ನವದೆಹಲಿ: ಟಿವಿ ಪರದೆ ಮೇಲೆ ಕಾಣುವ ಸಿಂಹವನ್ನು ನೋಡಿದರೆ ಒಂದು ಕ್ಷಣ ಮೈ ನಡುಗುತ್ತದೆ. ಅಂತಹದರಲ್ಲಿ ವ್ಯಕ್ತಿಯೊಬ್ಬ ಸಿಂಹದ ಮುಂದೆ ಕುಳಿತು, ಅದರೊಂದಿಗೆ ಕೆಲಹೊತ್ತು ಕಳೆದಿದ್ದಾನೆ ಅಂದರೆ ಆತನ ಧೈರ್ಯ ಎಷ್ಟಿರಬಹುದು ಎಂದು ಅಂದಾಜಿಸಿ.
ಹೌದು, ಈ ಘಟನೆ ನಡೆದಿರುವುದು ದೆಹಲಿ ಮೃಗಾಲಯದಲ್ಲಿ. ಬಿಹಾರ ಮೂಲದ ರೆಹಾನ್ ಖಾನ್ (28) ಎಂಬ ವ್ಯಕ್ತಿಯೇ ಈ ದುಸ್ಸಾಹ ಮಾಡಿದ ವ್ಯಕ್ತಿ. ಈತ ಮಾನಸಿಕ ಅಸ್ವಸ್ಥ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಮೃಗಾಲಯಕ್ಕೆ ಬಂದಿದ್ದ ರೆಹಾನ್ ಖಾನ್, ಸಿಂಹವಿರುವ ಎತ್ತರದ ಕಬ್ಬಿಣದ ಬೇಲಿಯನ್ನು ನೆಗೆದು ಸಿಂಹದ ಆವರಣದೊಳಗೆ ಪ್ರವೇಶಿಸಿದ್ದಾನೆ. ಬಳಿಕ ಸಿಂಹದ ಮುಂದೆ ಹೋಗಿ ಕುಳಿತಿದ್ದಾನೆ. ಸಿಂಹ ಕೂಡ ಆತನ ಹತ್ತಿದ ಬಂದು ನಿಂತುಕೊಳ್ಳುತ್ತದೆ. ಆತ ಸಿಂಹದ ಎದುರು ಹಲವು ನಿಮಿಷಗಳ ಕಾಲ ತುಂಬಾ ಆತ್ಮೀಯವಾಗಿ ಇರುವಂತೆ ನಟಿಸುತ್ತಾನೆ. ಸಿಂಹವೂ ಕೂಡ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತದೆ. ಇದನ್ನು ಕಂಡ ಪ್ರವಾಸಿಗರು, ಮೃಗಾಲಯದ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಆತ ಸಿಂಹದ ಜೊತೆಗೆ ಇರಬೇಕಾದರೆ ಇದನ್ನು ನೋಡುತ್ತಿದ್ದವರು ಭಯದಿಂದ ಕಿರುಚಾಡಲು ಆರಂಭಿಸುತ್ತಾರೆ. ರೆಹಾನ್ ಸಿಂಹದ ಮುಂದೆ ಕುಳಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ: Viral Video: ಗುಜರಾತ್ನಲ್ಲಿ ನಡುರಾತ್ರಿ ರಸ್ತೆಗಿಳಿದ ಸಿಂಹಗಳು; ವೈರಲ್ ಆಯ್ತು ವಿಡಿಯೋ
ತಕ್ಷಣ ಮೃಗಾಲಯದ ವಕ್ತಾರ ರಿಯಾಜ್ ಅಹ್ಮದ್ ಖಾನ್ ಅವರಿಗೆ ಸುದ್ದಿ ತಿಳಿಸಿದ್ದಾರೆ. ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ, ಸಿಂಹಕ್ಕೆ ಅರವಳಿಕೆ ನೀಡಿ, ಆತ ಅಲ್ಲಿಂದ ಹೊರಬರಲು ಏಣಿ ನೀಡಿದ್ದಾರೆ. ಅದೃಷ್ಟವಶಾತ್ ಸಿಂಹದ ಆವರಣದಿಂದ ಆ ವ್ಯಕ್ತಿ ಸುರಕ್ಷಿತವಾಗಿ ಹೊರಗೆ ಬಂದಿದ್ದಾನೆ. ರೆಹಾನ್ ತುಂಬಾ ಅದೃಷ್ಟಶಾಲಿ, ಯಾವುದೇ ಅಪಾಯವಿಲ್ಲದೇ ಜೀವಂತವಾಗಿ ಹೊರಗೆ ಬಂದಿರುವುದು ಸೋಜಿಗದ ಸಂಗತಿ ಎಂದು ಪ್ರಾಣಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
https://www.facebook.com/ANINEWS.IN/videos/463734020905339/
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ