ರಾಜಸ್ಥಾನ: ಗೋವುಗಳ ಕಳ್ಳ ಸಾಗಾಣೆ ಅನುಮಾನದಿಂದ ಅಮಾಯಕರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವ ಘಟನೆ ದೇಶದ ಮೂಲೆ ಮೂಲೆಗಳಲ್ಲಿ ಆಗಿಂದಾಗ್ಗೆ ಸುದ್ದಿಯಾಗು ತ್ತಲೇ ಇದೆ. ಆದರೂ, ಈ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಂತ್ಯ ಕಾಣುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಇಂತಹದ್ದೆ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಹಸುಗಳ ಕಳ್ಳಸಾಗಣೆ ಆರೋಪದ ಮೇಲೆ ಓರ್ವ ವ್ಯಕ್ತಿಯ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆಗೆ ರಾಜಸ್ಥಾನದ ಚಿತ್ತೋರ್‌ಗಢ ಸಾಕ್ಷಿಯಾಗಿದೆ. ಮತ್ತೊಬ್ಬ ವ್ಯಕ್ತಿಯ ಮೇಲೂ ತೀವ್ರ ಹಲ್ಲೆ ನಡೆಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಮೃತ ವ್ಯಕ್ತಿಯನ್ನು ಬಾಬು ಲಾಲ್ ಭಿಲ್ ಎಂದು ಗುರುತಿಸಲಾಗಿದ್ದು, ಮಧ್ಯಪ್ರದೇಶದ ಅಚಲ್‌ಪುರದ ನಿವಾಸಿ ಎನ್ನಲಾಗಿದೆ. ಮೃತ ಬಾಬು ಮತ್ತು ಇನ್ನೊಬ್ಬ ವ್ಯಕ್ತಿ ಗಾಯಾಳು ಪಿಂಟು ಭಿಲ್ ವಾಹನದಲ್ಲಿ ತೆರಳುತಿದ್ದಾಗ ಜನರ ಗುಂಪೊಂದು ವಾಹನ ನಿಲ್ಲಿಸುವಂತೆ ಒತ್ತಾಯಿಸಿ, ಇಬ್ಬರನ್ನು ಹೊರಗೆಳೆದು ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಪಿಂಟು ಭಿಲ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಗು ಎಂಬ ಪಟ್ಟಣದ ಬಳಿ ಈ ದಾಳಿ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ಕೆಲವು ಜನರನ್ನು ವಶಕ್ಕೆ ಪಡೆದಿದ್ದಾರೆ.
"ಹಸುಗಳನ್ನು ಸಾಗಿಸುತ್ತಿದ್ದ ವಾಹನ ನಿಲ್ಲಿಸಿ ಕೆಲವರು ಹಲ್ಲೆ ನಡೆಸುತ್ತಿದ್ದಾರೆ ಎಂದು ಮಧ್ಯರಾತ್ರಿ ಠಾಣೆಗೆ ಮಾಹಿತಿ ದೊರೆಯಿತು. ನಮ್ಮ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಹತ್ತಿರದ ರೈಟಿ ಗ್ರಾಮ ಮತ್ತು ಸುತ್ತಮುತ್ತಲಿನ ಜನರು, ಬಾಬು ಮತ್ತು ಪಿಂಟು ಎಂಬ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸುತ್ತಿದ್ದರು" ಎಂದು ಐಜಿ(ಉದಯಪುರ ಶ್ರೇಣಿ) ಸತ್ಯವೀರ್ ಸಿಂಗ್ ಹೇಳಿದ್ದಾರೆ.
"ದಾಳಿಕೋರರು, ಹಲ್ಲೆಗೊಳಗಾದ ಇಬ್ಬರ ದಾಖಲೆಗಳು ಮತ್ತು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಹಲ್ಲೆ ನಡೆಸುತ್ತಿದ್ದವರು ಓಡಿಹೋದರು. ನಮ್ಮ ಅಧಿಕಾರಿಗಳು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು, ಆದರೆ, ಆಸ್ಪತ್ರೆಯಲ್ಲಿ ಬಾಬು ನಿಧನರಾದರು. ಗಾಯಾಳು ಪಿಂಟು ಚೇತರಿಸಿಕೊಳ್ಳುತ್ತಿದ್ದಾರೆ.
"ನಾವು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ. ಯಾವುದೇ ಆರೋಪಿಗಳನ್ನು ಬಿಡುವುದಿಲ್ಲ. ಈಗಾಗಲೇ ನಾವು ಕೆಲವರನ್ನೂ ವಶಕ್ಕೆ ಪಡೆದಿದ್ದೇವೆ" ಎಂದು ಸತ್ಯವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ