ವಿಜಯವಾಡ, ಆಂಧ್ರ(ಆ. 18): ಹಳೆಯ ವ್ಯವಹಾರ ಭಿನ್ನಾಭಿಪ್ರಾಯದ ಕಾರಣಕ್ಕೆ ವ್ಯಕ್ತಿಯೊಬ್ಬ ಮೂವರು ಮಂದಿ ಇದ್ದ ಕಾರಿಗೆ ಬೆಂಕಿ ಹಚ್ಚಿದ ಘಟನೆ ಇಲ್ಲಿ ನಡೆದಿದೆ. ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ ಒಬ್ಬರಿಗೆ ಗಂಭೀರ ಗಾಯವಾಗಿದೆ. ಆರೋಪಿಯನ್ನು ವೇಣುಗೋಪಾಲ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಆತ ಬೆಂಕಿ ಹಚ್ಚಿದ ತತ್ಕ್ಷಣವೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆತನನ್ನು ಹಿಡಿಯಲು ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನೊಳಗಿದ್ದವರು ಗಂಗಾಂಧರ್, ಅವರ ಪತ್ನಿ ಹಾಗೂ ಒಬ್ಬ ಸ್ನೇಹಿತ ಎನ್ನಲಾಗಿದೆ. ಇವರ ಪೈಕಿ ಸ್ನೇಹಿತನಿಗೆ ಗಂಭೀರ ಸ್ವರೂಪದ ಸುಟ್ಟಗಾಯಗಳಾಗಿವೆ. ಗಂಗಾಧರ್ ಮತ್ತವರ ಪತ್ನಿಗೆ ಸ್ವಲ್ಪ ಗಾಯಗಳಾಗಿರುವುದು ತಿಳಿದುಬಂದಿದೆ. ಭರತ್ ನಗರ್ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಫೈವ್ ಸ್ಟಾರ್ ಹೋಟೆಲ್ವೊಂದರ ಪಕ್ಕದಲ್ಲೇ ಈ ದುರಂತ ಸಂಭವಿಸಿದೆ.
ಆರೋಪಿ ವೇಣುಗೋಪಾಲ್ ರೆಡ್ಡಿ ಮತ್ತು ಗಂಗಾಧರ್ ಇಬ್ಬರೂ ಕೆಲ ಕಾಲದ ಹಿಂದೆ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದರು. ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಕಾಲಾನಂತರದಲ್ಲಿ ವ್ಯವಹಾರ ಸರಿಯಾಗಿ ಆಗದೆ ನಷ್ಟ ತಲೆದೋರಿದೆ. ಈ ವೇಳೆ ವೇಣುಗೋಪಾಲ್ ಮತ್ತು ಗಂಗಾಧರ್ ಪಾರ್ಟ್ನರ್ಶಿಪ್ ಕಡಿದುಕೊಂಡಿದ್ದಾರೆ. ಅದಾದ ಬಳಿಕ ಗಂಗಾಧರ್ ಅವರನ್ನು ಸಂಪರ್ಕಿಸಿ ಮಾತನಾಡಲು ಆರೋಪಿ ವೇಣುಗೋಪಾಲ್ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ನಾಶಗೊಳಿಸಲಾಗುತ್ತಿದೆ, ದೇಶ ಚುನಾಯಿತ ಸರ್ವಾಧಿಕಾರದತ್ತ ವಾಲುತ್ತಿದೆ; ಎ.ಪಿ. ಶಾ
ಗಂಗಾಧರ್ ಅವರೇ ಕೊನೆಗೆ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ ಸೋಮವಾರ ಸಂಜೆ ವಿಜಯವಾಡದಲ್ಲಿ ವೇಣುಗೋಪಾಲ್ ರೆಡ್ಡಿ ಜೊತೆ ಗಂಗಾಧರ್ ಹಾಗೂ ಅವರ ಪತ್ನಿ ಮತ್ತು ಒಬ್ಬ ಸ್ನೇಹಿತ ಕಾರಿನಲ್ಲಿ ಕೂತು ವ್ಯವಹಾರ ಸಂಬಂಧಿತ ಚರ್ಚೆ ಮಾಡಿದ್ದಾರೆ. ಸಿಗರೇಟು ಸೇದಿ ಬರುತ್ತೇನೆಂದು ಹೇಳಿ ಆರೋಪಿ ಆ ಕಾರನ್ನು ಲಾಕ್ ಮಾಡಿ ಹೊರಗೆ ಬಂದಿದ್ದಾನೆ. ವಿಸ್ಕಿ ಬಾಟಲ್ನಲ್ಲಿ ತಾನು ತುಂಬಿಕೊಂಡು ಬಂದಿದ್ದ ಪೆಟ್ರೋಲ್ ಅನ್ನು ಕಾರಿಗೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹರ್ಷವರ್ಧನ್ ರಾಜು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಮೂವರು ಬದುಕುಳಿದಿದ್ಧಾರೆ. ಗಂಗಾಧರ್ ಮತ್ತವರ ಪತ್ನಿಗೆ ಸಣ್ಣಪುಟ್ಟ ಗಾಯವಾಗಿದ್ದರೆ, ಅವರ ಸ್ನೇಹಿತನ ಸ್ಥಿತಿ ಗಂಭೀರವಾಗಿದೆ. ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಗಂಗಾದರ್ ಅವರಿಂದ ಘಟನೆ ಸಂಬಂಧ ಪೊಲೀಸರು ಹೇಳಿಕೆ ಪಡೆದು ಪ್ರಕರಣ ದಾಖಲಿಸಲಿದ್ಧಾರೆ.
ಎಎನ್ಐ ಸುದ್ದಿ ಸಂಸ್ಥೆ ವರದಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ