ಮಧ್ಯಪ್ರದೇಶ : ಎರಡು ವರ್ಷಗಳ ಹಿಂದೆ ಕೋವಿಡ್ 19ನಿಂದ (COVID 19) ಮೃತಪಟ್ಟಿದ್ದ ಎಂದು ಅಂತ್ಯ ಸಂಸ್ಕಾರ (Last Rites) ಮಾಡಲಾಗಿದ್ದ ವ್ಯಕ್ತಿಯೊಬ್ಬ ಜೀವಂತವಾಗಿ ಮನೆಗೆ ಮರಳಿರುವ ಅಚ್ಚರಿಯ ಘಟನೆ ನಡೆದಿದೆ. ಕೋವಿಡ್ 19 ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ವೈದ್ಯರು (Doctor) ಮೃತದೇಹವನ್ನು ನೀಡಿದ್ದರು. ಆದರೆ ಕೋವಿಡ್ ಕಾರಣ ಸರಿಯಾಗಿ ಮುಖವನ್ನು ನೋಡುವುದಕ್ಕೆ ಸಾದ್ಯವಾಗಿರಲಿಲ್ಲ. ಸಿಬ್ಬಂದಿಯೇ ಅಂತ್ಯ ಸಂಸ್ಕಾರದ ಕಾರ್ಯವನ್ನು ನಿರ್ವಹಿಸಿದ್ದರು. ಆದರೆ ಅದೇ ವ್ಯಕ್ತಿ ಎರಡು ವರ್ಷಗಳ ಬಳಿಕ ಮನೆಗೆ ಮರಳಿದ್ದಾರೆ. ಈ ಘಟನೆ ಮಧ್ಯಪ್ರದೇಶದ (Madhya Pradesh) ಧಾರ್ ಜಿಲ್ಲೆಯ ಕೊಡದ್ ಕಲನ್ ಗ್ರಾಮದಲ್ಲಿ ನಡೆದಿದ್ದು, ಕುಟುಂಬಸ್ಥರಿಗೆ ಅಚ್ಚರಿಯ ಜೊತೆಗೆ ಸತ್ತಿದ್ದವ ಬದುಕಿ ಬಂದನೆಂದು ಸಂತೋಷ ವ್ಯಕ್ತಪಡಿಸಿದ್ದಾರೆ.
35 ವರ್ಷದ ಕಮಲೇಶ್ ಪಾಟಿದಾರ್ ಕೋವಿಡ್ 2 ಅಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ವೈದ್ಯರು ಕಮಲೇಶ್ ಮೃತಪಟ್ಟಿದ್ದಾನೆಂದು ಘೋಷಿಸಿದ್ದರು. ಪಿಟಿಐ ಮಾಹಿತಿ ಪ್ರಕಾರ ಆಸ್ಪತ್ರೆ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಿತ್ತು ಎನ್ನಲಾಗಿದೆ. ನಂತರ ಕುಟುಂಬಸ್ಥರು ಅಂತಿಮ ಸಂಸ್ಕಾರ ನಡೆಸಿದ್ದರು.
ಶಾಕ್ ಆದ ಕುಟುಂಬ
ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆನಲ್ಲಿ ಕಮಲೇಶ್ ಕರೋಡ್ಕಳ ಗ್ರಾಮಕ್ಕೆ ಆಗಮಿಸಿದ್ದು, ತನ್ನ ಚಿಕ್ಕಮ್ಮನ ಮನೆಯ ಬಾಗಿಲನ್ನು ಬಡಿದಿದ್ದಾನೆ. ಈತನನ್ನು ನೋಡಿದ ಕುಟುಂಬಸ್ಥರಿಗೆ ಅಚ್ಚರಿ ಜೊತೆಗೆ ಆಘಾತ ಉಂಟಾಗಿದೆ. ಎರಡು ವರ್ಷಗಳ ಹಿಂದೆ ಅಂತ್ಯ ಸಂಸ್ಕಾರ ಮಾಡಿದ್ದ ಕಮಲೇಶ್ನನ್ನು ಜೀವಂತವಾಗಿ ನೋಡಿದ ಕುಟುಂಬದ ಸದಸ್ಯರಿಗೆ ಸಂತೋಷವಾಗಿದೆ.
ಇದನ್ನೂ ಓದಿ: Fake Liquor: ನಕಲಿ ಮದ್ಯ ಸೇವಿಸಿ 22 ಮಂದಿ ಸಾವು, 10ಕ್ಕೂ ಹೆಚ್ಚು ಜನ ಅಸ್ವಸ್ಥ!
ಬರೋಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು
2021ರ ಜೂನ್‌ನಲ್ಲಿ ಕಮಲೇಶ್ ಕೋವಿಡ್–19 ಸೋಂಕಿಗೆ ಒಳಗಾಗಿದ್ದರು. ರೋಗ ಉಲ್ಬಣಿಸಿದ್ದರಿಂದ ನಾವು ಕಮಲೇಶ್ನನ್ನು ಗುಜರಾತ್‌ನ ಬರೋಡಾದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಮಲೇಶ್ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು. ಆದರೆ ಕೋವಿಡ್–19 ಮಾರ್ಗಸೂಚಿ ಪ್ರಕಾರ ಕುಟುಂಬದವರು ಕಮಲೇಶ್ ಮೃತದೇಹವನ್ನು ಮುಟ್ಟುವ ಹಾಗಿಲ್ಲ ಎಂದು ಎಂದು ತಿಳಿಸಿದ್ದರಿಂದ ದೂರದಿಂದಲೇ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ತೋರಿಸಿ ಅಂತ್ಯ ಸಂಸ್ಕಾರ ಮಾಡಿದ್ದರು. ದೂರಲ್ಲಿ ದೇಹವನ್ನು ನೋಡಿದ್ದರಿಂದ ಗುರುತಿಸಲು ಸಾಧ್ಯವಾಗಿರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಎರಡು ವರ್ಷ ಎಲ್ಲಿದ್ದ ?
ಅಂದು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಕಮಲೇಶ್ ಪಾಟಿದಾರ್, ಆಸ್ಪತ್ರೆಯಿಂದ ಎಲ್ಲಿಗೆ ಹೋಗಿದ್ದರು, ಇಷ್ಟು ದಿನ ಎಲ್ಲಿದ್ದರು? ಏನು ಮಾಡುತ್ತಿದ್ದರೂ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕಮಲೇಶ್ ಸೋದರ ಸಂಬಂಧಿ ರಾಮ್ ಸಿಂಗ್ ರಾಥೋರ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯವರು ಎರಡು ವರ್ಷಗಳ ಹಿಂದೆ ಅಂತ್ಯಕ್ರಿಯೆ ನಡೆಸಿದ ಮೃತ ದೇಹ ಯಾರದ್ದು ಎಂಬ ಪ್ರಶ್ನೆ ಮೂಡುತ್ತಿದ್ದು, ಕಣ್ವನ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Viral Story: ಪ್ರೈವೇಟ್ ಜೆಟ್‌ನಲ್ಲಿ ಕೇವಲ 13 ಸಾವಿರಕ್ಕೆ ರಾಜನಂತೆ ಪ್ರಯಾಣಿಸಿದ ಯುಕೆ ಪ್ರಯಾಣಿಕ!
ದೇಶದಲ್ಲಿ 10,000 ಕ್ಕಿಂತ ಹೆಚ್ಚು ಕೇಸ್ ದಾಖಲು
ಕಳೆದ ಒಂದು ವಾರದಿಂದ ಕೋವಿಡ್ ಸಂಖ್ಯೆಗಳು ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,093 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಈಗ 57,542ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 23 ಸಾವುಗಳು ವರದಿಯಾಗಿದ್ದು, ಕೊರೊನಾ ವೈರಸ್ ಸೋಂಕು ಕಾರಣದಿಂದ ಸತ್ತವರ ಸಂಖ್ಯೆ 5,31,114 ಕ್ಕೆ ಏರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ