Bihar: ಗ್ಯಾಸ್ ಸಿಲಿಂಡರ್ ಒಳಗೆ ಫುಲ್ ಮದ್ಯ..! ಎಲ್ಲಿಂದ ಸಿಗುತ್ತಪ್ಪಾ ಇಂಥಾ ಐಡಿಯಾ!

ಬಿಹಾರದ ರಾಜಧಾನಿ ಪಾಟ್ನಾದ ಪಿರಾಬಹೋರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಕದಮ್ ಘಾಟ್ ಪ್ರದೇಶದಲ್ಲಿ, ಪೊಲೀಸರು ಮದ್ಯದ ಕಳ್ಳಸಾಗಾಣಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ದಾಳಿ ನಡೆಸಿದಾಗ, ಅಲ್ಲಿ ಎಲ್‍ಪಿಜಿ ಸಿಲಿಂಡರ್ ಒಳಗೆ ಅಡಗಿಸಿಟ್ಟ ಮದ್ಯ ಪತ್ತೆಯಾಗಿದೆ.

ಎಲ್ ಪಿಜಿ ಸಿಲಿಂಡರ್

ಎಲ್ ಪಿಜಿ ಸಿಲಿಂಡರ್

  • Share this:
ಎಲ್‍ಪಿಜಿ(LPG) ಸಿಲಿಂಡರಿನೊಳಗೆ ಏನಿರುತ್ತದೆ..? ಇದೇನಪ್ಪಾ ಪ್ರಶ್ನೆ , ಮಕ್ಕಳು ಕೂಡ ಉತ್ತರಿಸಬಲ್ಲ ಪ್ರಶ್ನೆ ಇಲ್ಯಾಕೆ ಎನ್ನುತ್ತೀರಾ? ನಿಜ, ಎಲ್‍ಪಿಜಿ ಗ್ಯಾಸ್ ಸಿಲಿಂಡರ್‌ ಒಳಗೆ ಎಲ್‍ಪಿಜಿ ಅನಿಲವೇ ಇರುತ್ತದೆ. ಆದರೆ, ಬಿಹಾರದಲ್ಲಿ ಸಿಲಿಂಡರ್‌ನಲ್ಲಿ ಬೇರೆನೋ ಪತ್ತೆಯಾಗಿದೆ. ಹೌದು, ಅಲ್ಲಿನ ಪೋಲಿಸರಿಗೆ (Police) ಎಲ್‍ಪಿಜಿ ಸಿಲಿಂಡರ್‌ ಒಳಗೆ, ಒಂದಲ್ಲ ಎರಡಲ್ಲ ಬರೋಬ್ಬರಿ 50 ಲೀಟರ್‌ನಷ್ಟು ಮದ್ಯದ ಬಾಟಲಿಗಳು ಸಿಕ್ಕಿವೆಯಂತೆ. ಎಷ್ಟೆಂದರೂ, ಪೊಲೀಸರು ಚಾಪೆ ಕೆಳಗೆ ತೂರಿದರೆ ಕಳ್ಳರು ರಂಗೋಲಿ ಕೆಳಗೆ ತೂರುವುದರಲ್ಲಿ ನಿಸ್ಸಿಮರಾಗಿರುತ್ತಾರೆ. ಅಂದರೆ, ಪೋಲೀಸರ ಕಣ್ಣು ತಪ್ಪಿಸಿ ಅಪರಾಧಿ ಚಟುವಟಿಕೆಗಳನ್ನು ಮಾಡಲು ದಿನ ಬೆಳಗಾದರೆ ನಾನಾ ದಾರಿಗಳನ್ನು ಹುಡುಕುತ್ತಿರುತ್ತಾರೆ. ಬಿಹಾರದಲ್ಲೂ (Bihar) ಇದೇ ವಿಷಯಕ್ಕೆ ಪೊಲೀಸರು ಬೆಸ್ತು ಬಿದ್ದಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದ ಪಿರಾಬಹೋರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಕದಮ್ ಘಾಟ್ ಪ್ರದೇಶದಲ್ಲಿ, ಪೊಲೀಸರು ಮದ್ಯದ ಕಳ್ಳಸಾಗಾಣಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ದಾಳಿ ನಡೆಸಿದಾಗ, ಅಲ್ಲಿ ಎಲ್‍ಪಿಜಿ ಸಿಲಿಂಡರ್ ಒಳಗೆ ಅಡಗಿಸಿಟ್ಟ ಮದ್ಯ ಪತ್ತೆಯಾಗಿದೆ. ಎಲ್‍ಪಿಜಿ ಸಿಲಿಂಡರ್‌ನ ಕೆಳ ಭಾಗವನ್ನು ಚೌಕಾಕಾರದಲ್ಲಿ ಕೊರೆದು, ಅದರೊಳಗೆ ಮದ್ಯವನ್ನು ಬಚ್ಚಿಟ್ಟು ಮುಚ್ಚಲಾಗಿತ್ತು. ಮದ್ಯವನ್ನು ವಶಪಡಿಸಿಕೊಂಡ ಪೊಲೀಸರು, ಜೊತೆಗೆ ಈ ಅಪರಾಧಕ್ಕೆ ಸಂಬಂಧಿಸಿದಂತೆ ಭೂಷಣ್ ರೈ ಎಂಬುವನನ್ನು ಬಂಧಿಸಿದ್ದಾರೆ.

ಈರುಳ್ಳಿ ಚೀಲದಲ್ಲೂ ಕಳ್ಳ ಸಾಗಾಣಿಕೆ..!

ಹಾಗಂತ, ಇದು ಮದ್ಯ ಕಳ್ಳಸಾಗಣಿಕೆಯ ಮೊತ್ತ ಮೊದಲ ಪ್ರಕರಣವೇನಲ್ಲ. ಇತ್ತೀಚಿನ ತಿಂಗಳಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ಬಾರಿ ಬೆಳಕಿಗೆ ಬಂದಿವೆ. ಈ ಮೊದಲು, ಈರುಳ್ಳಿ ಮೂಟೆಗಳೊಳಗೆ ಮದ್ಯವನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದದ್ದನ್ನು ಪತ್ತೆ ಹಚ್ಚಿದ್ದರು. ಗೋಪಾಲ್‍ಗಂಜ್ ಜಿಲ್ಲೆಯಲ್ಲಿ ಪೊಲೀಸರು ನಿತ್ಯದ ತಪಾಸಣೆಯ ಸಂದರ್ಭದಲ್ಲಿ, ಉತ್ತರ ಪ್ರದೇಶದ ಲಕ್ನೋದಿಂದ ಮುಜಾಫರ್‌ಪುರಕ್ಕೆ ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದ ಮದ್ಯದ 275 ಕಾರ್ಟನ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ವಶಪಡಿಸಿಕೊಳ್ಳಲಾದ ಈ ಮದ್ಯ, ಮಾರುಕಟ್ಟೆಯಲ್ಲಿ ಸುಮಾರು 30 ಲಕ್ಷ ರೂ. ಗೂ ಹೆಚ್ಚು ಬೆಲೆಯನ್ನು ಹೊಂದಿದೆ ಎಂದು ಪೊಲೀಸರು ತಿಳಿಸಿದ್ದರು. ಮದ್ಯ ಕಳ್ಳಸಾಗಾಣಿಕೆ ಮಾಡಲಾಗುತ್ತಿದ್ದ ಟ್ರಕ್‍ನ ಚಾಲಕನನ್ನು ಸ್ಥಳದಲ್ಲೇ ಬಂಧಿಸಲಾಯಿತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ವೈಶಾಲಿ ಜಿಲ್ಲೆಯ ಎರಡು ಮದ್ಯ ಮಾಫಿಯಾಗಳ ಬಗ್ಗೆ ಮಾಹಿತಿ ದೊರಕಿತು.

ಇದನ್ನೂ ಓದಿ: Covid-19: ಚೀನಾದ ಶಾಂಘೈನಲ್ಲಿ ಕ್ವಾರಂಟೈನ್ ಕೇಂದ್ರಗಳು ಫುಲ್, ಆಹಾರ, ಔಷಧಕ್ಕೆ ತೀವ್ರ ಪರದಾಟ

2016 ರಲ್ಲಿ ಮದ್ಯದ ಬಳಕೆಯನ್ನು ನಿಷೇಧಿಸಿ, ಬಿಹಾರವನ್ನು ಡ್ರೈ ಸ್ಟೇಟ್ ಎಂದು ಘೋಷಿಸಲಾಗಿದೆ. ಆದರೆ, ಮದ್ಯ ಪ್ರಿಯರು ಮತ್ತು ಮಾರಾಟಗಾರರು ಅಡ್ಡ ದಾರಿಗಳನ್ನು ಹಿಡಿದರು. ಅಂದರೆ, ಮದ್ಯ ನಿಷೇಧದ ಬಳಿಕ, ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಬಿಹಾರದಲ್ಲಿ ಹೆಚ್ಚುತ್ತಿರುವ ಮದ್ಯದ ಅಕ್ರಮ ಕಳ್ಳ ಸಾಗಣಿಕೆಗಳನ್ನು ಹತ್ತಿಕ್ಕಲು, ಒಂದು ನಿಯಂತ್ರಿತ ರೀತಿ ಕಾನೂನಿನ ಅಡಿಯಲ್ಲಿ, ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಗಳು ಇದ್ದರೂ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಮದ್ಯ ನಿಷೇಧದ ಕುರಿತ ತಮ್ಮ ನಿಲುವಿಗೆ ಬದ್ಧರಾಗಿಯೇ ಉಳಿದಿದ್ದಾರೆ.

ಕಾನೂನು ತಿದ್ದುಪಡಿ

ಆದರೆ, ಬಿಹಾರ ರಾಜ್ಯದಲ್ಲಿ ಇತ್ತೀಚೆಗೆ ಮದ್ಯದ ಮಾರಾಟ ಮತ್ತು ಸೇವೆಯಲ್ಲಿ ನಿಷೇಧಿಸುವ ಕಾನೂನಿಗೆ ತಿದ್ದುಪಡಿಗಳನ್ನು ಮಾಡಿದೆ. ರಾಜ್ಯ ವಿಧಾನ ಸಭೆಯು, ಬಿಹಾರ ನಿಷೇಧ ಮತ್ತು ಅಬಕಾರಿ ತಿದ್ದುಪಡಿ ಮಸೂದೆ 2022 ಅನ್ನು ಅಂಗೀಕರಿಸಲಾಗಿದ್ದು, ಅದರಲ್ಲಿ ಮೊದಲ ಬಾರಿ ಮದ್ಯದ ಬಳಕೆಯ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ದಂಡ ವಿಧಿಸುವ ನಿಯಮದಲ್ಲಿ ಕೊಂಚ ಪರಿಷ್ಕರಣೆಯನ್ನು ಮಾಡಲಾಗಿದೆ. ಹೊಸ ತಿದ್ದುಪಡಿ ಮಸೂದೆಯ ಪ್ರಕಾರ, 2000 ರೂಗಳು ಮತ್ತು 5000 ರೂ.ಗಳ ಒಳಗಿನ ದಂಡವನ್ನು ಪಾವತಿಸಿದ ಬಳಿಕ ಅಪರಾಧಿಗಳನ್ನು ಬಿಡುಗಡೆ ಮಾಡಬಹುದಾಗಿದೆ.

ಇದನ್ನೂ ಓದಿ: Hanuman Jayanti: ಪ್ರಧಾನಿ ಮೋದಿಯಿಂದ ಗುಜರಾತ್​ನಲ್ಲಿ 108 ಫೀಟ್ ಎತ್ತರದ ಹನುಮಾನ್ ಮೂರ್ತಿ ಲೋಕಾರ್ಪಣೆ

ಈ ಮೊದಲು, ಮದ್ಯದ ಬಳಕೆಯ ಪ್ರಕರಣಗಳನ್ನು ಸಿಕ್ಕಿಬಿದ್ದ ಅಪರಾಧಿಗಳು, ಪೊಲೀಸ್ ವಶದಿಂದ ಬಿಡುಗಡೆ ಪಡೆಯಬೇಕಿದ್ದರೆ 50,000 ರೂ.ಗಳನ್ನು ದಂಡವಾಗಿ ಪಾವತಿಸಬೇಕಿತ್ತು. ತಪ್ಪಿತಸ್ಥರು ದಂಡ ಕಟ್ಟಲು ವಿಫಲರಾದ ಪೈಕಿ ಅವರಿಗೆ ಒಂದು ತಿಂಗಳ ಜೈಲುವಾಸವನ್ನು ವಿಧಿಸಲಾಗುತ್ತದೆ.
Published by:Divya D
First published: