ಐಫೋನ್ ಅಂದರೆ ಜಗತ್ತಿನ ಬಹುತೇಕ ಜನರಿಗೆ ಇಷ್ಟ. ಆದರೆ, ಅದರ ಬೆಲೆ ದುಬಾರಿಯಾಗಿದೆ, ಸ್ವಲ್ಪ ಕಡಿಮೆ ಬೆಲೆಗೆ ಸಿಕ್ಕರೆ ತಗೆದುಕೊಳ್ಳಬಹುದು ಅಂತ ಹಲವರು ಅಂದುಕೊಂಡಿರುತ್ತಾರೆ. ಇದೇ ರೀತಿ ಕಡಿಮೆ ಬೆಲೆಗೆ ಐ ಫೋನ್ ಅಂತ ಇಂಟರ್ನೆಟ್ನಲ್ಲಿ ಆರ್ಡರ್ ಮಾಡಿ ಬೇರೆ ಏನನ್ನೋ ಪಡೆದುಕೊಂಡ ಹಲವು ಉದಾಹರಣೆಗಳು ಸಿಗುತ್ತದೆ. ಕಳೆದ ಕೆಲವು ದಿನಗಳ ಹಿಂದೆ ಆ್ಯಪಲ್ ಫೋನ್ ಪಡೆಯಲು ಹೋಗಿ ಆ್ಯಪಲ್ ಜ್ಯೂಸ್ ಪಡೆದಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದೇ ರೀತಿಯ ಘಟನೆ ಥೈಲ್ಯಾಂಡ್ನಲ್ಲಿ ನಡೆದಿದೆ.
ಥೈಲ್ಯಾಂಡ್ನ ಹದಿಹರೆಯದ ಯುವಕ ಕಡಿಮೆ ಬೆಲೆಗೆ ಆನ್ಲೈನ್ನಲ್ಲಿ ಐಫೋನ್ ಕಂಡು ಸಂತೋಷಪಟ್ಟನು. ಆದರೆ ಪಾರ್ಸೆಲ್ ಪಡೆದ ಕ್ಷಣದಲ್ಲೇ ಆತನ ಸಂತೋಷ ಮರೆಯಾಯಿತು. ಯಾಕೆಂದರೆ, ಆತನಿಗೆ ಸಿಕ್ಕಿದ್ದು ಐಫೋನ್ ಆಕಾರದ ಕಾಫಿ ಟೇಬಲ್ ಆಗಿತ್ತು. ಆದರೆ, ಇಲ್ಲಿ ಕಾಫಿ ಟೇಬಲ್ ಅನ್ನು ಐಫೋನ್ ಎಂದುಕೊಂಡಿದ್ದು, ಆ ಖರಿದಿದಾರ ಯುವಕನದೇ ತಪ್ಪು ಎಂದು ತಿಳಿದುಬಂದಿದೆ. ಐಷಾರಾಮಿ ಫೋನ್ ಅನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವುದನ್ನು ನೋಡಿದಾಗ ಹದಿಹರೆಯದ ಯುವಕ ಅದನ್ನು ಕೊಳ್ಳಲು ಉತ್ಸುಕನಾಗಿದ್ದ. ತಾನು ಡೀಲ್ವೊಂದನ್ನು ಕ್ರ್ಯಾಕ್ ಮಾಡಿದ್ದೇನೆ ಎಂದು ಭಾವಿಸಿ ಆರ್ಡರ್ ಮಾಡಿದ್ದಾನೆ. ಆದರೆ, ಆರ್ಡರ್ ಪಡೆದುಕೊಂಡ ಬಳಿಕ ಏನೋ ತಪ್ಪಾಗಿದೆ ಎಂಬುದು ಆತನ ಅರಿವಿಗೆ ಬಂದಿದೆ.
ಯಾಕೆಂದರೆ ಆತ ಪಡೆದುಕೊಂಡ ಪಾರ್ಸೆಲ್ನ ಪ್ಯಾಕೇಜ್ ಅವನಷ್ಟೇ ಎತ್ತರವಾಗಿತ್ತು. ಆಮೇಲೆ ಅದನ್ನು ಓಪನ್ ಮಾಡಿ ನೋಡಿದಾಗ ಅದು ಕಾಫಿ ಟೇಬಲ್ ಎಂದು ಆತ ಕಂಡುಕೊಂಡಿದ್ದಾನೆ. ಅಲ್ಲದೆ, ಆ ಖಾಫಿ ಟೇಬಲ್ ಐ ಫೋನ್ ಆಕಾರದಲ್ಲೇ ಇರುವುದರಿಂದ ಆತ ಆರ್ಡರ್ ಮಾಡುವ ಮೊದಲು ಆ ಉತ್ಪನ್ನದ ವಿವರಗಳನ್ನು ನೋಡಿರಲಿಲ್ಲ. ಬದಲಾಗಿ ಕಡಿಮೆ ಬೆಲೆಗೆ ತನ್ನ ಪ್ರಿಯವಾದ ಫೋನ್ ಸಿಗುತ್ತಿದೆ ಎಂದುಕೊಂಡಿದ್ದಾನೆ ಎಂದು ಓರಿಯಂಟಲ್ ಡೈಲಿ ಮಲೇಷ್ಯಾ ವರದಿ ಮಾಡಿದೆ.
ನಂತರ ಸಾಮಾಜಿಕ ಜಾಲತಾಣದಲ್ಲಿ ತನ್ನ ತಪ್ಪಿನ ಬಗ್ಗೆ ಫೋಟೋಗಳನ್ನು ಹಂಚಿಕೊಂಡಿದ್ದಾನೆ. ಫೋನ್ ಎಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದೆ ಎಂದಾಗಲೇ ಆಶ್ಚರ್ಯ ಪಟ್ಟಿದ್ದೆ. ಆದರೆ, ಶಿಪ್ಪಿಂಗ್ ಬೆಲೆ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ಆದರೂ, ಈ ಡೀಲ್ ತುಂಬಾ ಆಕರ್ಷಕವಾಗಿದ್ದರಿಂದ ಆರ್ಡರ್ ಮಾಡಿದೆ ಎಂದು ಹೇಳಿದ್ದಾನೆಂದೂ ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ