ಚೆನ್ನೈ (ಜುಲೈ 09); ತಮಿಳುನಾಡಿನ ಕರಾವಳಿ ತೀರದ ಭಾಗಕ್ಕೆ ಪರಿಶೀಲನೆಗೆ ಎಂದು ತೆರಳಿದ್ದ ಅಲ್ಲಿನ ಮೀನುಗಾರಿಕಾ ಸಚಿವ ಅನಿತಾ ರಾಧಾಕೃಷ್ಣನ್ ನೀರಿನಲ್ಲಿ ಕಾಲಿಟ್ಟರೆ ತಮ್ಮ ಬೂಟು ಒದ್ದೆಯಾಗುತ್ತದೆ ಎಂದು ನೀರಿನಲ್ಲಿ ಕಾಲಿಡಲು ನಿರಾಕರಿಸಿದ್ದಾರೆ. ಈ ವೇಳೆ ಬೆಸ್ತರು ಅವರನ್ನು ನೀರಿನಲ್ಲಿ ಕಾಲಿಡದಂತೆ ಎತ್ತಿಕೊಂಡು ಹೋಗಿರುವ ಪೋಟೋ ಮತ್ತು ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಸಚಿವ ಅನಿತಾ ರಾಧಾಕೃಷ್ಣನ್ ತಿರುವಳ್ಳೂರ್ ಜಿಲ್ಲೆಯ ಉಪ್ಪನ್ಕುಳಲಿ ಸರೋವರದ ಪರಿಶೀಲನೆಗೆ ಇಂದು ತೆರಳಿದ್ದರು. ಈ ಸರೋವರದ ತೀರವನ್ನು ಸಮುದ್ರದ ಅಲೆಗಳ ಉಬ್ಬರವಿಳಿತದಿಂದ ಸವೆತ ಉಂಟಾಗುತ್ತಿದೆ ಎಂದು ಕಾರಣಕ್ಕೆ ಈ ಭಾಗದಲ್ಲಿ ದೋಣಿ ಸಂಚಾರಕ್ಕೆ ನಿರ್ಭಂದ ಹೇರಲಾಗಿತ್ತು. ಆದರೆ, ಇದರ ಪರಿಶೀಲನೆಗೆ ತೆರಳಿದ್ದ ಸಚಿವ ಅನಿತಾ ರಾಧಾಕೃಷ್ಣನ್ ಅವರನ್ನು ಸಣ್ಣ ಬೋಟ್ನಲ್ಲಿ ಇಲ್ಲಿಗೆ ಕರೆದುಕೊಂಡು ಹೋಗಲಾಗಿತ್ತು.
ಆದರೆ, ಆ ಸಣ್ಣ ಬೋಟ್ನಲ್ಲಿ 30ಕ್ಕೂ ಹೆಚ್ಚು ಜನ ಇದ್ದ ಕಾರಣ ಅದು ಭಾರಕ್ಕೆ ಒಂದೇ ಕಡೆ ವಾಲಿದೆ. ಈ ವೇಳೆ ಬೋಟ್ನಲ್ಲಿದ್ದ ಎಲ್ಲರನ್ನೂ ಮತ್ತೊಂದು ಬೋಟ್ಗೆ ವರ್ಗಾಯಿಸಿ ದಡಕ್ಕೆ ತಲುಪಿಸಲಾಗಿತ್ತು. ದಡಕ್ಕೆ ಹಿಂದಿರುಗಿದಾಗ ಸಚಿವರು ತಾನು ನೀರಿನಲ್ಲಿ ಕಾಲಿಡಲು ನಿರಾಕರಿಸಿದ್ದಾರೆ. ತನ್ನ ಬೂಟು ಒದ್ದೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಆ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಕುರ್ಚಿಯನ್ನು ತಂದ ನಂತರ ಮೀನುಗಾರರು ಸಚಿವರನ್ನು ಎತ್ತಿಕೊಂಡೆ ಹೋಗಿ ಆ ಖುರ್ಚಿಯಲ್ಲಿ ಕೂರಿಸಿದ್ದಾರೆ. ಆದರೆ, ಈ ಪ್ರಸಂಗಗಳು ಕೆಲವರು ಮೊಬೈಲ್ ಪೋನ್ನಲ್ಲಿ ಸೆರೆಯಾಗಿದ್ದು ತಮಿಳುನಾಡಿನ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅಲ್ಲದೆ, ವಿಡಿಯೋ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಹಲವರು ಸಚಿವರ ನಡೆಯನ್ನು ಕಟು ಶಬ್ಧಗಳಿಂದ ಪ್ರಶ್ನಿಸಿದ್ದಾರೆ. ಇದು ಸಚಿವರ ಲಜ್ಜೆಗೆಟ್ಟ ವಿಐಪಿ ನಡವಳಿಕೆ ಎಂದು ದೂರಿದ್ದಾರೆ.
ಆದರೆ, ತಮಿಳುನಾಡಿನ ಮಾಧ್ಯಮಗಳು ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಚಿವರನ್ನು ಸಂಪರ್ಕಿಸಿದಾಗ ವಿವರಣೆ ನೀಡಿರುವ ಅನಿತಾ ರಾಧಾಕೃಷ್ಣನ್, "ನಾನು ನೀರಿನಲ್ಲಿ ಇಳಿಯಲು ಸಿದ್ಧನಾಗಿದ್ದೆ. ನನ್ನನ್ನು ದಡಕ್ಕೆ ಎತ್ತಿಕೊಂಡು ಹೋಗಿ ಎಂದು ನಾನು ಯಾರಲ್ಲೂ ಮನವಿ ಮಾಡಿರಲಿಲ್ಲ. ಆದರೆ, ಗುಂಪಿನಲ್ಲಿದ್ದ ಓರ್ವ ಮೀನುಗಾರ ಸಚಿವರು ನಮ್ಮ ಭಾಗಕ್ಕೆ ಭೇಟಿ ನೀಡಿದ್ದಾರೆ ಎಂದು ಪ್ರೀತಿಯಿಂದ ನನ್ನನ್ನು ಎತ್ತಿಕೊಂಡು ಹೋಗಿದ್ದರು" ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ತಿರುವಳ್ಳೂರ್ ಜಿಲ್ಲೆಗೆ ಭೇಟಿ ನೀಡಿರುವ ಮೀನುಗಾರಿಕಾ ಸಚಿವ ಅನಿತಾ ರಾಧಾಕೃಷ್ಣನ್ ಮೀನುಗಾರಿಕೆ ದೋಣಿಗಳು ಬಳಸುವ ಡೀಸೆಲ್‌ಗೆ ಸಹಾಯಧನವನ್ನು ಹೆಚ್ಚಿಸುವುದಾಗಿ ಮೀನುಗಾರರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ