ಅಮೆರಿಕ ಅಧ್ಯಕ್ಷ ಜೋ ಬಿಡೆನ್ರನ್ನು ಕೊಲ್ಲುವುದಾಗಿ ಉತ್ತರ ಕೆರೊಲಿನಾದ ವ್ಯಕ್ತಿಯೊಬ್ಬನ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಫೆಡರಲ್ ಕ್ರಿಮಿನಲ್ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಗುರುವಾರ ನ್ಯಾಯಾಲಯ ಮಾಹಿತಿ ನೀಡಿದ್ದು, ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಅಮೆರಿಕದ ಉತ್ತರ ಕೆರೊಲಿನಾದ ಗ್ಯಾಸ್ಟೋನಿಯಾ ನಿವಾಸಿ ಡೇವಿಡ್ ಕೈಲ್ ರೀವ್ಸ್ (27) ಎಂಬಾತ ಫೆಬ್ರವರಿ 5 ರಂದು ಉದ್ದೇಶಪೂರ್ವಕವಾಗಿ ಅಧ್ಯಕ್ಷರಿಗೆ ಪ್ರಾಣ ಹಾನಿ ಮತ್ತು ದೈಹಿಕ ಹಾನಿ ಉಂಟುಮಾಡುವ ಬೆದರಿಕೆ ಹಾಕಿದ್ದಕ್ಕಾಗಿ ಬಂಧಿಸಲಾಯಿತು ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ.
ಜನವರಿ 28 ಮತ್ತು ಫೆಬ್ರವರಿ 1 ರ ನಡುವೆ ರೀವ್ಸ್ ವೈಟ್ ಹೌಸ್ ಸ್ವಿಚ್ ಬೋರ್ಡ್ ಅನ್ನು ಫೋನ್ ಮೂಲಕ ಹಲವು ಬಾರಿ ಸಂಪರ್ಕಿಸಿ ಅಧ್ಯಕ್ಷ ಬಿಡೆನ್ ಮತ್ತು ಇತರರ ವಿರುದ್ಧ ಬೆದರಿಕೆ ಹಾಕಿದ್ದಾರೆ ಎಂದು ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ.
ತಾನು ಎಲ್ಲರನ್ನೂ ಕೊಂದು "ನಿಮ್ಮ ತಲೆ ಕತ್ತರಿಸುತ್ತೇನೆ" ಎಂದು ರೀವ್ಸ್ ಒಂದು ಫೋನ್ ಕಾಲ್ನಲ್ಲಿ ಬೆದರಿಕೆ ಹಾಕಿದ್ದಾನೆ ಎಂದು ಕ್ರಿಮಿನಲ್ ದೂರಿನಲ್ಲಿ ಹೇಳಲಾಗಿದೆ. ಅಲ್ಲದೆ, ಈ ಬಗ್ಗೆ ಚರ್ಚಿಸಲು ಸೀಕ್ರೆಟ್ ಸರ್ವಿಸ್ ಏಜೆಂಟರು ರೀವ್ಸ್ ಅವರನ್ನು ಸಂಪರ್ಕಿಸಿದ್ದರು. ಆತ ದಿನವಿಡೀ ಹಲವಾರು ಬಾರಿ ಏಜೆಂಟರಿಗೆ ಕಾಲ್ ಮಾಡಿ ಅಮೆರಿಕ ಅಧ್ಯಕ್ಷರು, ಏಜೆಂಟ್ ಮತ್ತು ಇತರರ ವಿರುದ್ಧ ಬೆದರಿಕೆ ಹಾಕಿದ್ದಾನೆ ಎಂದೂ ದೂರಿನಲ್ಲಿ ವಿವರಿಸಲಾಗಿದೆ.
''ತನ್ನನ್ನು ವೈಟ್ಹೌಸ್ಗೆ ಕರೆದುಕೊಂಡು ಹೋಗಿ, ತಾನು ಅಧ್ಯಕ್ಷರಿಗೆ ಪಂಚ್ ಮಾಡಿ, ತಾನು ಸಾಯುವವರೆಗೆ ಅಮೆರಿಕ ಅಧ್ಯಕ್ಷನಾಗಿ ಅವರ ಕುರ್ಚಿಯಲ್ಲಿ ಕೂರುತ್ತೇನೆ'' ಎಂದೂ ಹೇಳಿಕೊಂಡಿರುವ ಬಗ್ಗೆ ದೂರಿನಲ್ಲಿ ಹೇಳಲಾಗಿದೆ.
ನಂತರ, ''ತಾನು ವಾಕ್ಚಾತುರ್ಯದ ಅಧಿಕಾರ ಹೊಂದಿದ್ದು, ಯಾವುದೇ ತಪ್ಪು ಮಾಡಿಲ್ಲ'' ಎಂದು ರೀವ್ಸ್ ಹೇಳಿದ್ದಾನೆ ಎಂದೂ ಕ್ರಿಮಿನಲ್ ದೂರನ್ನು ಬೆಂಬಲಿಸುವ ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ರೀವ್ಸ್ ಗುರುವಾರ ಉತ್ತರ ಕೆರೊಲಿನಾ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾದರು ಮತ್ತು ಆರೋಪಿಯನ್ನು ಬಂಧನದಲ್ಲಿರಲು ಆದೇಶಿಸಲಾಯಿತು.
"ಮಿಸ್ಟರ್ ರೀವ್ಸ್ ತಪ್ಪೊಪ್ಪಿಕೊಂಡಿಲ್ಲ ಮತ್ತು ಸೂಕ್ತವಾದ ಮಾನಸಿಕ ಆರೋಗ್ಯ ಮೌಲ್ಯಮಾಪನಗಳನ್ನು ನೀಡಲಾಗುತ್ತಿದೆ'' ಎಂದು ಉತ್ತರ ಕೆರೊಲಿನಾದ ವೆಸ್ಟರ್ನ್ ಡಿಸ್ಟ್ರಿಕ್ಟ್ನ ಫೆಡರಲ್ ಪಬ್ಲಿಕ್ ಡಿಫೆಂಡರ್ ಕಚೇರಿಯ ಹಿರಿಯ ದಾವೆ ಸಲಹೆಗಾರ, ಆರೋಪಿ ಪರ ವಕೀಲ ಕೆವಿನ್ ಟೇಟ್ ಹೇಳಿದ್ದಾರೆ.
ಜೈಲಿನ ದಾಖಲೆಗಳ ಪ್ರಕಾರ ರೀವ್ಸ್ ಅನ್ನು ಮೆಕ್ಲೆನ್ಬರ್ಗ್ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರ ವಿರುದ್ಧ ಬೆದರಿಕೆ ಹಾಕಿದ ಆರೋಪ ಸಾಬೀತಾದರೆ ಆರೋಪಿಗೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಮತ್ತು, 250,000 ಡಾಲರ್ ದಂಡವನ್ನು ಹೊಂದಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ