂಬುದಾಗಿದೆ ಎಂದು ಹೇಳಿದರು.

ಆರ್ ಎಸ್ಎಸ್ ಮತ್ತು ಬಿಜೆಪಿಗೆ ಶ್ರೇಷ್ಟತೆಯ ವ್ಯಸನ
ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾನು ನಮ್ಮ ದೇಶದ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಅಲ್ಲಿ ನಾನು ನಮ್ಮ ದೇಶವನ್ನು ರಾಜ್ಯಗಳ ಒಕ್ಕೂಟ ಎಂದು ಬಣ್ಣಿಸಿದೆ. ಇದು ಸಂವಿಧಾನದಲ್ಲಿ ನಮ್ಮ ಭಾರತಕ್ಕೆ ಇರುವ ವ್ಯಾಖ್ಯಾನವಾಗಿದೆ. ಸಂವಿಧಾನದಲ್ಲಿ ನಾವು ನಮ್ಮನ್ನು ರಾಜ್ಯಗಳ ಒಕ್ಕೂಟ ಎಂದು ವ್ಯಾಖ್ಯಾನಿಸಲು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ ಆರ್ ಎಸ್ಎಸ್ ಮತ್ತು ಬಿಜೆಪಿ ದೃಷ್ಟಿಕೋನವೂ ಭಿನ್ನವಾದುದು. ಆರ್ ಎಸ್ಎಸ್ ಮತ್ತು ಬಿಜೆಪಿ ಕಲ್ಪನೆಯು ಒಂದು ಸಿದ್ಧಾಂತ, ಒಂದು ಭಾಷೆ, ನಾವು ಎಲ್ಲಕ್ಕಿಂತ ಶ್ರೇಷ್ಠ ಎಂಬುದಾಗಿದೆ ಎಂದು ಹೇಳಿದರು.

ಇದನ್ನು ಓದಿ: ’ಮೋದಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲಿ’; ಪ್ರಿಯಾಂಕಾ ಗಾಂಧಿ ತಾಕೀತು

ಆರ್ ಎಸ್ಎಸ್ ಮತ್ತು ಬಿಜೆಪಿ ನಾಯಕರಿಗೆ ಗರ್ವ
ಆರ್ ಎಸ್ಎಸ್ ಮತ್ತು ಬಿಜೆಪಿ ನಾಯಕರು ಮಣಿಪುರಕ್ಕೆ ಬಂದಾಗ ಗೌರವದಿಂದ ಬರುವುದಿಲ್ಲ, ಶ್ರೇಷ್ಠತೆಯ ಭಾವನೆಯೊಂದಿಗೆ ಬರುತ್ತಾರೆ. ನಾನು ಇಲ್ಲಿಗೆ ಬಂದಾಗ, ಶ್ರೇಷ್ಠತೆಯ ಭಾವನೆಯಿಂದ ಬರುವುದಿಲ್ಲ, ನಮ್ರತೆಯಿಂದ ಬರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ಮಣಿಪುರ ಕಾಂಗ್ರೆಸ್ ನಾಯಕ ಒಕ್ರಾಮ್ ಇಬೋಬಿ ಸಿಂಗ್, 'ಬಿಜೆಪಿಯ 'ಗೋ ಟು ಹಿಲ್ಸ್' ಕಾರ್ಯಕ್ರಮವು ಆಡಳಿತ ವ್ಯವಸ್ಥೆಗಳನ್ನು ಹಾಳು ಮಾಡುತ್ತಿದೆ. ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಜನ ಮತ್ತು ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಹೇಳಿದರು.

ಇದನ್ನು ಓದಿ: ಮೇವು ಹಗರಣ ಐದನೇ ಪ್ರಕರಣ; ಲಾಲೂ ಪ್ರಸಾದ್ ಯಾದವ್​​ಗೆ ​ ಐದು ವರ್ಷ ಶಿಕ್ಷೆ ಐದು ವರ್ಷ ಜೈಲು ಶಿಕ್ಷೆ ಹಾಗೂ 60 ಲಕ್ಷ ದಂಡ

ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
ಇನ್ನೊಂದೆಡೆ ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ 'ಪ್ರತಿಪಕ್ಷಗಳು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿವೆ' ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು 'ಮೋದಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲಿ. ಉತ್ತರ ಪ್ರದೇಶದಲ್ಲಿ ಇರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡಲಿ. ಪ್ರತಿಪಕ್ಷಗಳು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿವೆ ಎಂಬುದು ನಿಜವಲ್ಲ ಎನ್ನುವುದು ಅವರಿಗೂ (ಮೋದಿ) ಗೊತ್ತು. ಆದರೆ ಚುನಾವಣೆ ಕಾರಣಕ್ಕೆ ಮತ್ತು ಸೋಲುವ ಭಯದಿಂದ ಹೀಗೆಲ್ಲಾ ಹೇಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅನೇಕ ಸರ್ಕಾರಿ ಹುದ್ದೆಗಳು ಖಾಲಿ ಇರುವಾಗ ಅವರು ಸಂಬಂಧಿತ ವಿಷಯಗಳ ಬಗ್ಗೆ ಮಾತ್ರ ಮಾತನಾಡಬೇಕು ಎಂದು ತಿರುಗೇಟು ನೀಡಿದ್ದಾರೆ.

 ಗೆಲುವು ನಮ್ಮದೇ ಎಂದ ಅಖಿಲೇಶ್ ಯಾದವ್
ಇನ್ನೊಂದೆಡೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ಹಿಂದೆ ಮೊದಲೆರಡು ಹಂತಗಳಲ್ಲಿ ಮತದಾನ ನಡೆದಿದ್ದ ಕ್ಷೇತ್ರಗಳ ಪೈಕಿ ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷ ಶತಕ ಬಾರಿಸಿದೆ ಎಂದು ಹೇಳಿದ್ದರು‌. ಈಗ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ 3ನೇ ಹಂತದ ಮತದಾನದಲ್ಲೂ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾನವಾದ ಹತ್ರಾಸ್, ಇಟಾವಾ, ಮೈನಪುರಿ, ಕನೌಜ್, ಕಾನ್ಪುರ್, ಫಿರೋಜಾಬಾದ್, ಝಾನ್ಸಿ, ಲಲಿತ್ ಪುರ್, ಕಾಸಾಗಂಜ್ ಮತ್ತಿತರ ಜಿಲ್ಲೆಗಳು ಸಮಾಜವಾದಿ ಪಕ್ಷದ ಬಾಹುಳ್ಯವುಳ್ಳವು ಎಂಬ ಕಾರಣಕ್ಕೆ ಅಖಿಲೇಶ್ ಯಾದವ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published by:Seema R
First published: