ಸ್ವಿಗ್ಗಿ ಆ್ಯಪ್ನಲ್ಲಿ ಊಟ ಆರ್ಡರ್ ಮಾಡಿದ ಚೆನ್ನೈ ಗ್ರಾಹಕನಿಗೆ ಕಾದಿತ್ತು ಶಾಕ್!
ಕೆಲವೊಮ್ಮೆ ಆನ್ಲೈನ್ನಲ್ಲಿ ನಾವು ತಿಂಡಿ ಅಥವಾ ಊಟ ಬುಕ್ ಮಾಡಿದಾಗ ಅದು ಕೈ ತಲುಪಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಆದರೆ, ಆ ಸ್ವಿಗ್ಗಿ ಗ್ರಾಹಕರ ಆಹಾರ ಇನ್ನೇನು 12 ನಿಮಿಷಗಳಲ್ಲಿ ಡೆಲಿವರಿ ಆಗುವುದರಲ್ಲಿತ್ತು. ಆದರೂ ಅವರು ಕೋಪಗೊಂಡಿದ್ದರು. ಅಷ್ಟೇ ಅಲ್ಲ, ಸ್ವಿಗ್ಗಿಯ ಸರ್ವಿಸ್ ಬಗ್ಗೆ ದೂರು ಕೂಡ ನೀಡಿದರು.
ಚೆನ್ನೈ (ಫೆ.20): ಊಟ, ಉಪಾಹಾರ ಮತ್ತಿತರ ತಿನಿಸುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಆ್ಯಪ್ ಸಾಮಾನ್ಯವಾಗಿ ನಿಮ್ಮ ಸಮೀಪದ ಹೋಟೆಲ್ನಿಂದ ತಿನಿಸುಗಳನ್ನು ರವಾನೆ ಮಾಡುತ್ತದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಿಮ್ಮ ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಬಯಸುತ್ತೀರಾದ್ದರಿಂದ ತೀರಾ ದೂರದ ಹೋಟೆಲ್ಗಳಿಂದ ಆರ್ಡರ್ ಮಾಡುವ ದುಸ್ಸಾಹಸಕ್ಕೂ ನೀವು ಕೈಹಾಕುವುದಿಲ್ಲ. ಚೆನ್ನೈನ ವ್ಯಕ್ತಿಯೊಬ್ಬರು ಸ್ವಿಗ್ಗಿಯಲ್ಲಿ ನಾರ್ತ್ ಇಂಡಿಯನ್ ಆಹಾರವನ್ನು ಆರ್ಡರ್ ಮಾಡಿದ್ದರು. ಇನ್ನೇನು 12 ನಿಮಿಷಗಳಲ್ಲಿ ಡೆಲಿವರಿ ಆಗಲಿದೆ ಎಂಬ ಸಂದೇಶವೂ ಅವರಿಗೆ ಸಿಕ್ಕಿತ್ತು. ಆದರೂ ಸ್ವಿಗ್ಗಿ ಆ್ಯಪ್ ಬಗ್ಗೆ ಕೆಂಡಾಮಂಡಲರಾಗಿ ದೂರು ನೀಡಿದ್ದಾರೆ. ಯಾಕೆ ಅಂತೀರಾ?
ಚೆನ್ನೈನ ವ್ಯಕ್ತಿಯೊಬ್ಬರು ನಾರ್ತ್ ಇಂಡಿಯನ್ ರೆಸ್ಟೋರೆಂಟ್ನಿಂದ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿದ್ದರು. ಆದರೆ, ರಾಜಸ್ಥಾನದ ಹೋಟೆಲ್ನಿಂದ ನಾರ್ತ್ ಇಂಡಿಯನ್ ಆಹಾರವನ್ನು ಚೆನ್ನೈನ ಗ್ರಾಹಕರಿಗೆ ತಲುಪಿಸಲು ಮುಂದಾದ ಸ್ವಿಗ್ಗಿಯ ಆ್ಯಪ್ನಲ್ಲಿ ಕೇವಲ 12 ನಿಮಿಷಗಳಲ್ಲಿ ಆಹಾರವನ್ನು ಡೆಲಿವರಿ ಮಾಡಲಾಗುವುದು ಎಂದು ತೋರಿಸಲಾಗಿತ್ತು. ಇದನ್ನು ನೋಡಿದ್ದೇ ತಡ... ಹಸಿದಿದ್ದ ಗ್ರಾಹಕನ ಪಿತ್ತ ನೆತ್ತಿಗೇರಿತು.
ಚೆನ್ನೈನ ಭಾರ್ಗವ್ ರಾಜನ್ ಹೀಗೆ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿದ ವ್ಯಕ್ತಿ. ಚೆನ್ನೈನ ತಮ್ಮ ಮನೆಯ ಸಮೀಪದ ರೆಸ್ಟೋರೆಂಟ್ನಿಂದ ನಾರ್ತ್ ಇಂಡಿಯನ್ ಊಟ ಆರ್ಡರ್ ಮಾಡಿದ್ದ ಅವರಿಗೆ ಶಾಕ್ ಕಾದಿತ್ತು. ಚೆನ್ನೈಗೂ ರಾಜಸ್ಥಾನಕ್ಕೂ 2,431 ಕಿ.ಮೀ. ದೂರವಿದೆ. ಆದರೆ, ರಾಜಸ್ಥಾನದಿಂದ ಚೆನ್ನೈಗೆ ಊಟವನ್ನು ತೆಗೆದುಕೊಂಡು ಬರುತ್ತಿರುವುದಾಗಿ ತೋರಿಸುತ್ತಿದ್ದ ಸ್ವಿಗ್ಗಿ ಕೇವಲ 12 ನಿಮಿಷಗಳಲ್ಲಿ ಊಟವನ್ನು ಡೆಲಿವರಿ ನೀಡುವುದಾಗಿ ಹೇಳಿತ್ತು. ಹೀಗಾಗಿ, ಅದರ ಸ್ಕ್ರೀನ್ಶಾಟ್ ತೆಗೆದ ಭಾರ್ಗವ್ ರಾಜನ್ ಸ್ವಿಗ್ಗಿಗೆ ಟ್ವಿಟ್ಟರ್ನಲ್ಲಿ ಟ್ಯಾಗ್ ಮಾಡಿದ್ದಾರೆ.
ಆ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ರಾಜಸ್ಥಾನದಿಂದ ಚೆನ್ನೈಗೆ 12 ನಿಮಿಷಗಳಲ್ಲಿ ಯಾವ ಮಾರ್ಗದಲ್ಲಿ ಬರಲು ಸಾಧ್ಯ? ಅವರು ಯಾವ ವಾಹನದಲ್ಲಿ ಬರುತ್ತಿದ್ದಾರೆ? ಎಂದು ಭಾರ್ಗವ್ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ನೀಡಿರುವ ಸ್ವಿಗ್ಗಿ, ನಾವು ನಿಮಗಾಗಿರುವ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಇಂತಹ ತೊಂದರೆಗಳು ಪುನರಾವರ್ತಿತವಾಗದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದೆ.
This seems to be the work of God of mischief Loki 😈 In all seriousness, we have highlighted this issue and taken it very seriously and are actively working on to avoid such mishaps in the future. Thank you for bringing this to light for us Hyperion 😉 Bon appetite!
ಇನ್ನು, ಭಾರ್ಗವ್ ಅವರ ಟ್ವೀಟ್ಗೆ ಹಲವರು ರೀಟ್ವೀಟ್ ಮಾಡಿದ್ದು, ಚೆನ್ನೈ ಬದಲು ಒಂದುವೇಳೆ ಬೆಂಗಳೂರಿಗೆ ಡೆಲಿವರಿ ನೀಡಬೇಕಾಗಿದ್ದರೆ ಕಷ್ಟವಾಗುತ್ತಿತ್ತು. ಅವರು ಬೆಂಗಳೂರಿನ ಟ್ರಾಫಿಕ್ ದಾಟಿ ಬರುವಷ್ಟರಲ್ಲಿ ಒಂದು ದಿನ ಕಳೆಯುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ. ನಾವು ಬೆಂಗಳೂರಿನ ಸಿಲ್ಕ್ಬೋರ್ಡ್ ಟ್ರಾಫಿಕ್ ದಾಟುವಷ್ಟರಲ್ಲಿ ಅವರು ನಿಮಗೆ ಡೆಲಿವರಿ ಕೊಡಬಹುದು ಎಂದು ಕೂಡ ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಸಾವಿರಾರು ಕಿ.ಮೀ. ದೂರದಿಂದ ಸರ್ವಿಸ್ ನೀಡುತ್ತಿರುವುದಕ್ಕೆ ಕೇವಲ 138 ರೂ. ಬಿಲ್ ಮಾಡಿದ್ದೀರಾ? ಸ್ವಿಗ್ಗಿ ನೀವು ತುಂಬ ಗ್ರೇಟ್ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.
ಇನ್ನು, ಈ ಪ್ರಕರಣದ ಬಗ್ಗೆ ಸಿಗ್ಗಿ ಕೂಡ ತಮಾಷೆಯಾಗಿ ಟ್ವೀಟ್ ಮಾಡಿದ್ದು, ನಮ್ಮ ಗ್ರಾಹಕರಿಗಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ಚಂದ್ರನ ಮೇಲೆ ಹೋಗಿ ಬೇಕಾದರೂ ಗ್ರಾಹಕರಿಗೆ ಊಟ ತಂದುಕೊಡಲು ತಯಾರಿದ್ದೇವೆ ಎಂದು ಟ್ವೀಟ್ ಮಾಡಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ