Mamata Banerjee Wins- ಭವಾನಿಪುರ್ ಉಪಚುನಾವಣೆ: ದಾಖಲೆ ಅಂತರದಲ್ಲಿ ಗೆದ್ದ ಮಮತಾ ಬ್ಯಾನರ್ಜಿ

Bhabanipur bypoll: ಸಿಎಂ ಸ್ಥಾನ ಉಳಿಸಿಕೊಳ್ಳಲು ಅಗತ್ಯವಾಗಿದ್ದ ಭವಾನಿಪುರ್ ಉಪಚುನಾವಣೆಯ ಗೆಲುವು ಮಮತಾ ಬ್ಯಾನರ್ಜಿಗೆ ಸಿಕ್ಕಿದೆ. 58 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಬಿಜೆಪಿ ಅಭ್ಯರ್ಥಿಯನ್ನ ಸೋಲಿಸಿದ್ಧಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

 • News18
 • Last Updated :
 • Share this:
  ಕೋಲ್ಕತಾ, ಅ. 03: ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಬಹಳ ಮುಖ್ಯವಾಗಿದ್ದ ಭವಾನಿಪುರ್ ಉಪಚುನಾವಣೆಯ ಫಲಿತಾಂಶ ಘೋಷಣೆ ಆಗಿದೆ. ಮಮತಾ ಬ್ಯಾನರ್ಜಿ ಅವರು ದಾಖಲೆ ಅಂತರದಲ್ಲಿ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ 58 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿಯನ್ನ ಸೋಲಿಸಿದರು. 2011ರಲ್ಲ ಇದೇ ಭಬಾನಿಪುರ್ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು 54,213 ಮತಗಳ ಅಂತರದಿಂದ ಗೆದ್ದಿದ್ದರು. ಹತ್ತು ವರ್ಷಗಳ ಬಳಿಕ ಅವರ ಗೆಲುವಿನ ಅಂತರ ಇನ್ನೂ ಹೆಚ್ಚಾಗಿದೆ.

  ಈ ಗೆಲುವಿನ ಮೂಲಕ ಮಮತಾ ಬ್ಯಾನರ್ಜಿ ಅವರ ಸಿಎಂ ಸ್ಥಾನ ಭದ್ರಗೊಂಡಂತಾಗಿದೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (General Election) ನಂದಿಗ್ರಾಮ (Nandigram) ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಮತಾ ಬ್ಯಾನರ್ಜಿ ಅವರು ಪರಾಭಾವಗೊಂಡರೂ ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷ (Trinamool Congress Party) ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.‌ ವಿಧಾನ ಪರಿಷತ್ (Legislative Council) ಇಲ್ಲದ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಈ ಉಪ ಚುನಾವಣೆ ಗೆದ್ದು ವಿಧಾನಸಭೆ (Assembly) ಪ್ರವೇಶಿಸಲೇಬೇಕಿತ್ತು. ಅದೀಗ ಈಡೇರಿದಂತಾಗಿದೆ. ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಗುರುವಾರ ಮತದಾನ (Voting) ನಡೆದು ಕೇವಲ‌ ಶೇಕಡಾ 57ರಷ್ಟು ಮತ ಚಲಾವಣೆ ಆಗಿತ್ತು.‌

  ಭವಾನಿಪುರದ ಇತಿಹಾಸ:

  ಭವಾನಿಪುರ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ (Kolkata) ಒಂದು ವಿಧಾನಸಭಾ ಕ್ಷೇತ್ರವಾಗಿದೆ. 2011ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ (Delimitations) ಆದ ಬಳಿಕ ಭವಾನಿಪುರ ಕ್ಷೇತ್ರವು ತೃಣಮೂಲ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ (Mamata Banerjee’s Kalighat residence) ನಿವಾಸವು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

  ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ 2011ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ 184 ಸ್ಥಾನಗಳಲ್ಲಿ ಗೆಲುವು ಸಾಧಿಸಿತು ಮತ್ತು 34 ವರ್ಷಗಳ ಲೆಫ್ಟ್ ಫ್ರಂಟ್ (Left Front rule) ಆಡಳಿತವನ್ನು ಕೊನೆಗೊಳಿಸಿತು. ಆ ಸಮಯದಲ್ಲಿ ಮಮತಾ ಬ್ಯಾನರ್ಜಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬ್ಯಾನರ್ಜಿಗೆ ದಾರಿ ಮಾಡಿಕೊಡಲು ಟಿಎಂಸಿ ಶಾಸಕ ಮತ್ತು ಆಗಿನ ಮಂತ್ರಿ ಸುಬ್ರತ ಬಕ್ಷಿ ಸ್ಥಾನವನ್ನು ತ್ಯಜಿಸಿದ್ದರು. ನಂತರ ಮಮತಾ ಬ್ಯಾನರ್ಜಿ ರಾಜ್ಯ ವಿಧಾನಸಭೆಗೆ ಮೊದಲ ಬಾರಿ ಪ್ರವೇಶ ಮಾಡಿದರು. ಆ ಉಪಚುನಾವಣೆಯಲ್ಲಿ ಗೆದ್ದು ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ, ಈಗಲೂ ಮಮತಾ ಬ್ಯಾನರ್ಜಿ‌ ಅವರು ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಭವಾನಿಪುರ ಕ್ಷೇತ್ರದ ಉಪಚುನಾವಣೆಯನ್ನು ಗೆದ್ದಿದ್ದಾರೆ.

  ಅಖಾಡದಲ್ಲಿದ್ದ ಅಭ್ಯರ್ಥಿಗಳು: ಕಾಂಗ್ರೆಸ್ ಪಕ್ಷ ಈ ಉಪಚುನಾವಣೆಗೆ ಅಭ್ಯರ್ಥಿಯನ್ನ ಹಾಕಲಿಲ್ಲ. ಬಿಜೆಪಿಯಿಂದಲೂ ಅಷ್ಟೇನೂ ಪ್ರಬಲವಲ್ಲದ ಅಭ್ಯರ್ಥಿಯನ್ನ ನಿಲ್ಲಿಸಲಾಗಿತ್ತು. ಬಿಜೆಪಿಯ ಪಶ್ಚಿಮ ಬಂಗಾಳ ಯುವ ಘಟಕದ ಯುವ ಅಧ್ಯಕ್ಷರಾದ ಹಾಗೂ 41 ವರ್ಷದ ವಕೀಲರಾದ ಪ್ರಿಯಾಂಕಾ ಟಿಬ್ರೂವಾಲ್ ಅವರನ್ನ ಕಣಕ್ಕಿಳಿಸಿತ್ತು. ನೆಲೆ ಮರಳಿ ಪಡೆಯುವ ಹತಾಶೆಯಲ್ಲಿರುವ ಎಡರಂಗದಿಂದ ಶ್ರೀಜಿಬ್ ಬಿಸ್ವಾಸ್ ಅವರನ್ನ ಕಣಕ್ಕಿಸಲಾಗಿತ್ತು. ಅಷ್ಟೇನೂ ಪ್ರಬಲ ಪೈಪೋಟಿ ಇಲ್ಲದ ಕಣದಲ್ಲಿ ಮಮತಾ ಬ್ಯಾನರ್ಜಿ ಗೆಲವು ನಿರೀಕ್ಷಿತವೇ ಇತ್ತು.

  ಇದನ್ನೂ ಓದಿ: Hypersonic Missile : ಉತ್ತರ ಕೊರಿಯಾ ಹೊಸ ಹೈಪರ್‌ಸಾನಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ - ಕ್ಷಿಪಣಿ ಸಾಮರ್ಥ್ಯದ ಕುರಿತು ಇಲ್ಲಿದೆ ಪ್ರಮುಖ ಮಾಹಿತಿ...

  ಮತದಾನದ ದಿನದ ಅವಘಡ:

  ಮತದಾನದ ದಿನ ಭವಾನಿಪುರ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ ಆಗಿತ್ತು. ಆಡಳಿತ ಪಕ್ಷವು ನಕಲಿ ಮತದಾರರನ್ನು ಮತದಾನ ಕೇಂದ್ರದೊಳಗೆ ಕರೆತರುತ್ತಿದೆ ಎಂಬ ಆರೋಪದ ಮೇಲೆ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಜಗಳ ನಡೆದಿತ್ತು. ಭದ್ರತಾ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದವು. ಈ‌ ಕಲಹಗಳ ಬಗ್ಗೆ ಟಿಎಂಸಿ ಚುನಾವಣಾ ಆಯೋಗಕ್ಕೆ ದೂರನ್ನು ದಾಖಲಿಸಿತ್ತು.‌ ಟಿಬ್ರೂವಾಲ್ 20 ಕಾರುಗಳ ಪರಿವಾರದೊಂದಿಗೆ ಚಲಿಸುತ್ತಿದೆ ಮತ್ತು ಮತದಾರರನ್ನು ಹೆದರಿಸುತ್ತಿದೆ ಎಂದು ಆರೋಪಿಸಲಾಗಿತ್ತು.

  ಬಿಜೆಪಿ ತನ್ನ ಮತಗಟ್ಟೆ ಏಜೆಂಟರಿಗೆ ಹಲವಾರು ಬೂತ್‌ಗಳ ಒಳಗೆ ಪ್ರವೇಶವನ್ನು ಅನುಮತಿಸಲಿಲ್ಲ ಎಂದು ಆರೋಪಿಸಿತ್ತು. ಇನ್ನೊಂದು ಘಟನೆಯಲ್ಲಿ ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಅವರ ಕಾರನ್ನು ಶರತ್ ಬೋಸ್ ರಸ್ತೆಯಲ್ಲಿ ದರೋಡೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಇಸಿಗೆ ವರದಿಯನ್ನು ಸಲ್ಲಿಸಿದ್ದಾರೆ. ನಂತರ ಚುನಾವಣಾ ಆಯೋಗವು ಇದು ರಾಜಕೀಯ ದಾಳಿಯೆಂಬ ಆರೋಪವನ್ನು ತಳ್ಳಿಹಾಕಿತು.

  ಸಂಸರ್‌ಗಂಜ್‌ನಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗುವ ಕೆಲವು ಗಂಟೆಗಳ ಮೊದಲು ಬಾಂಬ್‌ಗಳನ್ನು ಎಸೆಯಲಾಯಿತು. ಕಾಂಗ್ರೆಸ್ ಈ ದಾಳಿ ನಡೆಸಿದೆ ಎಂದು ಟಿಎಂಸಿ ಆರೋಪಿಸಿತ್ತು. ಈ ಆರೋಪವನ್ನು ಕಾಂಗ್ರೆಸ್ ಆಧಾರರಹಿತ ಎಂದು ಹೇಳಿದೆ. ಸಂಸರ್‌ಗಂಜ್ ಕ್ಷೇತ್ರದ ಒಂಬತ್ತು ಬೂತ್‌ಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ. ಚುನಾವಣಾ ಆಯೋಗಕ್ಕೆ ಇದುವರೆಗೆ 97 ದೂರುಗಳು ಬಂದಿದ್ದು, ಅವುಗಳಲ್ಲಿ 91 ದೂರುಗಳನ್ನು ರದ್ದುಗೊಳಿಸಲಾಗಿದೆ. ಈ 97 ದೂರುಗಳಲ್ಲಿ 85 ದೂರುಗಳು ಭವಾನಿಪುರ ಉಪಚುನಾವಣೆಗೆ ಸಂಬಂಧಿಸಿವೆ.

  ಇದನ್ನೂ ಓದಿ: Mumbai Drug Bust: ಹಡಗಿನಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದವರ ಮೇಲೆ ಎನ್​ಸಿಬಿ ದಾಳಿ; ಬಾಲಿವುಡ್ ಸ್ಟಾರ್ ಮಗನ ವಿಚಾರಣೆ

  ಭದ್ರತಾ ವ್ಯವಸ್ಥೆ:

  ಇವತ್ತಿನ ಮತ ಎಣಿಕೆಗೆ ಚುನಾವಣಾ ಆಯೋಗ ಬಿಗಿ ಭದ್ರತೆಯ ವ್ಯವಸ್ಥೆ ಮಾಡಿತ್ತು. ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಿದ್ದು, 24 ಕಂಪನಿಗಳ ಕೇಂದ್ರ ಪಡೆಗಳನ್ನು ಕರೆಸಿಕೊಳ್ಳಲಾಗಿತ್ತು. ಮತ ಎಣಿಕೆ ಕೇಂದ್ರಗಳಲ್ಲಿ ಅಧಿಕಾರಿಗಳಿಗೆ ಪೆನ್ ಮತ್ತು ಪೇಪರ್ ಅನ್ನು ಮಾತ್ರ ಅನುಮತಿಸಲಾಗಿತ್ತು. ಅಲ್ಲದೆ ರಿಟರ್ನಿಂಗ್ ಆಫೀಸರ್ ಮತ್ತು ವೀಕ್ಷಕರಿಗೆ ಮಾತ್ರ ಫೋನ್ ಬಳಸಲು ಅವಕಾಶವಿತ್ತು. ‌ಎಲ್ಲಾ ಅಧಿಕಾರಿಗಳು ಮತ್ತು ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವಾಗ ಕೋವಿಡ್ -19 ನೆಗೆಟಿವ್ ಪ್ರಮಾಣಪತ್ರವನ್ನು ಹಾಜರುಪಡಿಸಬೇಕಿತ್ತು.
  Published by:Vijayasarthy SN
  First published: