ಪ್ರಾಣಿ, ಪಕ್ಷಿ, ಹಾವು ಸೇರಿದಂತೆ ಇತರ ಜೀವಿಗಳ ರಕ್ಷಣೆಯ ಸಾಕಷ್ಟು ವಿಡಿಯೋಗಳನ್ನು ನೀವು ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಪ್ರಾಣಿಗಳ ಜೀವಕ್ಕೆ ಮನುಷ್ಯ ಜೀವಿ ನೀಡುವ ಪ್ರಾಮುಖ್ಯತೆ ಕಂಡು ಮನಸ್ಸು ತುಂಬಿ ಬಂದಿರುತ್ತದೆ. ಇದೇ ರೀತಿ ಜೀವದ ಹಂಗನ್ನೇ ತೊರೆದು ಯುವಕರ ಗುಂಪೊಂದು ಬಾವಿಗೆ ಬಿದ್ದಿದ್ದ ನಾಗರಹಾವನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ. ಈ ಮೈನವಿರೇಳಿಸುವ ಸಾಹಸದ ದೃಶ್ಯವನ್ನು ನೋಡಿದರೆ ಅಬ್ಬಾ..! ಎನ್ನುತ್ತೀರಿ. ಸದ್ಯಕ್ಕೆ ಈ ಯುವಕರು ಹಾವು ರಕ್ಷಣೆಗಾಗಿ ಮಾಡಿರುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಜಮೀನಿನ ಮಧ್ಯೆ ಇದ್ದ ಬಾವಿಗೆ ಅದ್ಹೇಗೋ ನಾಗರಹಾವೊಂದು ಬಿದ್ದುಬಿಟ್ಟಿತು. ಮೇಲೆ ಬರಲು ಪರದಾಡುತ್ತಿದ್ದ ಈ ಹಾವನ್ನು ನೋಡಿದ ಯುವಕರ ಗುಂಪು ಅದನ್ನು ರಕ್ಷಿಸಲು ನಿರ್ಧರಿಸಿದ್ದಾರೆ. ಈಜುತ್ತಾ ದಣಿಯುತ್ತಿದ್ದ ಹಾವನ್ನು ರಕ್ಷಿಸಲು ಸಾಹಸಮಯ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಒಬ್ಬ ಯುವಕ ಯಾವುದೇ ಭಯವಿಲ್ಲದೆ ನೀರಿಗೆ ಧುಮುಕುತ್ತಾನೆ. ಈಜುತ್ತಾ ಈಜುತ್ತಾ ಹಾವಿನ ಬಳಿ ಹೋಗುತ್ತಾನೆ. ಇನ್ನೊಬ್ಬ ವ್ಯಕ್ತಿ ಬಲೆಯಲ್ಲಿ ಹಾವನ್ನು ಸಿಕ್ಕಿಸಲು ಪ್ರಯತ್ನಿಸುತ್ತಾನೆ. ಆದರೆ ಹಾವು ಹೆದರಿಕೊಂಡು ಆ ಕಡೆಯಿಂದ ಈ ಕಡೆ.. ಈ ಕಡೆಯಿಂದ ಆ ಕಡೆ ಈಜುತ್ತಿರುತ್ತದೆ.
ಸಾಕಷ್ಟು ಹೊತ್ತಿನ ಪ್ರಯತ್ನದ ಬಳಿಕ ಯುವಕರ ಗುಂಪು ನಾಗರಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಅದರ ಬಾಲವನ್ನು ಹಿಡಿಯುವ ಮೂಲಕ ರಕ್ಷಣೆ ಮಾಡಲಾಗುತ್ತದೆ. 4 ನಿಮಿಷ 31 ಸೆಕೆಂಡ್ಗಳ ಈ ವಿಡಿಯೋ ಕ್ಲಿಪ್ನಲ್ಲಿ ಯುವಕರು ಹೇಗೆ ತಮ್ಮ ಪ್ರಾಣದ ಹಂಗು ತೊರೆದು ಹಾವಿನ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂಬುದನ್ನು ವೀಕ್ಷಿಸಬಹುದಾಗಿದೆ.
ರೋಜರ್ ಸ್ನಿಪ್ಸ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿಸಿದ್ದಾರೆ. ಹಾವು ರಕ್ಷಿಸಲು ಯುವಕರು ಮಾಡಿರುವ ಸಾಹಸಕ್ಕೆ ಮೆಚ್ಚುಗೆ ಸೂಚಿಸಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಕೆಲವರು ಹಾವು ರಕ್ಷಿಸಿರುವುದು ‘ದಯೆಯ ಕಾರ್ಯ’ ಎಂದರೆ, ‘ಪ್ರಾಣವನ್ನು ಪಣಕ್ಕಿಟ್ಟು ಈ ರೀತಿ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.
ಹಾವನ್ನು ರಕ್ಷಿಸಿರುವ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ. ಈ ಹಾವಿನ ರಕ್ಷಣಾ ಕಾರ್ಯಾಚರಣೆ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. 3.7 ನಿಮಿಷಗಳ ಈ ವಿಡಿಯೋ ಕ್ಲಿಪ್ ನಲ್ಲಿ ಸಿಲಿಂಡರಾಕಾರದ ಪೈಪ್ಗೆ ಜೋಡಿಸಲಾದ ಚೀಲವನ್ನು ನೀರಿಲ್ಲದ ಬಾವಿಯಲ್ಲಿ ಇಳಿಸಲಾಗುತ್ತದೆ. ಹಾವನ್ನು ಅದರ ದಿಕ್ಕಿನಲ್ಲಿ ಹೋಗುವಂತೆ ಮಾಡಿ ಯಶಸ್ವಿಯಾಗಿ ರಕ್ಷಿಸಲಾಗುತ್ತದೆ. ಒಟ್ಟಿನಲ್ಲಿ ಹಾವು ಎಂದರೆ ಮಾರುದ್ದ ದೂರ ಓಡಿಹೋಗುವವರೇ ಹೆಚ್ಚಿರುವಾಗ ಪ್ರಾಣದ ಹಂಗು ತೊರೆದು ಹಾವು ರಕ್ಷಣೆ ಮಾಡಿರುವ ಈ ವಿಡಿಯೋಗಳು ಭಾರಿ ಸದ್ದು ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ