ವಾರ್ಧಾ: ತೆರಿಗೆ ಕಟ್ಟೋದು ಅಂದ್ರೆ ಜನರಿಗೆ ಅದೇನೋ ಅಲರ್ಜಿ. ಅನೇಕರು ಮನೆಗೆ ನೋಟಿಸ್ ಬರೋತನಕ ತೆರಿಗೆ (Tax Payers) ಕಟ್ಟೋದಿಲ್ಲ. ಸರ್ಕಾರ, ಪಂಚಾಯತ್‌ಗಳಂತೂ ತೆರಿಗೆ ಸಂಗ್ರಹಕ್ಕೆ ಇನ್ನಿಲ್ಲದ ಪ್ರಯತ್ನ ಮಾಡಿ ಸೋತು ಹೋಗುತ್ತವೆ. ಆದರೆ ಇಲ್ಲೊಂದು ಕಡೆ ಸ್ಥಳೀಯ ಗ್ರಾಮ ಪಂಚಾಯತ್ (Grama Panchayat) ಜನರಿಂದ ತೆರಿಗೆ ಸಂಗ್ರಹ (Tax Collection) ಮಾಡಲು ಹೊಸದೊಂದು ಐಡಿಯಾ ಹುಡುಕಿಕೊಂಡಿದೆ.
ಹೌದು.. ಗ್ರಾಮಸ್ಥರಿಂದ ಕಂದಾಯ ವಸೂಲಿ ಮಾಡಲು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗಘಟ್ಟ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಾನಸಾವಳಿ ಗ್ರಾಮ ಪಂಚಾಯಿತಿ ಹೊಸ ಐಡಿಯಾ ಮಾಡಿದೆ. ಗ್ರಾಮ ಪಂಚಾಯಿತಿಯು ಸ್ವಂತ ಹಿಟ್ಟಿನ ಗಿರಣಿಯನ್ನು ಹೊಂದಿದ್ದು, ಗ್ರಾಮದ ಜನರು ಇಲ್ಲಿ ಉಚಿತವಾಗಿ ಹಿಟ್ಟು ತಯಾರಿಸಿ ಮನೆಗೆ ಕೊಂಡೊಯ್ಯುತ್ತಿದ್ದರು. ಆದರೆ ಇದೀಗ ಪಂಚಾಯತ್ ಹಿಟ್ಟಿನ ಗಿರಣಿಯನ್ನು ಉಚಿತವಾಗಿ ಬಳಕೆ ಮಾಡಲು ಷರತ್ತು ವಿಧಿಸಿದ್ದು, 100ರಷ್ಟು ತೆರಿಗೆ ಪಾವತಿಸಿದ ಗ್ರಾಮಸ್ಥರಿಗೆ ಮಾತ್ರ ಈ ಉಚಿತ ಸೇವೆ ಲಭ್ಯವಾಗಲಿದೆ.
ಇದನ್ನೂ ಓದಿ: Cheetah Cub Dies: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮರಿ ಚೀತಾ ನಿಧನ! 2 ತಿಂಗಳಲ್ಲಿ ನಾಲ್ಕನೇ ಸಾವು
'ತೆರಿಗೆ ಪಾವತಿಸಿ ಉಚಿತ ಹಿಟ್ಟು ಪಡೆಯಿರಿ'
ಸುಮಾರು 1200 ಜನಸಂಖ್ಸಯೆ ಹೊಂದಿರುವ ಮಾನಸಾವಳಿ ಗ್ರಾಮದಲ್ಲಿ ಕಂದಾಯ ವಸೂಲಿಗೆ ಅದೆಷ್ಟೇ ಮನವಿ ಮಾಡಿದರೂ ಗ್ರಾಮಸ್ಥರು ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿಯು ತೆರಿಗೆದಾರರಿಂದ ತೆರಿಗೆ ಆದಾಯವನ್ನು ಸಂಗ್ರಹಿಸಲು ವಿಶಿಷ್ಟ ಪ್ಲಾನ್‌ಅನ್ನು ರೂಪಿಸಿದೆ. ಗ್ರಾಮ ಪಂಚಾಯತ್‌ನಲ್ಲಿ ‘ತೆರಿಗೆ ಪಾವತಿಸಿ ಮತ್ತು ನಿಮ್ಮ ಹಿಟ್ಟನ್ನು ಒಂದು ವರ್ಷಕ್ಕೆ ಉಚಿತವಾಗಿ ಪಡೆಯಿರಿ’ ಎಂದು ಬೋರ್ಡ್ ಹಾಕಲಾಗಿದ್ದು, ಆ ಬಳಿಕ ಗ್ರಾಮಸ್ಥರು ತೆರಿಗೆಯನ್ನು ಅನಿವಾರ್ಯವಾಗಿ ಕಟ್ಟುತ್ತಿದ್ದಾರೆ. ಗ್ರಾಮ ಪಂಚಾಯತ್‌ನ ಈ ಐಡಿಯಾ ಚೆನ್ನಾಗಿ ವರ್ಕೌಟ್ ಆಗಿದ್ದು, ಉತ್ತಮ ರೀತಿಯಲ್ಲಿ ಆದಾಯ ಸಂಗ್ರಹವೂ ಆಗುತ್ತಿದೆ ಎಂದು ತಿಳಿದು ಬಂದಿದೆ.
ಮಾನಸಾವಳಿ ಗ್ರಾಮ ಪಂಚಾಯತ್ 1 ಏಪ್ರಿಲ್ 2023 ರಂದು ಗ್ರಾಮದಲ್ಲಿ ಹಿಟ್ಟಿನ ಗಿರಣಿಯನ್ನು ಪ್ರಾರಂಭಿಸಿದ್ದು, ಉಚಿತ ಬಳಕೆ ಎಂದಿದ್ದರಿಂದ ಗ್ರಾಮದ ಜನರು ಹಿಟ್ಟಿನ ಗಿರಣಿಗೆ ಸರತಿ ಸಾಲಿನಲ್ಲಿ ಬಂದು ನಿಲ್ಲುತ್ತಿದ್ದಾರೆ. ಈಗ ಗ್ರಾಮ ಪಂಚಾಯತ್ ವಿವಿಧ ಧಾನ್ಯಗಳ ಹಿಟ್ಟನ್ನು ಇಲ್ಲಿ ತಯಾರಿಸಲು ಅನುಮತಿ ನೀಡಿದ್ದು, ಆದರೆ ತೆರಿಗೆ ಪಾವತಿಯ ರಸೀದಿಯನ್ನು ತೋರಿಸುವ ಮೂಲಕ ಹಿಟ್ಟಿನ ಗಿರಣಿ ಪಡೆಯಬೇಕು. ಹೀಗಾಗಿ ಅನಿವಾರ್ಯವಾಗಿ ಗ್ರಾಮದ ಜನರು ತೆರಿಗೆ ಸಂಗ್ರಹ ಮಾಡುತ್ತಿದ್ದಾರೆ.
ಇದನ್ನೂ ಓದಿ: Crime News: ಬೆಚ್ಚಿ ಬೀಳಿಸುತ್ತೆ ಈ ಭಯಾನಕ ಮರ್ಡರ್! ಒಂದೇ ಕುಟುಂಬದ ನಾಲ್ವರು ರಕ್ತ ಚೆಲ್ಲಿದ್ದಾದರೂ ಯಾಕೆ?
ದುಪ್ಪಟ್ಟಾದ ಕರ ವಸೂಲಿ!
ಕಳೆದ 7-8 ವರ್ಷಗಳಿಂದ ತೆರಿಗೆ ಕಟ್ಟದ ಅನೇಕ ಜನರು ಈ ಗ್ರಾಮದಲ್ಲಿದ್ದಾರೆ. ಕರ ವಸೂಲಿಗಾರರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ತೆರಿಗೆ ವಸೂಲಿ ಮಾಡಿದರೂ ಬರಿಗೈಯಲ್ಲಿ ವಾಪಸಾಗುತ್ತಿರುವುದನ್ನು ಕಂಡು ಗ್ರಾಮ ಪಂಚಾಯಿತಿ ತಲೆ ಕೆಡಿಸಿಕೊಂಡಿತ್ತು. ಇದೀಗ ನೂತನ ಐಡಿಯಾ ಪಂಚಾಯತ್‌ನ ಕೈ ಹಿಡಿದಿದ್ದು, ಈ ಹಿಂದೆ 70-80,000 ರೂಪಾಯಿ ತೆರಿಗೆ ಸಂಗ್ರಹವಾಗುತ್ತಿತ್ತು ಆದರೆ ಹಿಟ್ಟು ರುಬ್ಬುವ ಯೋಜನೆ ಆರಂಭವಾದ ನಂತರ ತೆರಿಗೆ ಸಂಗ್ರಹ 1.7 ರಿಂದ 1.8 ಲಕ್ಷ ರೂಪಾಯಿ ದಾಟಿದೆ.
ಗ್ರಾಮ ಪಂಚಾಯತ್ ಆಡಳಿತದ ಈ ಯೋಜನೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ ಮತ್ತು ಇತರ ಗ್ರಾಮ ಪಂಚಾಯತ್‌ಗಳು ಸಹ ಇಂತಹ ಯೋಜನೆಯನ್ನು ತಮ್ಮಲ್ಲೂ ಪ್ರಾರಂಭಿಸುವ ಬಗ್ಗೆ ಯೋಚನೆ ಮಾಡಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ