ಕೆಲವು ಜನರು ಸೋಷಿಯಲ್ ಮೀಡಿಯಾದ ಪ್ರಭಾವಕ್ಕೊಳಗಾಗಿ ಏನೇನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡುಬಿಡುತ್ತಾರೆ. ಅದಕ್ಕೆ ಸ್ಪಷ್ಟ ನಿದರ್ಶನದಂತಿದೆ ಈ ವ್ಯಕ್ತಿ ಮಾಡಿಕೊಂಡಿರುವ ಅವಾಂತರ. ಅಮೆರಿಕದ ಲೂಸಿಯಾನದ ಲೆನ್ ಮಾರ್ಟಿನ್ ಬೇಕೆಂತಲೇ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾನೆ. ‘ಗೊರಿಲ್ಲಾ ಗ್ಲೂ ಚಾಲೆಂಜ್’ ಸ್ವೀಕರಿಸಿ ಇದೀಗ ಪರದಾಡುತ್ತಿದ್ದಾನೆ. ಅಷ್ಟಕ್ಕೂ ಏನಿದು ‘ಗೊರಿಲ್ಲಾ ಗ್ಲೂ ಚಾಲೆಂಜ್’ ಅಂತೀರಾ..? ಈ ಸ್ಟೋರಿ ಓದಿ…
ಇತ್ತೀಚೆಗಷ್ಟೇ ಟೆಸ್ಸಿಕಾ ಬ್ರೌನ್ ಎಂಬ ಯುವತಿ ಹೇರ್ ಸ್ಪ್ರೇ ಬದಲಿಗೆ ಪ್ರತಿಷ್ಠಿತ ಕಂಪನಿಯೊಂದರ ಅಂಟನ್ನು ಬಳಸಿದ್ದಳು. ಬಳಿಕ ಈಕೆಯ ತಲೆ ಕೂದಲಿಗೆ ‘ಗೊರಿಲ್ಲಾ ಅಂಟು’ ಬರೋಬ್ಬರಿ 1 ತಿಂಗಳಿಗೂ ಹೆಚ್ಚು ಕಾಲ ಒಂದೇ ಸ್ಟೈಲ್ನಲ್ಲಿ ಅಂಟಿಕೊಂಡಿತ್ತು. ತನ್ನ ತಲೆಕೂದಲನ್ನು ಮೊದಲಿನಂತೆ ಮಾಡಲು ಟೆಸ್ಸಿಕಾ ಪಡಬಾರದ ಕಷ್ಟಪಟ್ಟಿದ್ದಳು. ಆದರೆ ಅದು ಆಕೆ ಅಂದುಕೊಂಡತೆ ಸುಲಭವಾಗಿರಲಿಲ್ಲ.
ಎಷ್ಟೇ ಪ್ರಯತ್ನ ಪಟ್ಟರೂ ಗೊರಿಲ್ಲಾ ಅಂಟಿನಿಂದ ತಲೆಕೂದಲನ್ನು ಬಿಡಿಕೊಳ್ಳಲು ಸಾಧ್ಯವಾಗಲಿಲ್ಲ. ಮೊನ್ನೆ ಮೊನ್ನೆಯಷ್ಟೇ ಈಕೆಯ ತಲೆಗೂದಲನ್ನೇ ತೆಗೆಯಬೇಕಾಯಿತು. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿತ್ತು.
ಇದನ್ನು ಗಮನಿಸಿದ್ದ ಲೆನ್ ಮಾರ್ಟಿನ್, ಟೆಸ್ಸಿಕಾ ಸುಳ್ಳು ಹೇಳುತ್ತಿದ್ದಾಳೆ. ಆ ಕಂಪನಿಯ ಅಂಟು ಅಷ್ಟು ಗಟ್ಟಿಯಾಗಿಲ್ಲ. ಎಲ್ಲರ ಮುಂದೆ ಇದನ್ನು ನಾನು ಸಾಬೀತುಪಡಿಸುತ್ತೇನೆ ಎಂದವನೇ ‘ಗೊರಿಲ್ಲಾ ಗ್ಲೂ ಚಾಲೆಂಚ್’ ಸ್ವೀಕರಿಸಿದ್ದಾನೆ. ಅದರಂತೆ ಪ್ರಯೋಗಕ್ಕಿಳಿದ ಮಾರ್ಟಿನ್ ತನ್ನ ತುಟಿಗಳಿಗೆ ಅಂಟು ಹಚ್ಚಿಕೊಂಡು ಅದಕ್ಕೆ ಕಪ್ ಸಿಕ್ಕಿಸಿಕೊಂಡಿದ್ದಾನೆ. ಬಳಿಕ ಕಪ್ ತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಅದು ಯಾರೂ ಜಗ್ಗಿದರೂ ಬರದಂತೆ ಗಟ್ಟಿಯಾಗಿ ಮುಖಕ್ಕೆ ಅಂಟಿಕೊಂಡುಬಿಟ್ಟಿದೆ. ಜಪ್ಪಯ್ಯ ಅಂದರೂ ತೆಗೆಯಲು ಬಾರದ ಕಪ್ನಿಂದ ಮಾರ್ಟಿನ್ ಪರದಾಡುವಂತಾಗಿದೆ.
ಟೆಸ್ಸಿಕಾ ಹೇಳುತ್ತಿರುವುದು ಸುಳ್ಳು ಎಂದು ಸಾಬೀತುಪಡಿಸಲು ಹೋದ ಮಾರ್ಟಿನ್ ಇದೀಗ ಅಪಾರ ನೊವಿನಿಂದ ಹೆಣಗಾಡುತ್ತಿದ್ದಾನೆ. ಯಾಕಪ್ಪ ನಾನು ‘ಗೊರಿಲ್ಲಾ ಗ್ಲೂ ಚಾಲೆಂಜ್’ ಸ್ವೀಕರಿಸಿದೆ ಎಂದು ತನ್ನನ್ನೇ ತಾನು ಶಪಿಸಿಕೊಳ್ಳುತ್ತಿದ್ದಾನೆ. ‘ನಾನು ಗೊರಿಲ್ಲಾ ಗ್ಲೂ ಚಾಲೆಂಜ್ ಸ್ವೀಕರಿಸುತ್ತೇನೆ. ಟೆಸ್ಸಿಕಾ ಹೇಳುತ್ತಿರುವುದು ಸುಳ್ಳು ಎಂದು ಸಾಬೀತುಪಡಿಸುತ್ತೇನೆ.
ಈಗ ನಾನು ಗೊರಿಲ್ಲಾ ಅಂಟನ್ನು ತೆಗೆದುಕೊಳ್ಳುತ್ತೇನೆ. ಅದನ್ನು ಕಪ್ಗೆ ಅಂಟಿಸಿ ನನ್ನ ಬಾಯಿಗೆ ಹಚ್ಚಿಕೊಳ್ಳುತ್ತೇನೆ. ನೋಡ್ತಾ ಇರಿ, ನಾನು ಅದನ್ನು ಸುಲಭವಾಗಿ ತೆಗೆಯುತ್ತೇನೆ’ ಎಂದು ಹೇಳಿರುವ ವಿಡಿಯೋವನ್ನು ಮಾರ್ಟಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಇದನ್ನೂ ಓದಿ: ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಕಾಲುವೆಗೆ ಉರುಳಿದ 2 ಬಸ್ಸುಗಳು; 37ಕ್ಕೂ ಹೆಚ್ಚು ಮಂದಿ ಸಾವು
ಮತ್ತೊಂದು ವಿಡಿಯೋದಲ್ಲಿ ಮಾರ್ಟಿನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕಪ್ ಇನ್ನೂ ಮಾರ್ಟಿಕ್ ಮುಖಕ್ಕೆ ಅಂಟಿಕೊಂಡಿದೆ. ಈ ಅವಾಂತರ ವೀಕ್ಷಿಸಿದ ನೆಟಿಜನ್ಗಳು ಆತನ ವಿರುದ್ಧ ಕೋಪಿಸಿಕೊಂಡು ಕಾಮೆಂಟ್ ಮಾಡಿದ್ದಾರೆ. ‘ಮಾರ್ಟಿನ್ #gorillagluechallenge ಹ್ಯಾಶ್ಟ್ಯಾಗ್ ಸೃಷ್ಟಿಸಿ ತಾನೆಷ್ಟು ಸ್ಮಾರ್ಟ್ ಅನ್ನುವುದನ್ನು ತೋರಿಸುತ್ತಿದ್ದಾನೆ. ಯಾರೂ ಕೂಡ ಆತನನ್ನು ಅನುಸರಿಸಬೇಡಿ’ ಎಂದು ಸಲಹೆ ನೀಡಿದ್ದಾರೆ.
ಮತ್ತೊಬ್ಬರು ‘ನಿಮ್ಮ ತಲೆಯಲ್ಲಿರುವ ಮೆದುಳಿಗೂ ಗೊರಿಲ್ಲಾ ಗ್ಲೂ ಅಂಟಿಸಿಕೊಳ್ಳಿ’ ಎಂದಿದ್ದಾರೆ. ಸದ್ಯ ಈತನ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಕೆಲವರು ಈತನ ಬಗ್ಗೆ ಮರುಕಪಟ್ಟರೆ, ಹಲವರು ಈತನ ಸ್ವಯಂಕೃತ ಅಪರಾಧಕ್ಕೆ ಕಿಡಿಕಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ