ಕೊಲ್ಕತ್ತ: ಪಶ್ಚಿಮಬಂಗಾಳದ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಯನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಸಕಲ ಪ್ರಯತ್ನ ನಡೆಸಿದ್ದರೆ, ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸದಂತೆ ತಡೆಯಲು ಟಿಎಂಸಿ ಮುಖ್ಯಸ್ಥ ಮಮತಾ ಬ್ಯಾನರ್ಜಿ ಸಹ ಹೆಚ್ಚು ಕಾರ್ಯೊನ್ಮುಖರಾಗಿದ್ದಾರೆ. ಟಿಎಂಸಿ ರಾಜ್ಯದಲ್ಲಿ ಈಗಾಗಲೇ ತುಂಬಾ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಇಂದು 291 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮೊದಲು ಸಾಮಾನ್ಯ ಜನರು ಕೊರೋನಾ ಲಸಿಕೆ ಪಡೆಯಬೇಕು. ಅವಕಾಶ ಸಿಕ್ಕಾಗ ನಾನು ಲಸಿಕೆ ಪಡೆಯುತ್ತೇನೆ. ರಾಜ್ಯದಲ್ಲಿ 120-130 ರ್ಯಾಲಿಗಳನ್ನು ನಡೆಸುತ್ತೇನೆ. ಆದರೆ, ಈಗ ಯಾವುದು ಅಂತಿಮವಾಗಿಲ್ಲ. ನಾವು ಬಂಗಾಳದ ನಿವಾಸಿಗಳು. ನಾವು ಇಲ್ಲಿನ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಅರ್ಥಮಾಡಿಕೊಂಡಿದ್ದೇವೆ. ಟಾಗೋರ್ ಎಲ್ಲಿ ಜನಿಸಿದರು ಅಥವಾ ವಿದ್ಯಾಸಾಗರ ಪ್ರತಿಮೆಯನ್ನು ಧ್ವಂಸಗೊಳಿಸಿದ ಹೊರಗಿನವರಿಗೆ ಅದು ಅರ್ಥವಾಗುವುದಿಲ್ಲ. ಎಂದು ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದರು.
ನಾನು ಈ ಬಾರಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ಮಾರ್ಚ್ 9ರಂದು ನಂದಿಗ್ರಾಮಕ್ಕೆ ತೆರಳಿ, ಮಾರ್ಚ್ 10ರಂದು ಹಾಲ್ದಿಯಾದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಕಲೆ, ಕ್ರೀಡೆ, ಮಾಧ್ಯಮ ಹಾಗೂ ಸಂಸ್ಕೃತಿ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಗಳಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಲಿದ್ದೇವೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
ತೇಜಸ್ವಿ ಯಾದವ್, ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೆನ್ ಮತ್ತು ಶಿವಸೇನೆ ತಮ್ಮ ಬೆಂಬಲವನ್ನು ಮುಂದುವರೆಸಿರುವುದಕ್ಕೆ ಮಮತಾ ಬ್ಯಾನರ್ಜಿ ಅವರು ಧನ್ಯವಾದ ಅರ್ಪಿಸಿದರು. ಇಂದು ನಾವು 291 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಇದರಲ್ಲಿ 50 ಮಂದಿ ಮಹಿಳೆಯರು, 42 ಮಂದಿ ಮುಸ್ಲಿಮರು, ಎಸ್ಸಿ 79 ಮಂದಿ ಹಾಗೂ ಎಸ್ಟಿ 17 ಮಂದಿ ಇದ್ದಾರೆ. ಉತ್ತರ ಬಂಗಾಳದ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತಿಲ್ಲ. ನಾನು ಮಂದಿಗ್ರಾಮದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಇದನ್ನು ಓದಿ: Assembly Session - ಅಧಿವೇಶನದ ಎರಡನೇ ದಿನವೂ ಕಲಾಪಕ್ಕೆ ಅಡ್ಡಿ; ‘ಅಯ್ಯಯ್ಯೋ ಅನ್ಯಾಯ’ ಎಂದು ಕೈ ಪ್ರತಿಭಟನೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರಗಿಳಿಂದ ಸ್ಪರ್ಧೆ ಮಾಡುವುದಾಗಿ ಮಮತಾ ಬ್ಯಾನರ್ಜಿ ಅವರು ಜನವರಿಯಲ್ಲಿ ಹೇಳಿದ್ದರು. ನಂತರ, ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದ ತೆಖಾಲಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ, “ನಂದಿಗ್ರಾಮ ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಾನು ನನ್ನ ಹೆಸರನ್ನು ಮರೆಯಬಹುದು. ಆದರೆ ನಂದಿಗ್ರಾಮವನ್ನು ನಾನು ಮರೆಯಲು ಸಾಧ್ಯವಿಲ್ಲ. ನಂದಿಗ್ರಾಮದ ಜನರೊಂದಿಗೆ ನಾನು ಹೊಂದಿರುವ ಭಾವನಾತ್ಮಕ ಬಾಂಧವ್ಯವನ್ನು ಪರಿಗಣಿಸಿ, ನಂದಿಗ್ರಾಮದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ