ಆಂಧ್ರಪ್ರದೇಶ: ರಕ್ಕಸ ಮಾಂಡೌಸ್ ಚಂಡಮಾರುತದ (Mandous Cyclone) ಆರ್ಭಟಕ್ಕೆ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು (Tamilnadu), ಪಾಂಡಿಚೇರಿ ರಾಜ್ಯಗಳು (States) ನಲುಗಿವೆ. ಇದರ ಎಫೆಕ್ಟ್ (Effect) ಕರ್ನಾಟಕಕ್ಕೂ ತಟ್ಟಿದ್ದು, ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣ ಹಾಗೂ ತಂಪು ಗಾಳಿ ಬೀಸುತ್ತಿದೆ. ಮಾಂಡೌಸ್ ಚಂಡಮಾರುತದ ಹೊಡೆತಕ್ಕೆ ಜನರು ಅಕ್ಷರಶಃ ನಲುಗಿದ್ದಾರೆ. ಮಾಂಡೌಸ್ ಚಂಡಮಾರುತದ ಹೊಡೆತಕ್ಕೆ ಆಂಧ್ರಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ (One Death). ಆಂಧ್ರಪ್ರದೇಶದ ದಕ್ಷಿಣ ಜಿಲ್ಲೆಗಳಲ್ಲಿನ 1,000 ಕ್ಕೂ ಹೆಚ್ಚು ಸಂತ್ರಸ್ತರನ್ನು ಪರಿಹಾರ ಶಿಬಿರದಲ್ಲಿ ಇರಿಸಲಾಗಿದೆ. ಇನ್ನು ಮಾಂಡೌಸ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡಿನಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಮಾಂಡೌಸ್ ಚಂಡಮಾರುತದ ಹೊಡೆತಕ್ಕೆ ಆಂಧ್ರಪ್ರದೇಶದಲ್ಲಿ ವ್ಯಕ್ತಿ ಸಾವು
ಮಾಂಡೌಸ್ ಚಂಡಮಾರುತದ ಹೊಡೆತಕ್ಕೆ ಆಂದ್ರಪ್ರದೇಶದಲ್ಲಿ ಮಳೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಅತ್ತ ತಮಿಳುನಾಡಿನಲ್ಲಿ ಗಾಳಿಯ ಹೊಡೆತಕ್ಕೆ ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಜಾನುವಾರುಗಳು ಮೃತಪಟ್ಟಿವೆ. ಜನರು ಸೂರು ಕಳೆದುಕೊಂಡಿದ್ದಾರೆ.
ಘಟನೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾತನಾಡಿ, ಇದುವರೆಗೆ ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ ಹೊಡೆತಕ್ಕೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 98 ಜಾನುವಾರುಗಳು ಸತ್ತಿವೆ. 181 ಮನೆಗಳಿಗೆ ಹಾನಿಯಾಗಿದೆ. ಇನ್ನು ಹೆಚ್ಚಿನ ಹಾಗೂ ಚಂಡಮಾರುತದಿಂದ ಎಲ್ಲೆಲ್ಲಿ, ಎಷ್ಟು ಹಾನಿಯಾಗಿದೆ ಎಂಬ ವಿವರ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತರಿಗೆ ಪ್ರವಾಹ ಪರಿಹಾರ ಸಾಮಗ್ರಿ ಮತ್ತು ಆಹಾರ ವಿತರಿಸಿದ ಸಿಎಂ ಸ್ಟಾಲಿನ್
ನಾನು ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದ್ದೇನೆ. ಪಾಲಿಕೆ ನೌಕರರು ಉತ್ತಮ ಕೆಲಸ ಮಾಡಿದ್ದಾರೆ. ಚೆನ್ನೈನಲ್ಲಿ 400 ಮರಗಳು ನೆಲಕಚ್ಚಿವೆ ಎಂದು ಸಿಎಂ ಸ್ಟಾಲಿನ್ ಮಾಹಿತಿ ನೀಡಿದ್ರು. ಮುಖ್ಯಮಂತ್ರಿ ಸ್ಟಾಲಿನ್, ಚೆನ್ನೈನ ಕಾಸಿಮೇಡು ಪ್ರದೇಶದಲ್ಲಿ ಮಾಂಡೌಸ್ ಚಂಡಮಾರುತದಿಂದ ಸಂತ್ರಸ್ತರಾದ ಜನರಿಗೆ ಪ್ರವಾಹ ಪರಿಹಾರ ಸಾಮಗ್ರಿ ಮತ್ತು ಆಹಾರ ವಿತರಿಸಿದರು.
ಚಿಕ್ಕ ನದಿಗಳಾದ ಕಂದಲೇರು, ಮನೇರು ಮತ್ತು ಸ್ವರ್ಣಮುಖಿ ತುಂಬಿದ್ದು, ಪ್ರವಾಹದ ಸಾಧ್ಯತೆಯಿದೆ. ನೆಲ್ಲೂರು ಮತ್ತು ತಿರುಪತಿ ಜಿಲ್ಲೆಗಳಿಗೂ ಅಲರ್ಟ್ ಘೋಷಣೆ ಮಾಡಲಾಗಿದೆ.
IMD ಪ್ರಕಾರ, ಉತ್ತರ ತಮಿಳುನಾಡಿನ ಒಳಭಾಗದಲ್ಲಿ ಮಳೆಯಾಗಿದೆ. ಕೊಯಮತ್ತೂರು, ಧರ್ಮಪುರಿ, ದಿಂಡಿಗಲ್, ಈರೋಡ್, ಕಲ್ಲಕುರಿಚಿ, ಕರೂರ್ನಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಲಾಗಿದೆ. ಕೃಷ್ಣಗಿರಿ, ನಾಮಕ್ಕಲ್, ಥೇಣಿ, ತೆಂಕಶಿ, ತಿರುಪತ್ತೂರ್, ತಿರುವಳ್ಳೂರು, ತಿರುವಣ್ಣಾಮಲೈ ಮತ್ತು ವೆಲ್ಲೂರು, ಉತ್ತರ ತಮಿಳುನಾಡು ಕರಾವಳಿಯಲ್ಲಿ ಶುಕ್ರವಾರ ರಾತ್ರಿ ಭೂಮಿ ಕುಸಿತ ಉಂಟಾಗಿದೆ.
ಭಾರೀ ಗಾಳಿ ಮಳೆಗೆ ಆಸ್ತಿ ಪಾಸ್ತಿ ಹಾನಿ
ಭಾರೀ ಮಳೆ ಮತ್ತು ಬಲವಾದ ಗಾಳಿಗೆ ಹಲವು ಜಿಲ್ಲೆಗಳಲ್ಲಿ ಜನರು ಆಸ್ತಿ ಪಾಸ್ತಿ ಹಾನಿಯಾಗಿದೆ. ವಿದ್ಯುತ್ ಕಡಿತವಾಗಿದೆ. ವಿಪತ್ತು ಪರಿಹಾರ ಸಿಬ್ಬಂದಿ ಸೇರಿದಂತೆ ಸುಮಾರು 25,000 ಜನರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. 201 ಪರಿಹಾರ ಶಿಬಿರ ತೆರೆಯಲಾಗಿದ್ದು, ಸುಮಾರು 9,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿಸೆಂಬರ್ 12 ರಂದು ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಹಾಗೂ ಸಾಧಾರಣ ಮಳೆಯಾಗಲಿದೆ. ಮಳೆಯಿಂದಾಗಿ ಒಟ್ಟು 4,647 ಹೆಕ್ಟೇರ್ ಕೃಷಿ ಹಾಗೂ 532 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಇದನ್ನೂ ಓದಿ: ಮರಣರೂಪಿ 'ಮಾಂಡೌಸ್' ಅಬ್ಬರಕ್ಕೆ ನಾಲ್ವರು ಬಲಿ, ತಿಮ್ಮಪ್ಪನಿಗೂ ತಟ್ಟಿದ ಚಂಡಮಾರುತದ ಎಫೆಕ್ಟ್
ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯ ಕೆಲವು ಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ತಮಿಳುನಾಡಿನ ಹತ್ತು ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ನಿಯೋಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ